Advertisement

ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಕಿರಿಕಿರಿ ಸಲ್ಲ

11:25 AM Jan 24, 2020 | Naveen |

ದಾವಣಗೆರೆ: ಸಣ್ಣ ಕೈಗಾರಿಕೆಗಳ ಪ್ರೋತ್ಸಾಹಿಸಲು ಅವುಗಳ ಸ್ಥಾಪನೆಗೆ ಯಾವುದೇ ತೊಂದರೆ, ತೊಡುಕು ಉಂಟು ಮಾಡದೇ ಸಕ್ಷಮ ಪ್ರಾಧಿಕಾರಗಳು ನಿರಾಪೇಕ್ಷಣಾ ಪತ್ರ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.

Advertisement

ಗುರುವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಮತ್ತು ಕೈಗಾರಿಕಾ ಸ್ಪಂದನ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಸ್ಥಳೀಯವಾಗಿ ಉದ್ಯೋಗ ಒದಗಿಸುವ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಬೇಕಿದೆ. ವಿವಿಧ ಸಂಸ್ಥೆಗಳು, ಇಲಾಖೆಗಳು ಸಣ್ಣ ಕೈಗಾರಿಕೆ ಸ್ಥಾಪನೆಗೆ ಯಾವುದೇ ರೀತಿ ತೊಂದರೆ ನೀಡದಂತೆ ಎನ್‌ಓಸಿ ನೀಡಿ ಸಹಕರಿಸಬೇಕು. ಯಾರಾದರೂ ಎನ್‌ಓಸಿ ನೀಡಲು ತೊಂದರೆ ನೀಡಿದಲ್ಲಿ ಅಥವಾ ಏನಾದರೂ ಬೇಡಿಕೆ ಇಟ್ಟರೆ
ತಮಗೆ ಅಥವಾ ಜಿಪಂ ಸಿಇಓ ಗಮನಕ್ಕೆ ತರಲು ಸಣ್ಣ ಕೈಗಾರಿಕೋದ್ಯಮಿಗಳಿಗೆ ತಿಳಿಸಿದರು.
ಮೆ| ಬೊಂದಾಡೆ ಇಂಡಸ್ಟ್ರೀಸ್‌ ಮಾಲೀಕ ಸಾವನ್‌. ಎಸ್‌ ಬೊಂದಾಡೆ ಅವರಿಗೆ ಹನಗವಾಡಿ 1ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 2019ರ ಏ.5 ರೊಳಗೆ ಕಟ್ಟಡ ನಿರ್ಮಿಸಿ, ತಮ್ಮ ಯೋಜನೆ ಅನುಷ್ಠಾನಗೊಳಿಸಲು ಸೂಚಿಸಲಾಗಿತ್ತು. ಅಲ್ಲಿ ಘಟಕ ಪ್ರಾರಂಭಿಸದೇ ಯೋಜನೆ ಅನುಷ್ಠಾನಕ್ಕೆ ಒಂದು ವರ್ಷ ಕಾಲಾವಕಾಶ ಕೋರಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಬಿ.ಕೆ.ಮಂಜುನಾಥ್‌ ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನಿಯಮಾನುಸಾರ ದಂಡ ಪಾವತಿಸಿ, ಯೋಜಿತ ಘಟಕವನ್ನು ಆದಷ್ಟು ಶೀಘ್ರವಾಗಿ ಆರಂಭಿಸುವಂತೆ ತಿಳಿಸಿ, ಕಾಲಾವಕಾಶ ನೀಡಿದರು. ಹರಿಹರ ತಾಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಸರ್ಕಾರದ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸಣ್ಣ ಕೈಗಾರಿಕೆ ಸ್ಥಾಪಿಸಲು ಸಿ ಮತ್ತು ಡಿ ಮಾದರಿ ಮಳಿಗೆಗಳನ್ನು ಅರ್ಹರಿಗೆ ನೀಡಲು ಜಿಲ್ಲಾಧಿಕಾರಿ ಅನುಮೋದನೆ ನೀಡಿದರು.

ಹೊಸ ಕೈಗಾರಿಕೆಗಳ ಪ್ರಸ್ತಾವನೆ: ದೊಡ್ಡಬಾತಿ ಗ್ರಾಮದಲ್ಲಿ ಮೆ| ಹೈಜಿನ್‌ ಇಂಡಿಯಾದವರು ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಕೆ ಘಟಕ, ಮೆ| ಶೌರ್ಯ ಗಾರ್ಮೆಂಟ್ಸ್‌ ಮತ್ತು ಫ್ಯಾಬ್ರಿಕ್ಸ್‌ ಟೆಕ್ಸ್‌ಟೆಲ್‌ ನವರು ಬೆಂಕಿಕೆರೆಯಲ್ಲಿ ಸಿದ್ಧ ಉಡುಪು ತಯಾರಿಕೆ ಮತ್ತು ವೀವಿಂಗ್‌ ಘಟಕ ಸ್ಥಾಪನೆಗೆ, ಕಲ್ಲೇಶ್ವರ ಗಾರ್ಮೆಂಟ್ಸ್‌ನವರು ಕಾರಿಗನೂರಿನಲ್ಲಿ ಮತ್ತು ನವದುರ್ಗ ಎಂಟರ್‌ ಪ್ರೈಸಸ್‌ನವರು ಶಾಮನೂರಿನಲ್ಲಿ ಸಿದ್ಧ ಉಡುಪು ಮತ್ತು ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಕೆ ಘಟಕ, ನೇಕಾರರ ವಿಶೇಷ ಪ್ಯಾಕೇಜ್‌ ಯೋಜನೆಯ ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿ ವಿವಿಧ ಪ್ರೋತ್ಸಾಹ ಮತ್ತು ರಿಯಾಯಿತಿ ಸೌಲಭ್ಯ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳಿಂದ ಕೈಗಾರಿಕೆ ಸ್ಥಾಪನೆಗೆ ನಿರಾಕ್ಷೇಪಣೆ ಪತ್ರ ಪಡೆಯಲು ಅನುಮತಿಗೆ ಸಲ್ಲಿಸಿದ್ದು, ಈ ಘಟಕಗಳ ಸ್ಥಾಪನೆಗೆ ಶೀಘ್ರ ಎನ್‌ಓಸಿ ನೀಡಬೇಕೆಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಅಧಿನಿಯಮ 109ರಡಿಯಲ್ಲಿ ಭೂ ಪರಿವರ್ತನೆಗಾಗಿ ಕಾರಿಗನೂರು ಕ್ಯಾಂಪ್‌ನಲ್ಲಿ ಮಾಲೀಕ
ಬಿ.ರಾಮರಾಜು ಅಡಿಕೆ ಸಂಸ್ಕರಣ ಘಟಕ ಸ್ಥಾಪಿಸಲು ಹಾಗೂ ಶಿವಕುಮಾರ್‌ ಡಿ.ಇ. ಎಂಬುವರು ಕೃಷಿ ಯಂತ್ರ ಉಪಕರಣಗಳ ತಯಾರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಕೆಲವರು ಸಬ್ಸಿಡಿಗಾಗಿ ಅಡಿಕೆ ಸಂಸ್ಕರಣ ಘಟಕಕ್ಕಾಗಿ ಅನುಮತಿ ಪಡೆದು, ನಂತರ ಅದನ್ನು ಬೇರೆ ಉದ್ದೇಶಕ್ಕೆ ಬಳಸುತ್ತಾರೆ ಎಂಬ ದೂರುಗಳು ಇವೆ. ಆದ್ದರಿಂದ ಉದ್ದೇಶಿತ ಯೋಜನೆಗೆ ಹೊರತಾಗಿ ಬೇರೆ ಉದ್ದೇಶಗಳಿಗೆ ಭೂಮಿ ಬಳಕೆ, ಯೋಜನೆ ಬದಲಾವಣೆ ಸೇರಿದಂತೆ ಇತರೆ ಬದಲಾವಣೆಗಳನ್ನು ಪರಿಶೀಲಿಸಲು ಒಂದು ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಪಿಎಂಇಜಿಪಿ ಯೋಜನೆಯಡಿ ಡಿಐಸಿಯಿಂದ ವಾರ್ಷಿಕ ಗುರಿ 48ಕ್ಕೆ 1405 ಅರ್ಜಿ ಸ್ವೀಕೃತವಾಗಿದ್ದು ಆಯ್ಕೆಯಾದ 299 ಅರ್ಜಿಗಳನ್ನು ಬ್ಯಾಂಕ್‌ಗೆ ಕಳುಹಿಸಲಾಗಿದೆ. ಇದರಲ್ಲಿ 38 ಅರ್ಜಿದಾರರಿಗೆ 108.12 ಲಕ್ಷ ರೂ. ಮಂಜೂರಾತಿ ಸಿಕ್ಕಿದೆ. ಕೆವಿಐಬಿಯ 26 ಗುರಿಗೆ 13, ಕೆವಿಐಸಿಯ 38 ಗುರಿಗೆ 8 ಮಾತ್ರ ಮಂಜೂರಾಗಿವೆ. ಸಿಎಂಇಜಿಪಿ ಯೋಜನೆಯಡಿ ಡಿಐಸಿ ಯ 50 ಗುರಿಗೆ 7, ಕೆವಿಐಬಿ ಯ 33 ಗುರಿಗೆ 4 ಅರ್ಜಿಗಳು ಮಾತ್ರ ಮಂಜೂರಾತಿ ಪಡೆದಿದ್ದು, ನಿಗದಿತ ಗುರಿ ತಲುಪಲು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಸುಶೃತ ಪ್ರತಿಕ್ರಿಯಿಸಿ, ನಿಗದಿತ ಗುರಿ ತಲುಪಲು ಬ್ಯಾಂಕ್‌ವಾರು ಮಾಹಿತಿ ಪಡೆದು ಫಾಲೋಅಪ್‌ ಮಾಡುತ್ತಿದ್ದೇವೆ. ಕೆಲವು ದಾಖಲಾತಿಗಳು ಬಾರದೇ ಇರುವುದರಿಂದ ಹಲವರ ಮಂಜೂರಾತಿ ಬಾಕಿ ಇದೆ. 15-20 ದಿನಗಳಲ್ಲಿ ಅರ್ಜಿದಾರರಿಂದ ದಾಖಲೆ ಪಡೆದು ಮಂಜೂರಾತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next