Advertisement

ನೋಟ ಹೃದಯದ ಜ್ಞಾನ ಆಗಲಿ

11:58 AM Jan 12, 2020 | Naveen |

ದಾವಣಗೆರೆ: ಇಂದ್ರಿಯದಿಂದ ಆಗುವ ಉಪಟಳ, ವಿಷಯ ಲಂಪಟತೆ, ಉನ್ಮಾದತೆ, ಮದೋನ್ಮತ್ತತೆಯ ನಿಯಂತ್ರಣಕ್ಕೆ ಕಣ್ಣುಗಳಿಗೆ ಶಿಕ್ಷಣ ನೀಡಬೇಕು ಅಂದರೆ ನೋಡುವ ದೃಷ್ಟಿ ಬದಲಾಯಿಸಿಕೊಳ್ಳಬೇಕು ಎಂದು ಚಿತ್ರದುರ್ಗದ ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

Advertisement

ಶಿವಯೋಗಿ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 63ನೇ ಸ್ಮರಣೋತ್ಸವ, ಸಹಜ ಶಿವಯೋಗ, ಶರಣ ಸಂಸ್ಕೃತಿಯ ಶನಿವಾರ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ರಕ್ಷಣೆ, ಒಳಿತಿಗಾಗಿ ಕಣ್ಣುಗಳ ನೋಟವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಈಚಿನ ದಿನಗಳಲ್ಲಿ ಅತ್ಯಾಚಾರ ಎನ್ನುವುದು ಮನೆಯ ಮಾತು, ಜನಜನಿತವಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯೇ ಬಹು ದೊಡ್ಡ ಸಮಸ್ಯೆ ಎನ್ನುವಂತಾಗುತ್ತಿದೆ. ನೋಡುವಂತಹ ನೋಟವೇ ವಿಚಿತ್ರ, ವಿಕಾರ ಆಗುತ್ತಿದೆ. ಜಗತ್ತನ್ನ ನೋಡುವಂತಹ ನೋಟವೇ ಹಾಳಾಗುತ್ತಿದೆ. ಸಮಾಜವನ್ನ ನೋಡುವಂತಹ ಕಣ್ಣುಗಳೇ ವಿಕಾರ ಸದೃಶ್ಯವಾದರೆ ಸಮಾಜ ಅಧೋಗತಿ ಆಗುತ್ತದೆ ಎಂದು ಎಚ್ಚರಿಸಿದರು.

ಕಣ್ಣುಗಳಲ್ಲಿನ ಕಸ, ವಿಕಾರ, ದ್ವೇಷವನ್ನು ಹೊರಗಡೆ ಹಾಕುವುದಾದರೆ ಬಸವಾದಿ ಶರಣರು ಹೇಳುವಂತೆ ಪರ ವಧು ಮಹಾದೇವಿಯಂತೆ ಕಾಣುತ್ತಾರೆ. ನಮ್ಮದು ಅಪ್ಪ-ಅವ್ವ- ಅಯ್ಯ ಸಂಸ್ಕೃತಿ. ಅಂತಹ ಸಂಸ್ಕೃತಿಗೆ ಒಳಗಡೆಯಾದರೆ ನಮ್ಮನ್ನು ಮಾತ್ರವಲ್ಲ ನಮ್ಮ ಸಂಸ್ಕೃತಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

12ನೇ ಶತಮಾನದಲ್ಲೇ ಬಸವಾದಿ ಶರಣರು ಕಣ್ಣುಗಳ ನೋಟವನ್ನ ನಿಯಂತ್ರಣ ಮಾಡುವ ಬಗ್ಗೆ ಹೇಳಿದ್ದರು. ಅಕ್ಕಮಹಾದೇವಿ, ಕಣ್ಣುಗಳ ಶೃಂಗಾರವೆಂದರೆ ಗುರು ಹಿರಿಯರನ್ನ ನೋಡುವುದು ಎಂದಿದ್ದಾರೆ. 12ನೇ ಶತಮಾನದ ಬಸವಾದಿ ಶರಣರ ಸಂಸ್ಕಾರಯುತವಾದ ಮಾರ್ಗ ವಿಕಾರವಾಗದು. ಶೃಂಗಾರ, ಅಲಂಕಾರ ವಿಕಾರ ಸದೃಶ್ಯವಾಗುತ್ತದೆ ಎಂದು ತಿಳಿಸಿದರು.

Advertisement

ನಮ್ಮನ್ನು ಒಳ್ಳೆಯ ಸಂಸ್ಕೃತಿಯತ್ತ ಕರೆದೊಯ್ಯುವ ಕಣ್ಣುಗಳ ನೋಟ ಹೃದಯದ ಜ್ಞಾನ ಆಗಬೇಕು. ನಮ್ಮ ಕಣ್ಣುಗಳು ತಪ್ಪಿ ನೋಡುವಂತಹ ಮಾರಿಯನ್ನ ಹೊರ ಹಾಕುವ ಮೂಲಕ ಮಹಾಂತರಾಗಬೇಕು. ಇಲ್ಲದೇ ಹೋದರೆ ಬದುಕು ಮಂಗಾಟ, ಭಂಡಾಟ, ಹುಚ್ಚಾಟ ಆಗುತ್ತದೆ ಎಂದು ಎಚ್ಚರಿಸಿದರು.

21ನೇ ಶತಮಾನದಲ್ಲಿ ಆಚಾರ್ಯತ್ರಯರುಗಳಲ್ಲಿ ಒಂದಾದ ಹಿಂಸಾಚಾರ ಎನ್ನುವುದು ಮನೆಯಿಂದ ಜಾಗತಿಕ ಮಟ್ಟದವರೆಗೆ ವ್ಯಾಪಕವಾಗಿ ಕಂಡು ಬರುತ್ತಿದೆ. ಈಗ ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಆವರಿಸಿಕೊಳ್ಳುತ್ತಿದೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಆಕ್ರಮಣಕ್ಕೆ ಕಾಯುತ್ತಿದೆ. ಹಿಂಸಾಚಾರ ತಡೆಗಟ್ಟಬೇಕು. ಶಾಂತಿ, ನೆಮ್ಮದಿಯತ್ತ ಗಮನ ನೀಡಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಕಲಿಕಾ ಕೇಂದ್ರಗಳಾದ ವಿಶ್ವವಿದ್ಯಾಲಯಗಳಲ್ಲೂ ದೌರ್ಜನ್ಯ, ಗೂಂಡಾಯಿಸಂ ಕಂಡು ಬರುತ್ತಿರುವುದು, ಹಿಂಸೆ ಪ್ರವೇಶ ಮಾಡುತ್ತಿರುವುದು ಅತ್ಯಂತ ಅನಾರೋಗ್ಯಕರ ಪರಿಸರ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಗಂಡ-ಹೆಂಡತಿ, ಗುರು-ಶಿಷ್ಯರು ನಡುವೆಯೇ ಅತ್ಯಂತ ವ್ಯವಸ್ಥಿತವಾಗಿ ಬ್ಲಾಕ್‌ವೆುàಲ್‌ ನಡೆಯುತ್ತಿದೆ ಎಂದು ತಿಳಿಸಿದರು.

ಬಸವಣ್ಣ ಎಂದರೆ ಒಳಗೊಳ್ಳುವಿಕೆ ಎಂದರ್ಥ. ಜಯದೇವ ಸ್ವಾಮೀಜಿಯವರು ಸಹ ಎಲ್ಲ ಸಮಾಜ, ಧರ್ಮದವರನ್ನು ಹತ್ತಿರಕ್ಕೆ ಕರೆದುಕೊಳ್ಳುವ ಹೃದಯವಂತಿಕೆ ತೋರಿದವರು. 21ನೇ ಶತಮಾನದಲ್ಲೂ ಮುರುಘಾ ಮಠ ಅಂತಹ ಕೆಲಸ ಮಾಡುತ್ತಿದೆ. ಧಾರ್ಮಿಕ ಮಠಗಳು ಬರೀ ಪೂಜೆ, ಪುನಸ್ಕಾರಕ್ಕೆ ಸೀಮಿತ ಆಗಬಾರದು. ಸಮಾಜಮುಖೀ ಆಗಬೇಕು ಎಂದು ತಿಳಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಹಿರಿಯ ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿದರು. ಮಣಕವಾಡ ಶ್ರೀ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿರಕ್ತ ಮಠದ ಚರಮೂರ್ತಿ ಶ್ರೀ ಬಸವಪ್ರಭು ಸ್ವಾಮೀಜಿ, ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ, ಶಾಸಕ ಎಸ್‌.ಎ. ರವೀಂದ್ರನಾಥ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮಹಾ ನಗರ ಪಾಲಿಕೆ ಸದಸ್ಯ ಬಿ.ಜಿ.ಅಜಯ್‌ ಕುಮಾರ್‌, ಕಲಬುರುಗಿಯ ಶರಣು ಪಪ್ಪಾ, ಕಲರ್‌ ಸೂಪರ್‌ ವಾಹಿನಿ ಕನ್ನಡ ಕೋಗಿಲೆ ಸ್ಪರ್ಧೆ ವಿಜೇತ ಖಾಸಿಂ, ನೀತು ಸುಬ್ರಹ್ಮಣ್ಯ, ಪಾಪ ಪಾಂಡು ಖ್ಯಾತಿಯ ಚಿದಾನಂದ್‌ ಇತರರು ಇದ್ದರು.

ಶಾಮನೂರು ಪುಷ್ಪಾ ಮಹಾಲಿಂಗಪ್ಪ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ನಿಖೀತಾ, ಸಿದ್ದಗಂಗಾ ಶಾಲೆಯ ಎಸ್‌ .ವಿ. ಕಲ್ಲೇಶ್‌, ಬಿಲ್ಲಾಳದ ವಿಜಯಲಕ್ಷ್ಮಿ ಕೋರಿ, ಪಾರ್ವತಿ ಚೆಟ್ಟಿ ಅವರಿಗೆ ಶ್ರೀ ಜಯದೇವ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಮತಿ ಜಯ್ಯಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next