ದಾವಣಗೆರೆ: ಮಹಾಮಾರಿ ಕೋವಿಡ್ ಹಾವಳಿ ಭೀತಿಯ ನಡುವೆಯೇ ಗುರುವಾರದಿಂದ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ದಿನದ ಆಂಗ್ಲ ಭಾಷಾ ಪರೀಕ್ಷೆಗೆ 20,554 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಗೆ ನೋಂದಣಿ ಮಾಡಿಸಿದ್ದ 21,577 ವಿದ್ಯಾರ್ಥಿಗಳಲ್ಲಿ 1,023 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕೋವಿಡ್ ಪಾಸಿಟವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಹಲವಾರು ಪ್ರದೇಶ, ಏರಿಯಾಗಳನ್ನು ಜಿಲ್ಲಾಡಳಿತ ಕಂಟೇನ್ಮೆಂಟ್ ಝೋನ್ ಮಾಡಿದೆ. ಕಂಟೇನ್ಮೆಂಟ್‌ಗಳಲ್ಲಿನ 96 ವಿದ್ಯಾರ್ಥಿಗಳ ಪೈಕಿ 64 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮನೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದರಿಂದ ಚನ್ನಗಿರಿಯ ಓರ್ವ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಪೂರಕ ಪರೀಕ್ಷೆಯನ್ನೇ ಪ್ರಥಮ ಪರೀಕ್ಷೆಯಾಗಿ ಪರಿಗಣಿಸುವುದಾಗಿ ತಿಳಿಸಲಾಯಿತು.
ಅನಾರೋಗ್ಯ ಕಾರಣದಿಂದ ಓರ್ವ ವಿದ್ಯಾರ್ಥಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. 412 ವಲಸೆ ವಿದ್ಯಾರ್ಥಿಗಳಲ್ಲಿ 404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 8 ವಿದ್ಯಾರ್ಥಿಗಳು ಗೈರಾಗಿದ್ದರು. ವಸತಿ ಶಾಲೆಯಲ್ಲಿನ 667 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನೆರೆ ರಾಜ್ಯಗಳ ಯಾವುದೇ ವಿದ್ಯಾರ್ಥಿ ಪರೀಕ್ಷೆ ತೆಗೆದುಕೊಂಡಿಲ್ಲ. ಸರ್ಕಾರಿ, ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು.ಪರೀಕ್ಷೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ತಿಳಿಸಿದ್ದಾರೆ.
ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆಗತ್ಯ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿತ್ತು. ಎಲ್ಲಾ ಪರೀಕ್ಷಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಸ್ಯಾನಿಟೈಸೇಷನ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧಾರಣೆಯನ್ನ ಪರೀಕ್ಷೆ ಮಾಡಲಾಯಿತು. ಕೇಂದ್ರದ ಒಳಗೂ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿತ್ತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದಾವಣಗೆರೆ ನಗರದ ಮೋತಿ ವೀರಪ್ಪ ಸರ್ಕಾರಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಭಯ, ಆತಂಕ ಇಲ್ಲದೆ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು.