Advertisement

ವಿದ್ಯಾರ್ಥಿಗಳಿಲ್ಲದೆ ಶಾಲಾ ಆವರಣ ಭಣ ಭಣ

11:32 AM Jun 10, 2020 | Naveen |

ದಾವಣಗೆರೆ: ಢಣ ಢಣ ಗಂಟೆ ಬಾರಿಸುತ್ತಿದ್ದಂತೆ ಓಹೋ ಎಂದು ಓಡುತ್ತಿದ್ದ ವಿದ್ಯಾರ್ಥಿಗಳ ದಂಡು, ಸಾಮೂಹಿಕ ಪ್ರಾರ್ಥನೆ ನಂತರ ತರಗತಿಗಳಿಗೆ ದೌಡು, ಶಿಕ್ಷಕರಿಂದ ಪಾಠ, ಬಿಡುವಿನ ವೇಳೆ ಆಟ, ಸಂಜೆ ಮನೆಯತ್ತ ಓಟ… ಹೀಗೆ ಕಂಡು ಬರುತ್ತಿದ್ದಂತಹ ಯಾವುದೇ ಚಟುವಟಿಕೆ ಇಲ್ಲದೆ ಶಾಲಾ-ಕಾಲೇಜು ಆವರಣಗಳು ಭಣಗುಡುತ್ತಿವೆ.

Advertisement

ಈ ವರ್ಷ ಜೂನ್‌ ಮಾಹೆ ಪ್ರಾರಂಭವಾಗಿ ಎರಡನೇ ವಾರಕ್ಕೆ ಕಾಲಿಟ್ಟರೂ ಯಾವುದೇ ಶಾಲೆಯಲ್ಲಿ ಅಂತಹ ವಾತಾವರಣ ಕಂಡು ಬರುತ್ತಿಲ್ಲ. ಸದ್ಯದ ಮಟ್ಟಿಗೆ ಅಂತಹ ವಾತಾವರಣ ಕಂಡು ಬರುವುದು ಅಸಾಧ್ಯ. ಕಾರಣ ಕೋವಿಡ್ ವೈರಸ್‌ ಎಂಬ ಮಹಾಮಾರಿಯ ಅಟ್ಟಹಾಸ! ವಾರ್ಷಿಕ ಪರೀಕ್ಷೆಗಳು ಮುಗಿದು ಫಲಿತಾಂಶ ಪ್ರಕಟಗೊಂಡು ಮೇ ತಿಂಗಳ ಕೊನೆ ವಾರದ ಹೊತ್ತಿಗೆ ಶಾಲೆಗಳು ಪ್ರಾರಂಭೋತ್ಸವಕ್ಕೆ ಅಣಿಯಾಗುತ್ತಿದ್ದವು. ತಳಿರು ತೋರಣ, ಬಣ್ಣ ಬಣ್ಣದ ರಂಗೋಲಿ, ಹೊಸ ಹುರುಪು, ಉತ್ಸಾಹದೊಂದಿಗೆ ಶಾಲೆಗಳು, ಶಿಕ್ಷಕರು ಸಹ ಹೊಸದಾಗಿ ಮತ್ತು ಮತ್ತೆ ಶಾಲೆಗಳಿಗೆ ವಾಪಾಸ್ಸಾಗುವಂತಹ ವಿದ್ಯಾರ್ಥಿ ಸಮೂಹ ಸ್ವಾಗತಿಸಲು ಸಜ್ಜಾಗುತ್ತಿದ್ದರು.

ಕೋವಿಡ್ ವೈರಸ್‌ ದಾಂಗುಡಿ ಪ್ರಾರಂಭವಾಗುತ್ತಿದ್ದಂತೆಯೇ ಮಾರ್ಚ್‌ ತಿಂಗಳನಿಂದಲೇ ಶಾಲೆ, ತರಗತಿ, ಆವರಣದಲ್ಲಿ ವಿದ್ಯಾರ್ಥಿಗಳ ಕಲರವ, ಶಿಕ್ಷಕರ ಪಾಠ, ಪ್ರವಚನ, ಆಟೋಟದ ಸದ್ದು ಅಕ್ಷರಶಃ ಅಡಗಿಹೋಗಿದೆ. ಶಾಲೆಗಳಲ್ಲಿ ಕೇಳಿ ಬರಬೇಕಿದ್ದ ಪಾಠ-ಪ್ರವಚನ, ಆಟೋಟದಲ್ಲಿ ತೊಡಗಿರುವ ಮಕ್ಕಳೇ ಇಲ್ಲದೆ ಕೊಠಡಿ, ಆವರಣಗಳು ಖಾಲಿ ಖಾಲಿ. ಇದೇ ಮೊದಲು: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬರೆಯದೆ ಮುಂದಿನ ತರಗತಿಗೆ ತೇರ್ಗಡೆ ಆಗಿರುವುದು, ಜೂನ್‌ ಬಂದರೂ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯದೇ ಇರುವುದು, ಇಂಜಿನಿಯರಿಂಗ್‌, ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸ್‌ಗಳ ಗುರಿ ಹೊಂದಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳು ಒಂದೇ ಒಂದು ಆಂಗ್ಲ ಭಾಷಾ ಪರೀಕ್ಷೆಗಾಗಿ ಹಲವಾರು ದಿನಗಳಿಂದ ಕಾಯುವಂತಾಗಿರುವುದು ಇದೇ ಮೊದಲು ಎನ್ನುತ್ತಾರೆ ಅನೇಕರು.

ಕೋವಿಡ್ ಭಯ ಈಗಲೂ ಜನರಲ್ಲಿದೆ. ಅದರಲ್ಲೂ ಸಣ್ಣ ಮಕ್ಕಳ ಪೋಷಕರಲ್ಲಿ ಬಹಳ ಇದೆ. ಶಾಲೆ ಪ್ರಾರಂಭಕ್ಕೆ ಸಂಬಂಧಿಸಿದಂತೆ ಪೋಷಕರ ಸಭೆಗಾಗಿ ಫೋನ್‌ ಕರೆ ಮಾಡಿದರೆ ಅನೇಕ ವಿದ್ಯಾರ್ಥಿಗಳ ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಕಳಿಸುವುದಕ್ಕೆ ಬಿಲ್‌ ಕುಲ್‌ ಒಪ್ಪುತ್ತಿಲ್ಲ. ಕೆಲವರು ಕಳಿಸುವುದಾಗಿ ಹೇಳುತ್ತಾರೆ. ಇನ್ನು ಕೆಲವರು ನಮ್ಮ ಮಕ್ಕಳಿಗೆ ಏನಾದರೂ ಆದಲ್ಲಿ ಜವಾಬ್ದಾರಿ ಯಾರದ್ದು ಎಂದು ಕೇಳುತ್ತಾರೆ. ನಮ್ಮ ವೃತ್ತಿ ಜೀವನದಲ್ಲಿ ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ನಾವು ಅಪ್ಪಿತಪ್ಪಿಯೂ ಕನಸು ಮನಸ್ಸಿನಲ್ಲೂ ಊಹಿಸಿರಲೂ ಇಲ್ಲ. ಊಹಿಸಲಿಕ್ಕೂ ಸಾಧ್ಯ ಇರಲಿಲ್ಲ. ಆದರೆ ಈಗ ಅಂತಹ ಪರಿಸ್ಥಿತಿ ಇದೆ. ಎದುರಿಸಲೇಬೇಕಾಗಿದೆ ಎಂದು ಚಾಮರಾಜಪೇಟೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಸ್‌. ಸಿದ್ದಮ್ಮ ಹೇಳುತ್ತಾರೆ.

ಮಹಾಮಾರಿ ಕೋವಿಡ್ ವೈರಸ್‌ ವ್ಯಾಪಿಸುತ್ತಲೇ ಇದೆ. ನಿಯಂತ್ರಣಕ್ಕೂ ಸಿಲುಕುತ್ತಿಲ್ಲ. ಅದರ ನೇರ ಪರಿಣಾಮ ಅತೀ ಮಹತ್ವದ ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿ ಸಮೂಹದ ಮೇಲೆ ಬೀರುತ್ತಿದೆ. ಎಲ್ಲಾ ಪರಿಸ್ಥಿತಿ ತಿಳಿಯಾಗಿ ಶಾಲೆಗಳಲ್ಲಿ ಎಂದಿನಂತೆ ಮಕ್ಕಳ ಕಲರವ, ಪಾಠ, ಪ್ರವಚನ ಕೇಳಿ ಬರಲು ಸೂಕ್ತ ಸಮಯಕ್ಕಾಗಿ ಕಾಯಲೇಬೇಕಾಗಿದೆ.

Advertisement

ಕಳೆದ 30 ವರ್ಷದಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವಾಗಲೂ ಈ ರೀತಿ ಶಾಲೆಗಳು ವಿಳಂಬವಾಗಿ ಪ್ರಾರಂಭವಾದ ಉದಾಹರಣೆಯೇ ಇಲ್ಲ. ಮೇ 29, 30ಕ್ಕೆ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಬಂದು ವಿದ್ಯಾರ್ಥಿಗಳ ದಾಖಲಾತಿ, ಅಂಕಪಟ್ಟಿ, ವರ್ಗಾವಣೆ ಪತ್ರ ಸಿದ್ಧತೆ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಸೇರಿದಂತೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗುತ್ತಿದ್ದೆವು. ಶಾಲಾ ಪ್ರಾರಂಭೋತ್ಸದವ ನಂತರ ಇನ್ನೂ ಕೆಲಸ ಹೆಚ್ಚಾಗುತ್ತಿತ್ತು. ಮಕ್ಕಳು ಜೂನ್‌ 1 ಇಲ್ಲವೇ 2 ರಿಂದ ಶಾಲೆಗೆ ಬರುತ್ತಿದ್ದರು. ಆದರೆ, ಈ ವರ್ಷ ಜೂ 9 ಆದರೂ ಯಾರೊಬ್ಬರೂ ಶಾಲೆಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಎಸ್‌. ಸಿದ್ದಮ್ಮ,
ಚಾಮರಾಜಪೇಟೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next