Advertisement
ಪೂರ್ವ ಮುಂಗಾರು ಒಳಗೊಂಡಂತೆ ಈವರೆಗೆ ಎಲ್ಲಿಯೋ ಕೆಲವೇ ಭಾಗದಲ್ಲಿ ಒಂದರೆಡು ಬಾರಿ ಹಸಿ, ಹದವಾದ ಮಳೆ ಆಗಿದ್ದು ಬಿಟ್ಟರೆ ದಾವಣಗೆರೆ ಭಾಗದಲ್ಲಿ ಜೂನ್ ಮೂರನೇ ವಾರದಲ್ಲೂ ಮಳೆ ಎಂಬುದು ಅಕ್ಷರಶಃ ಮರೀಚಿಕೆ.
Related Articles
Advertisement
ಈಗ ಮಳೆ ಬಂದರೆ ಮಾತ್ರವೇ ಹೊಲಗಳನ್ನು ಬಿತ್ತನೆಗೆ ಸಜ್ಜು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ.
ಮಳೆಯ ಕೊರತೆಯ ಪರಿಣಾಮ ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಸದಾ ಬರಕ್ಕೆ ತುತ್ತಾಗುವ ಜಗಳೂರು ತಾಲೂಕಿನಲ್ಲಿ ನೀರು… ಎಂಬುದು ಅಮೃತಕ್ಕೆ ಸಮಾನವಾಗಿದೆ. ಯಾವುದೇ ಜಲ ಮೂಲ ಇಲ್ಲದ ಜಗಳೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲೇ ಹೇಳಲಿಕ್ಕೂ ಆಗದಂತಹ ಸಮಸ್ಯೆ ಉಲ್ಬಣವಾಗಿದೆ. ಜನರು ನೀರಿಗಾಗಿ ಅಲೆಯಬೇಕಾಗಿದೆ. ಟ್ಯಾಂಕರ್ ಮೂಲಕ ಒದಗಿಸುವ ನೀರು ಜನರ ದಾಹ ತೀರಿಸುತ್ತಿಲ್ಲ. ಜಾನುವಾರುಗಳಿಗೆ ನೀರುಣಿಸಲು ಸಾಧ್ಯವಾಗದೇ ಇರುವುದು ಅನ್ನದಾತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಟ್ಯಾಂಕರ್‌ನಲ್ಲಿ ತಂದಂತಹ ನೀರನ್ನು ತೊಟ್ಟಿಗಳಲ್ಲಿ ಹಾಕಿ ಅಲ್ಲಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿ.
ಕಳೆದ ವರ್ಷವಷ್ಟೇ ಬರದ ಬೇಗೆಯಲ್ಲಿ ತತ್ತರಿಸಿ ಹೋಗಿರುವ ರೈತರು, ಜನರು ಈಗ ಯಾವುದನ್ನೂ ತಡೆದುಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯ ಅಂಚಿನಲ್ಲಿದ್ದಾರೆ. ಉತ್ತಮ ಮಳೆ ಮಾತ್ರವೇ ಜನರನ್ನು ಕಾಪಾಡಬಲ್ಲದು. ಸರ್ಕಾರಗಳು ನೀಡುವ ಯಾವುದೇ ವ್ಯವಸ್ಥೆ ಜನರ ಸಂಕಷ್ಟ ದೂರ ಮಾಡಲಿಕ್ಕಾಗದಷ್ಟು ಸಮಸ್ಯೆ ನಿರ್ಮಾಣವಾಗುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬರದ ಕಾರ್ಮೋಡದ ಛಾಯೆ ನಿಧಾನಕ್ಕೆ ಆವರಿಸುತ್ತಿದೆ.
ಮುಂದಿನ ವಾರದಲ್ಲಿ ಮುಂಗಾರು ಪ್ರವೇಶ, 2-3 ದಿನ ಭಾರೀ ಮಳೆ ಆಗುತ್ತದೆ. ಹವಾಮಾನ ವೈಪರಿತ್ಯದಿಂದ ಮಳೆ ಆಗುತ್ತಿಲ್ಲ. ಇಲ್ಲ ಮಳೆ ಆಗುತ್ತದೆ… ಎಂಬ ಮುನ್ಸೂಚನೆ ನೆಚ್ಚಿಕೊಂಡೇ ಜನರು ಉಸಿರು ಬಿಗಿ ಹಿಡಿದುಕೊಂಡಿದ್ದಾರೆ. ಮಳೆ ಆಗುತ್ತದೆ ಎಂಬ ನಿರೀಕ್ಷೆಯಲ್ಲೇ ಕಾಲ ತಳ್ಳುತ್ತಿದ್ದಾರೆ. ಒಂದೊಮ್ಮೆ ಮಳೆ ಆಗದೇ ಹೋದರೆ ಊಹಿಸಲಿಕ್ಕೂ ಆಗದಂತಹ ಭೀಕರ ವಾತಾವರಣ ನಿರ್ಮಾಣವಾಗಲಿದೆ.