ದಾವಣಗೆರೆ: ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂಬುದಾಗಿ ಚಿದಾನಂದ ಗೌಡ ಪ್ರಚಾರ ಮಾಡುತ್ತಿರುವುದು ಸರಿ ಅಲ್ಲ ಎಂದು ಬಿಜೆಪಿಯ ಎಂಟು ಜನ ಟಿಕೆಟ್ ಆಕಾಂಕ್ಷಿತರು ದೂರಿದ್ದಾರೆ.
ಡಾ| ಜಿ.ಮಂಜುನಾಥ್‌ಗೌಡ ಮತ್ತು ಚಿದಾನಂದಗೌಡ ಹೆಸರನ್ನು ಕೇಂದ್ರ ಸಮಿತಿಗೆ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಲ್ಪಟ್ಟ ಕಾರಣಕ್ಕೆ ಯಾರನ್ನೂ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿಲ್ಲ. ಆದರೂ, ಚಿದಾನಂದ ಗೌಡ ತಾವೇ ಅಧಿಕೃತ ಅಭ್ಯರ್ಥಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರಿಗೆ ಬೆಂಬಲವಾಗಿ ಪ್ರಚಾರ ನಡೆಸುತ್ತಿರುವುದು ನೋವಿನ ವಿಚಾರ ಎಂದು ಆಕಾಂಕ್ಷಿಗಳಲ್ಲಿ ಒಬ್ಬರಾದ ಕೊಂಡಜ್ಜಿ ಜಯಪ್ರಕಾಶ್ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಚಿದಾನಂದಗೌಡ ಅವರಿಗೆ ಬೆಂಬಲವಾಗಿ ವೈ.ಎ.ನಾರಾಯಣ ಸ್ವಾಮಿ ಸಹ ಪ್ರಚಾರ ಮಾಡುವ ಮೂಲಕ ಮತದಾರರು, ಕಾರ್ಯಕರ್ತರು ಎಲ್ಲರಲ್ಲೂ ಗೊಂದಲಕ್ಕೆ ಕಾರಣವಾಗುತ್ತಿದ್ದಾರೆ. ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಪ್ರಚಾರ ನಡೆಸುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ಯಾವುದೇ ಅಂತಿಮವಾಗದೇ ಇದ್ದರೂ ಪ್ರಚಾರ ಮಾಡುತ್ತಿರುವುದು ಪಕ್ಷದ ತತ್ವ, ಸಿದ್ಧಾಂತ ನಂಬಿರುವ, ಹೋರಾಟದ ಹಿನ್ನೆಲೆಯಿಂದ ಬಂದವರಿಗೆ ನೋವಾಗುತ್ತದೆ. ಈಗಿನ ತೀರ್ಮಾನ ಮರುಪರಿಶೀಲಿಸಿ ನಮ್ಮ 8 ಜನರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆಂದು ತಿಳಿಸಿದರು.
ಡಾ| ಜಿ. ಮಂಜುನಾಥ್ ಗೌಡ ಮಾತನಾಡಿ, ತಮ್ಮೊಡನೆ ಚಿದಾನಂದ ಗೌಡರ ಹೆಸರನ್ನು ಸಹ ಶಿಫಾರಸು ಮಾಡಲಾಗಿದೆ. ಅವರು ಅಧಿಕೃತ ಅಭ್ಯರ್ಥಿ ಎಂಬುದಾಗಿ ರಾಜ್ಯ, ರಾಷ್ಟ್ರದ ಕೋರ್ ಸಮಿತಿ ಪ್ರಕಟಿಸಿಲ್ಲ. ಅವರೇ ಒಂದು ಕಡೆ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಹೇಳಿಕೊಂಡಿದ್ದಾರೆ. ಆದರೂ, ನಾರಾಯಣಸ್ವಾಮಿ ಚಿದಾನಂದಗೌಡ ಅಧಿಕೃತ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರುವುದು ಏಕೆಂಬುದೇ ಗೊತ್ತಾಗುತ್ತಿಲ್ಲ. ನಾವು ಸಹ ನಮಗೆ ಬೇಕಾದ ಶಾಸಕರು, ಸಂಸದರ ಕರೆದುಕೊಂಡು ಅಧಿಕೃತ ಅಭ್ಯರ್ಥಿ ಎಂದು ಪ್ರಚಾರ ಮಾಡಬಹುದಿತ್ತು. ಅದರಿಂದ ಪಕ್ಷ, ಕಾರ್ಯಕರ್ತರು, ಮತದಾರರಲ್ಲಿ ಗೊಂದಲ ಆಗುತ್ತದೆ. ಅಂತಹ ಕೆಲಸ ಮಾಡಲು ಬಯಸಲ್ಲ. ನನಗೇ ಟಿಕೆಟ್ ಕೊಡಬೇಕೆಂದು ಅವರು ಒತ್ತಾಯಿಸಿದರು.
ಡಾ| ಆನಂದ್ ಶಿರಿಹ್ಯಾಳ್ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಈವರೆಗೆ ನೋಂದಣಿಯಾಗಿರುವ 1.08 ಲಕ್ಷ ಮತದಾರರಲ್ಲಿ ನಾವು 8 ಜನ ಆಕಾಂಕ್ಷಿತರು ಸೇರಿ 80-90 ಸಾವಿರದಷ್ಟು ಮತದಾರರ ನೋಂದಣಿ ಮಾಡಿಸಿದ್ದೇವೆ. ಆದರೂ, ಚಿದಾನಂದಗೌಡ ತಾವೇ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಂದೊಮ್ಮೆ ಅವರಿಗೇನಾದರೂ ಟಿಕೆಟ್ ನೀಡಿದಲ್ಲಿ ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ. ಚಿದಾನಂದಗೌಡ , ವೈ.ಎ.ನಾರಾಯಣಸ್ವಾಮಿ ಪ್ರಚಾರ ಮಾಡುತ್ತಿರುವ ಬಗ್ಗೆ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಡಾ| ಹಾಲನೂರು ಎಸ್. ಲೇಪಾಕ್ಷ ಮಾತನಾಡಿ, ಕಳೆದ ಚುನಾವಣೆಯಲ್ಲಿ ತಮಗೆ ಎ ಮತ್ತು ಬಿ ಫಾರಂ ನೀಡಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಹೇಳಿದ ಮಾತು ಮತ್ತು ನೀಡಿದ ಭರವಸೆಯಂತೆ ವೈ.ಎ.ನಾರಾಯಣ ಸ್ವಾಮಿಗೆ ಬಿ ಫಾರಂ ನೀಡಬೇಕಾಯಿತು. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸ ಇದೆ ಎಂದರು. ಎಚ್.ಎನ್.ಶಿವಕುಮಾರ್, ಪಿ.ಆರ್.ಬಸವರಾಜ್ (ಪೆಪ್ಸಿ), ಸಿ.ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿದ್ದರು.
ಚಿದಾನಂದ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ಗೆ ಯತ್ನಿಸಿದ್ದರು. ಟಿಕೆಟ್ ದೊರೆಯದೆ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ 3 ಸಾವಿರ ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದು ಒಂದು ವರ್ಷವೂ ಆಗಿಲ್ಲ. ಅಂತಹವರಿಗೆ ನಾರಾಯಣ ಸ್ವಾಮಿ ಮಣೆ ಹಾಕುತ್ತಿರುವುದು ಎಷ್ಟು ಸರಿ?
ಡಾ| ಆನಂದ್ ಶಿರಿಹ್ಯಾಳ್,
ಬಿಜೆಪಿ ಟಿಕೆಟ್ ಆಕಾಂಕ್ಷಿ