Advertisement

ಈರುಳ್ಳಿ ಆವಕ ಕುಸಿತ, ಧಾರಣೆ ಏರಿಳಿತ

11:23 AM Dec 25, 2019 | Naveen |

„ರಾ. ರವಿಬಾಬು
ದಾವಣಗೆರೆ:
ದಾವಣಗೆರೆ ಮಾರುಕಟ್ಟೆಗೆ ಮಹಾರಾಷ್ಟ್ರದ ನಾಸಿಕ್‌ ಮತ್ತು ಇತರೆ ಭಾಗದಿಂದ ಈರುಳ್ಳಿ ಬರುವುದು ಕಡಿಮೆ ಆಗಿರುವುದೇ ಬೆಲೆ ಹೆಚ್ಚಳಕ್ಕೆ ಮೂಲ ಕಾರಣ!. ದಾವಣಗೆರೆಯ ಮಾರುಕಟ್ಟೆಗೆ ನವೆಂಬರ್‌ -ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿತ್ತು. ಆ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈರುಳ್ಳಿ ಅಕ್ಷರಶಃ ನಾಶವಾಗಿರುವುದರಿಂದ ಈರುಳ್ಳಿಯೇ ಇಲ್ಲದಂತಾಗಿದೆ. ಹಾಗಾಗಿ ದಾವಣಗೆರೆಗೆ ಮಾರುಕಟ್ಟೆಗೆ ಬರುವ ಪ್ರಮಾಣ ಬಹಳ ಕುಸಿದಿದೆ.

Advertisement

ಬೆಲೆ ಹೆಚ್ಚಾಗಿದೆ. ಮಹಾರಾಷ್ಟ್ರ ಭಾಗದಿಂದ ಪ್ರತಿ ದಿನ 70-80 ಲಾರಿ ಲೋಡ್‌ ಈರುಳ್ಳಿ ಬರುತ್ತಿತ್ತು. ಲಾರಿ ಬಾಡಿಗೆ, ಡ್ರೈವರ್‌-ಕ್ಲೀನರ್‌ ಬ್ಯಾಟ (ದಿನ ಭತ್ಯೆ) ಎಲ್ಲ ಸೇರಿದರೂ 30-40 ರೂಪಾಯಿ ಖರ್ಚು ಆಗುತ್ತಿತ್ತು. ಹೆಚ್ಚು ಈರುಳ್ಳಿ ಬರುತ್ತಿತ್ತು. ಹಾಗಾಗಿ ನವೆಂಬರ್‌, ಡಿಸೆಂಬರ್‌ನಲ್ಲಿ ಈರುಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗುತ್ತಿರಲಿಲ್ಲ. ಜನರಿಗೆ ಭಾರೀ ಅಂತಾ ಅನ್ನಿಸುತ್ತಿರಲೇ ಇಲ್ಲ. ಆದರೆ, ಈ ಬಾರಿ ಮಳೆಯ ಕಾರಣಕ್ಕೆ ನಾಸಿಕ್‌ ಇತರೆಡೆ ಈರುಳ್ಳಿ ಇಲ್ಲವೇ ಇಲ್ಲ. ಹಾಗಾಗಿ ಈಗ ಅಲ್ಲಿಂದ ದಿನಕ್ಕೆ 1-2 ಲಾರಿ ಲೋಡ್‌ ಮಾತ್ರ ಬರುತ್ತಿದೆ. ಲಾರಿ ಬಾಡಿಗೆ, ಡ್ರೈವರ್‌-ಕ್ಲೀನರ್‌ ಬ್ಯಾಟ(ದಿನ ಭತ್ಯೆ) ಎಲ್ಲ ಸೇರಿದರೂ 80-100 ರೂಪಾಯಿ ಖರ್ಚು ಆಗುತ್ತದೆ. ಹಾಗಾಗಿಯೇ ಈರುಳ್ಳಿ ಬೆಲೆ ಜಾಸ್ತಿ ಆಗಿದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕಡೆಯಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣ ಶೇ.20-25 ರಷ್ಟು ಮಾತ್ರ ಇದೆ. ಅದೂ ನಿರಂತರವಾಗಿ ಎನೂ ಇಲ್ಲ. 1- 2 ದಿನಕ್ಕೊಮ್ಮೆ ಬರುತ್ತಿರುವ ಕಾರಣಕ್ಕೆ ಧಾರಣೆ ಏರಿಕೆ ಆಗುತ್ತಿದೆ.

ದಾವಣಗೆರೆ ಮಾರುಕಟ್ಟೆಗೆ ಜಗಳೂರು, ಹರಪನಹಳ್ಳಿ, ಗದಗ-ಮುಂಡರಗಿ ಭಾಗದಿಂದ ಬರುವ ಈರುಳ್ಳಿ ಒಂದು ರೀತಿಯಲ್ಲಿ ಬಂದ್‌ ಆಗಿದೆ. ಮಹಾರಾಷ್ಟ್ರದಿಂದ ಸಹ ಈರುಳ್ಳಿ ಬರುತ್ತಿಲ್ಲ. ಮಾಕರುಕಟ್ಟೆಗೆ ಬರುವಂತಹ ಈರುಳ್ಳಿ ಕಡಿಮೆ. ಡಿಮ್ಯಾಂಡ್‌ ಜಾಸ್ತಿ. ಹಾಗಾಗಿ ಬೆಲೆ ಹಿಂಗೇ ಅನ್ನುವಂತೆಯೇ ಇಲ್ಲ. 100-150
ರೂಪಾಯಿ ಆಸುಪಾಸು ಇದೆ. ತೀರಾ ಕಡಿಮೆ ಎಂದರೆನೇ 60-70-80 ರೂಪಾಯಿ. ಅಲ್ಲಿಗೆ ಈರುಳ್ಳಿ ಕೊಯ್ದಾಗ ಕಣ್ಣೀರು ಬರುತ್ತದೆ ಅನ್ನೋದು ಈರುಳ್ಳಿ ಬೆಲೆ ಕೇಳಿಯೇ ಕಣ್ಣೇರು ಬರುವಂತಾಗಿದೆ.

ನಾಸಿಕ್‌ ಗಡ್ಡೆ ಬರೋದ್‌ ಕಡಿಮೆ ಆಗೋ ಕಾರಣಕ್ಕೆ ಈರುಳ್ಳಿ ರೇಟ್‌ ಹಿಂಗೇ ಅಂತಾ ಹೇಳ್ಳೋಕೆ ಆಗೋದೇ ಇಲ್ಲ. ಜನವರಿ ಇಲ್ಲ ಅಂದ್ರೆ ಫೆಬ್ರವರಿಯಾಗೆ ಲೋಕಲ್‌ ಮಾಲ್‌ (ಈರುಳ್ಳಿ) ಬರೋ ತಂಕ… ರೇಟ್‌ ಹೆಚ್ಚು -ಕಮ್ಮಿ ಆಗೋದ್‌ ಇದ್ದದ್ದೇ… ಎನ್ನುವುದು ಈರುಳ್ಳಿ ಮಾರಾಟಗಾರರ ಮಾತು. ಸಣ್‌ ಈರುಳ್ಳಿ ರೇಟೇ 60 ರಿಂದ 80
ರೂಪಾಯಿ. ಅಷ್ಟು ದುಡ್ಡು ಕೊಟ್ಟು ಯಾತಕ್ಕೂ ಬರದಂತಹ ಈರುಳ್ಳಿನ ತಗೋಬೇಕು. ದಿನದ ಅಡುಗೆಗೆ ಏನಿಲ್ಲ ಅಂದರೂ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದೆ ಅಡುಗೆ ಮಾಡೋಕೆ ಬರೋದು ಇಲ್ಲ. ಯಾ ವರ್ಷಾನೂ ಇಂತಹ ಪರಿಸ್ಥಿತಿ ಇರಲಿಲ್ಲ. ಹಂಗಾಗಿ ಕಾಲು, ಅರ್ಧ ಕೆಜಿ ಜೀವನ ಮಾಡಬೇಕಾಗಿದೆ ಎನ್ನುವ ಮಹಿಳೆಯರ ಮಾತು ಈರುಳ್ಳಿ ಬೆಲೆ ಬಿಸಿಯನ್ನು ತೋರಿಸುತ್ತದೆ.

ಆವಕದ ಏರಿಳಿತ…
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಈರುಳ್ಳಿ ಆವಕದಲ್ಲಿ ಏರಿಳಿತ ಸಾಮಾನ್ಯವಾಗಿದೆ. ಡಿ.19 ರಂದು 155
ಕ್ವಿಂಟಾಲ್‌, 20 ರಂದು 350, 21 ರಂದು 302, 23 ರಂದು 465, 24 ರಂದು 230 ಕ್ವಿಂಟಾಲ್‌… ಹೀಗೆ ಮಾರುಕಟ್ಟಗೆ ಬರುವ ಆವಕದಲ್ಲಿ ಏರಿಳಿತ ಆಗುತ್ತಿರುವುದರಿಂದ ಬೆಲೆ ಹೆಚ್ಚು-ಕಡಿಮೆ ಆಗುತ್ತಿದೆ. ಮಾರುಕಟ್ಟೆಗೆ ಧಾರಣೆಗೂ ಗ್ರಾಹಕರು ಕೊಂಡುಕೊಳ್ಳುವ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇದೆ. ಒಳ್ಳೆಯ ಈರುಳ್ಳಿ ಬೆಲೆ 120 ರಿಂದ 150 ರೂಪಾಯಿವರೆಗೆ ಇದೆ. ದಾವಣಗೆರೆ, ಹರಪನಹಳ್ಳಿ, ಜಗಳೂರು, ಗದಗ… ಮುಂತಾದ ಭಾಗದ ಈರುಳ್ಳಿ ಮತ್ತೆ ಮಾರುಕಟ್ಟೆಗೆ ಬರುವವರೆಗೆ ಈರುಳ್ಳಿ ಬೆಲೆಯೇ ಕಣ್ಣೀರು ತರಿಸುವುದು ನಿಲ್ಲುವ ಮಾತೇ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next