ದಾವಣಗೆರೆ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ್, ಕಾಲಮಿತಿಯೊಳಗೆ ಮುಗಿಸದೇ ಇದ್ದರೆ ದಂಡ ವಿಧಿಸಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಗರದ ವಿವಿಧೆಡೆ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳ ತಂಡದೊಂದಿಗೆ ಬುಧವಾರ ವೀಕ್ಷಿಸಿದ ಅವರು, ಯಾವ್ಯಾವ ಕಾಮಗಾರಿ ಯಾವ ದಿನ ಆರಂಭವಾಗಿದೆ. ಎಷ್ಟು ಕಾಲಮಿತಿ ನಿಗದಿಪಡಿಸಲಾಗಿದೆ ಎನ್ನುವ ಮಾಹಿತಿ ಪಡೆದು, ನಿಗದಿತ ಕಾಲದೊಳಗೆ ವರ್ಕ್ ಮುಗಿಸದೇ ಇದ್ದರೆ ಪೆನಾಲ್ಟಿ ಹಾಕಿ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 12.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಕಟ್ಟಡ ಕಾಮಗಾರಿ ವೀಕ್ಷಿಸಿದ ಸಂಸದರು, 2018ರ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿದೆ. 2019ರ ನವಂಬರ್ ಗೆ ಮುಗಿಸಬೇಕಿತ್ತಲ್ಲ ಎಂದು ಪ್ರಶ್ನಿಸಿದರು. ಆಗ, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಿರಂತರ ಮಳೆಯ ಕಾರಣ ಕಾಮಗಾರಿ ವೇಗವಾಗಿ ಮಾಡಲಾಗಲಿಲ್ಲ, ಈಗ ಕಾಮಗಾರಿ ಚುರುಕುಗೊಳಿಸಲಾಗಿದೆ ಎಂದರು.
ಮೇ ತಿಂಗಳ ಒಳಗೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರ ಭರವಸೆ ನೀಡಿದರು. ಹೊಂಡ ವೃತ್ತದ ಬಳಿ ಸಮುದಾಯ ಭವನ ಹಾಗೂ ಕಲ್ಯಾಣಿ ಪುನರ್ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಸಕಾಲಕ್ಕೆ ಕೆಲಸ ಮುಗಿಸಿ, ಒಪ್ಪಿಸದಿದ್ದರೆ ಪೆನಾಲ್ಟಿ ಬೀಳಲಿದೆ ಎಂದು ಸಂಸದ ಸಿದ್ದೇಶ್ವರ್ ಎಚ್ಚರಿಸಿದರು.
ಡಿಸೆಂಬರ್ ಗಡುವು: ಕಾಮಗಾರಿ ವೀಕ್ಷಣೆ ನಂತರ ಹೊಂಡ ವೃತ್ತದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಮೂರು ವರ್ಷದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಒಟ್ಟು 396 ಕೋಟಿ ರೂ. ಬಿಡುಗಡೆ ಆಗಿದೆ. ಈವರೆಗೂ 136 ಕೋಟಿ ರೂ. ಖರ್ಚು ಮಾಡಲಾಗಿದೆ. ಈಗ ಕಾಮಗಾರಿ ವೀಕ್ಷಿಸಲಾಗಿದ್ದು, ಚುರುಕುಗೊಳಿಸಲು ಸೂಚನೆ ನೀಡಲಾಗಿದೆ. 2020ರ ಡಿಸೆಂಬರ್ ಹೊತ್ತಿಗೆ ಎಲ್ಲ ಕಾಮಗಾರಿ ಮುಗಿಸಬೇಕು. ಬಿಡುಗಡೆ ಆಗಿರುವ ಹಣ ಖಾಲಿ ಮಾಡಿ ಬಳಕೆ ಪ್ರಮಾಣ ಪತ್ರ ನೀಡಿದರೆ ಮಾತ್ರ ಎರಡನೇ ಕಂತಿನ ಅನುದಾನ ಬರಲಿದೆ. ಕಮಾಂಡ್ ಸೆಂಟರ್ ಕಾಮಗಾರಿಗೆ ಬಳಸಿರುವ ಕಬ್ಬಿಣ ತುಕ್ಕು ಹಿಡಿದಂತಿದೆ. ಕ್ಲೀನ್ ಮಾಡಿ ಬಳಸಿ. ಕ್ವಾಲಿಟಿ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ, ದೂಡಾ ಆಯುಕ್ತ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಎಂಡಿ ಮೂವರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿಗಳು ಆದಷ್ಟು ವೇಗ ಪಡೆದುಕೊಳ್ಳಲಿವೆ ಎಂದು ಅವರು ಹೇಳಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ ಮುದಜ್ಜಿ, ಮುಖ್ಯ ಎಂಜಿನಿಯರ್ ಸತೀಶ್, ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿದ್ದರು.