Advertisement

ಶುದ್ಧ ಕುಡಿವ ನೀರು ಘಟಕ ಸ್ಥಾಪಿಸಿ

12:49 PM Sep 13, 2019 | Team Udayavani |

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನ ಸಮಿತಿ, ದಾನಿಗಳ ಸಹಾಯದಿಂದ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸಲಹೆ ನೀಡಿದ್ದಾರೆ.

Advertisement

ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 1,200 ಗ್ರಾಮಗಳಲ್ಲಿ 755 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಶೇ.50 ರಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಉಳಿದೆಡೆ ದಾನಿಗಳು, ದೇವಸ್ಥಾನಗಳ ಸಮಿತಿ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಹರಿಹರ ಹಾಗೂ ಹೊನ್ನಾಳಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಕುರಿತು ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ. ನೆರೆ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಆಗಲಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

ದಾವಣಗೆರೆ ತಾಲೂಕಿನ 7 ಗ್ರಾಮಗಳಲ್ಲಿ ಮಳೆಯಿಂದಾಗಿ ಬೋರ್‌ವೆಲ್ ರೀಚಾರ್ಜ್‌ ಆಗಿದ್ದು, ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. ಈಗಲೂ 11 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಜಗಳೂರಿನಲ್ಲಿ 52 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. 35 ಗ್ರಾಮಗಳಿಗೆ 55 ಖಾಸಗಿ ಬೋರ್‌ವೆಲ್ಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗ ಕಾರ್ಯಪಾಲಕ ಇಂಜಿನಿಯರ್‌ ಎಚ್.ಎನ್‌. ರಾಜು ತಿಳಿಸಿದರು.

ಜಗಳೂರು ತಾಲೂಕಿನಲ್ಲಿ ಸ್ವಲ್ಪ ಮಳೆಯಾದ ಕಾರಣ ದನಕರುಗಳಿಗೆ ಮೇವು ದೊರೆಯುತ್ತಿದೆ. ಹಿರೇಮಲ್ಲನಹೊಳೆ ಗೋಶಾಲೆ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.ಆಧಾರ್‌ ಲಿಂಕ್‌ ಮಾಡದವರ ಪಡಿತರ ಚೀಟಿಗಳನ್ನು ಅನರ್ಹಗೊಳಿಸಿ, ರೇಷನ್‌ ನೀಡುತ್ತಿಲ್ಲ. ಪಡಿತರ ಚೀಟಿಯ ಪೋಟ್ರ್ಯಾಬಿಲಿಟಿಯಿಂದಾಗಿ ರಾಜ್ಯದ ಎಲ್ಲಾ ಕಡೆ ಅರ್ಹ ಫಲಾನುಭವಿಗಳು ರೇಷನ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೊಸದಾದ ಪಡಿತರ ಚೀಟಿಯನ್ನು ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪೋಟ್ರ್ಯಾಬಿಲಿಟಿ ಕುರಿತು ಕಾರ್ಯಾಗಾರ ಸಹ ನಡೆಸಲಾಗಿದೆ ಎಂದು ಆಹಾರ ನಾಗರಿಕ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ ಮಾಹಿತಿ ನೀಡಿದರು.

Advertisement

ಮಾಸಾಶನ ನೀಡುವಲ್ಲಿ ಯಾವುದೇ ತೊಂದರೆ ಹಾಗೂ ವಿಳಂಬವಾಗಿದ್ದರೆ ಕೂಡಲೇ ಸರಿಪಡಿಸಿ ಎಂದು ಉಮಾಶಂಕರ್‌ ಸೂಚಿಸಿದರು. ಮಾಸಾಶನ ನೀಡುವಲ್ಲಿ ಯಾವುದೇ ತೊಂದರೆ ಇಲ್ಲ.ಆದರೆ, 4 ತಿಂಗಳಿಂದ ಹೊಸದಾಗಿ ಮಂಜೂರಾದವನ್ನು ಖಜಾನೆ-2 ತಂತ್ರಾಂಶದಲ್ಲಿ ದಾಖಲಿಸುವಾಗ ವಿಳಂಬವಾಗುತ್ತಿದೆ. ಅಂತಹ ಪ್ರಕರಣಗಳನ್ನು ದಾಖಲೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತಿದೆ ಎಂದು ತಹಶೀಲ್ದಾರ್‌ ಸಂತೋಷ್‌ಕುಮಾರ್‌ ತಿಳಿಸಿದರು.

ಮುಂದಿನ 3 ತಿಂಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ಪಂಚಾಯಿತಿಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ದಾಖಲೆ ಪಡೆದು ಮಾಸಾಶನ ಮಂಜೂರು ಮಾಡಲು ಗುರಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿದೇಶಕ ಕೆ.ಎಚ್. ವಿಜಯ್‌ಕುಮಾರ್‌, 142 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಕೊಡಲಾಗಿದೆ. ಆದರೆ, ನಿರ್ಮಾಣವಾಗಿಲ್ಲ ಎಂದು ತಿಳಿಸಿದರು. ಶೌಚಾಲಯ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಉಮಾಶಂಕರ್‌ ತಾಲೂಕು ಪಂಚಾಯತ್‌ ಕಾರ್ಯನಿರ್ವಹಕಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಜಗದೀಶ್‌, ನಗರಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next