ದಾವಣಗೆರೆ: ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ, ಸಂಪರ್ಕ, ಹೋಟೆಲ್ ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬೇಡಿಕೆ ಆಧಾರಿತ ಸಮೀಕ್ಷೆ(ಡಿಮ್ಯಾಂಡ್ ಸರ್ವೇ) ಕೈಗೊಳ್ಳುವಂತೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಡಿಮ್ಯಾಂಡ್ ಸರ್ವೇ ಅತೀ ಮುಖ್ಯ. ಅದರ ಆಧಾರದಲ್ಲಿ ಹಂತ ಹಂತವಾಗಿ ಸೌಲಭ್ಯ ಒದಗಿಸಲಾಗುವುದು. ಪ್ರವಾಸಿ ತಾಣಗಳಲ್ಲಿ ಹೋಟೆಲ್ ಪ್ರಾರಂಭಿಸುವುದಕ್ಕೂ ಡಿಮ್ಯಾಂಡ್ ಸರ್ವೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಹರಿಹರೇಶ್ವರ, ಕೊಂಡಜ್ಜಿ ಮತ್ತು ಕೆರೆ, ಶಾಂತಿಸಾಗರ, ಸಂತೇಬೆನ್ನೂರಿನ ಪುಷ್ಕರಣಿ, ತೀರ್ಥ ರಾಮೇಶ್ವರ ದೇವಾಲಯಗಳನ್ನು ರಾಜ್ಯ ಮಟ್ಟದ 5 ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ. ಇಲಾಖೆಯಿಂದ 20 ತಾಣಗಳನ್ನು ಗುರುತಿಸಿ, ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2019ರಲ್ಲಿ ಜನವರಿಯಿಂದ ಈವರೆಗೆ 48 ವಿದೇಶಿಯರು ಒಳಗೊಂಡಂತೆ 8,65,276 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದರು.
ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಶಾಂತಿಸಾಗರ ( ಸೂಳೆಕೆರೆ ) ಯನ್ನು ವಿಶ್ವ ದರ್ಜೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶಿ ದರ್ಶನ ಯೋಜನೆ.. ಮಾರ್ಗಸೂಚಿಗಳನ್ವಯ 18.60 ಕೋಟಿ ವೆಚ್ಚದ ವಿಸ್ತೃತ ವರದಿ ಸಿದ್ಧಪಡಿಸಿ, ರಾಜ್ಯ ಸರ್ಕಾರದ ಮೂಲಕ ಕಳೆದ ಫೆ. 12 ರಂದು ಕೇಂದ್ರಕ್ಕೆ ಕಳಿಸಿಕೊಡಲಾಗಿದೆ. ಈ ಸಂಬಂಧ ಎರಡು ಬಾರಿ ಸಭೆ ಸಹ ನಡೆದಿದೆ. ಆದಷ್ಟು ಬೇಗ ಅನುಮೋದನೆ, ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
2013-14ರಿಂದ ಈವರೆಗೆ 576 ಜನರಿಗೆ ಪ್ರವಾಸಿ ಟ್ಯಾಕ್ಸಿ ನೀಡುವ ಗುರಿಯಲ್ಲಿ 492 ಜನರಿಗೆ ನೀಡಲಾಗಿದೆ. ಕೆಲವಾರು ಕಾರಣದಿಂದ 84 ಜನರಿಗೆ ವಿತರಣೆ ಮಾಡಿಲ್ಲ ಎಂದು ತಿಪ್ಪೇಸ್ವಾಮಿ ತಿಳಿಸಿದರು.ಯಾವುದೇ ಕಾರಣಕ್ಕೂ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ನೀಡಬೇಕಾದ ಸೌಲಭ್ಯ ನಿಲ್ಲಿಸುವಂತೆಯೇ ಇಲ್ಲ. ನಿಲ್ಲಿಸುವುದು ಅಪರಾಧ. ಹಾಗಾಗಿ ಕೂಡಲೇ ಬಾಕಿ ಇರುವರಿಗೆ ಟ್ಯಾಕ್ಸಿ ವಿತರಣೆ ಮಾಡುವಂತೆ ಸಚಿವ ಸಿ.ಟಿ. ರವಿ ಸೂಚಿಸಿದರು.
ಕರ್ನಾಟಕ ದರ್ಶನ ಯೋಜನೆಡಯಡಿ 2013-14 ರಿಂದ ಈವರೆಗೆ 6,950 ವಿದ್ಯಾರ್ಥಿಗಳಿಗೆ ಪ್ರವಾಸದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಕರ್ನಾಟಕ ದರ್ಶನ ಯೋಜನೆಯ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಾಂಧೀಜಿಯವರು ಭೇಟಿ ನೀಡಿದ್ದ, ತಂಗಿದ್ದ ಇತರೆ ಪ್ರದೇಶಗಳಿಗೆ ಕಡ್ಡಾಯವಾಗಿ ಕರೆದೊಯ್ಯಬೇಕು ಎಂದು ಸಚಿವರು ಸೂಚಿಸಿದರು.
ಶಾಸಕರಾದ ಪ್ರೊ| ಎನ್. ಲಿಂಗಣ್ಣ, ಮೋಹನ್ ಕೊಂಡಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ, ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಇತರರು ಇದ್ದರು.