Advertisement

ಎಲ್ಲರೂ ಬೆರೆತು ಪರಿಸರ ಸ್ನೇಹಿ  ಹಬ್ಬ ಆಚರಿಸೋಣ

11:37 AM Oct 04, 2019 | Team Udayavani |

ದಾವಣಗೆರೆ: ಸಂತಸದ ಕ್ಷಣಗಳಿಂದ ತುಂಬಿರುವ ಆಚರಣೆಗೆ ಧಕ್ಕೆ ಉಂಟು ಮಾಡದಂತೆ ಎಲ್ಲರೂ ಬೆರೆತು ಸಹಕಾರ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಿಸೋಣ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮನವಿ ಮಾಡಿದರು.

Advertisement

ಗುರುವಾರ ಬಡಾವಣೆ ಪೊಲೀಸ್‌ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಅಹಿತಕರ ಘಟನೆ ಮರೆಯುತ್ತಾ, ಒಳ್ಳೆಯ ಘಟನೆ ಮೆಲುಕು ಹಾಕುತ್ತಾ ಹಬ್ಬಗಳ ಯಶಸ್ವಿ ಆಚರಣೆಗೆ ಒತ್ತು ನೀಡೊಣ ಎಂದರು.

ಪ್ಲಾಸ್ಟಿಕ್‌ ನಿಷೇಧ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದೆ. ಹಬ್ಬಗಳಲ್ಲಿಯೂ ಸಹ ಪರಿಸರಕ್ಕೆ ಹಾನಿ ಆಗದಂತೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸೋಣ ಎಂದು ಮನವಿ ಮಾಡಿದರು.

ಗಣಪತಿ ಹಬ್ಬದಲ್ಲಿ ಜನತೆಯ ಸಹಕಾರದೊಂದಿಗೆ ಸುಮಾರು 2,500 ಗಣೇಶ ವಿಗ್ರಹಗಳನ್ನು ಶಾಂತಿಯುತವಾಗಿ ವಿಸರ್ಜನೆ ಮಾಡಲಾಗಿದೆ. ದಸರಾ ಮೆರವಣಿಗೆಯಲ್ಲಿಯೂ ಸಹ ಯಾವ ಅಹಿತಕರ ಘಟನೆಗಳು ಸಂಭವಿಸದಂತೆ ಹಬ್ಬ ಆಚರಿಸಬೇಕು. ಅ.8 ರಂದು ಜರುಗಲಿರುವ ಶರನ್ನವರಾತ್ರಿ, ಬೃಹತ್‌ ಶೋಭಾಯಾತ್ರೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಅಧ್ಯಕ್ಷ ದೇವರಮನೆ ಶಿವಕುಮಾರ್‌ ಮಾತನಾಡಿ, ಕಳೆದ 37 ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ವಿಜಯದಶಮಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಅ.8 ರ ಮಂಗಳವಾರ ಬೆಳಗ್ಗೆ 11.30ಕ್ಕೆ ವೆಂಕಟೇಶ್ವರ ವೃತ್ತದಿಂದ (ಬೇತೂರು ರಸ್ತೆ) ಪೂರ್ಣ ಕುಂಭದೊಂದಿಗೆ ಪ್ರಾರಂಭವಾಗುವ ಶೋಭಾಯಾತ್ರೆ ಎಪಿಎಂಸಿ, ಬಂಬೂಬಜಾರ್‌, ಚೌಕಿಪೇಟೆ, ಬೀರಲಿಂಗೇಶ್ವರ ದೇವಸ್ಥಾನ, ಹೊಂಡದ ಸರ್ಕಲ್‌ (ಬನ್ನಿ ಮುಡಿಯಲಾಗುವುದು) ಹಾಗೂ ಇತ್ಯಾದಿ ಕಡೆ ಸಾಗಲಿದೆ. ದಸರಾ ಒಂದು ನಾಡಹಬ್ಬವಾಗಿದ್ದು ಹಬ್ಬದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್‌ ಸೈಪುಲ್ಲಾ ಮಾತನಾಡಿ, ದಸರಾ ಮಹೋತ್ಸವ ಶೋಭಾಯಾತ್ರೆಯನ್ನು ಎಲ್ಲಾ
ಜನಾಂಗದವರು ಸೇರಿ ಅನ್ಯೋನ್ಯವಾಗಿ ಆಚರಿಸೋಣ. ಶೋಭಾಯಾತ್ರೆಯಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿ ದೇವಿಗೆ ಮಾರ್ಲಾಪಣೆ ಮಾಡುವ ಮೂಲಕ ಸಹಕಾರ ನೀಡಲಾಗುವುದು ಎಂದರು.

ದುರ್ಗಾಂಬಿಕ ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಪೊಲೀಸ್‌ ಇಲಾಖೆಯ ಸಹಕಾರ ಅಗತ್ಯವಾಗಿದೆ. ಯಾವುದೇ ಧಕ್ಕೆಯಾಗದಂತೆ ಹಬ್ಬ ಆಚರಿಸೋಣ. ಸಾಮಾಜಿಕ ಜಾಲತಾಣಗಳು ಎಷ್ಟು ಉಪಕಾರಿ ಅಷ್ಟೇ ಅಪಾಯಕಾರಿ. ಕಡಿವಾಣ ಅಗತ್ಯ ಎಂದು ಒತ್ತಾಯಿಸಿದರು.

ಹಿಂದೂ ಮುಖಂಡ ಕೆ.ಬಿ.ಶಂಕರ ನಾರಾಯಣ ಮಾತನಾಡಿ, ದಾವಣಗೆರೆ ನಗರವು ರಾಜ್ಯದ ಹೃದಯ ಭಾಗದಲ್ಲಿದ್ದು, ಹಬ್ಬ ಹರಿದಿನಗಳನ್ನು ಸಂತಸ ಸಡಗರದಿಂದ ಮತ್ತು ಮತ್ತು ಶಾಂತಿಯತವಾಗಿ ಆಚರಿಸುವ ಮೂಲಕ ಹೃದಯ ವಿಶಾಲತೆ ಮೆರೆಯಬೇಕು. ರಾಜ್ಯದ ನೆರೆ ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡೋಣ ಎಂದು ಮನವಿ ಮಾಡಿದರು.

ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾಖಾನ್‌ ಮಾತನಾಡಿ, ವಿವಿಧ ಧರ್ಮಗಳ ಹಬ್ಬಗಳು ಪ್ರತಿಷ್ಠೆಯ ಪ್ರತಿಬಿಂಬವಾಗಿವೆ. ಧರ್ಮ, ಧರ್ಮಗಳ ಮಧ್ಯೆ ಸೌಹಾರ್ದತೆ ಬೆರೆಯುವಂತೆ ಮಾಡುವ ಮೂಲಕ ಮತ್ತು ವಿವಿಧ ಧರ್ಮಗಳ ಜೊತೆಗೆ ಸಿಹಿ ಹಂಚುವ ಮೂಲಕ ಸೌಹಾರ್ದತೆ ಬೆಸೆಯೋಣ ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಅವರಗೆರೆ ಉಮೇಶ್‌ ಮಾತನಾಡಿ, ನಾಡಹಬ್ಬ ಸೌಹಾರ್ದತೆಯ ಸಂಕೇತ.ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ. ಹಬ್ಬವನ್ನು ಶಾಂತಿಯುತವಾಗಿ ಮತ್ತು ಅರ್ಥಪೂ ರ್ಣವಾಗಿ ಆಚರಿಸಬೇಕಿದೆ. ಧಾರ್ಮಿಕ ಸಮಾರಂಭಗಳಿಗೆ ಧಕ್ಕೆ ಉಂಟುಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ವೈ.ಮಲ್ಲೇಶ್‌, ಹೆಚ್ಚುವರಿ ಅಧೀಕ್ಷಕ ಎಂ. ರಾಜೀವ್‌, ಆರ್‌ ಟಿಒ ಎನ್‌.ಜೆ.ಬಣಕಾರ್‌, ಡಿಎಚ್‌ಒ ಡಾ| ರಾಘವೇಂದ್ರಸ್ವಾಮಿ, ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next