ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್ ತಡೆಯುವ ನಿಟ್ಟಿನಲ್ಲಿ ಎಂಥದ್ದೇ ಪರಿಸ್ಥಿತಿ ನಿರ್ಮಾಣವಾದರೂ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಮರೋಪಾದಿ ಸರ್ವ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂವರು ಕೋವಿಡ್ ಸೋಂಕಿತರು ಗುಣಮುಖರಾದ ನಂತರ ಯಾವುದೇ ಪ್ರಕರಣ ಪತ್ತೆ ಆಗದೇ ಇರುವುದು ಸಂತೋಷದ ವಿಚಾರ. ಯಾವುದೇ ಪ್ರಕರಣ ಪತ್ತೆ ಆಗುವುದೂ ಬೇಡ. ಆದರೆ ಯಾವುದೂ ಇಲ್ಲ ಎಂದು ಮೈ ಮರೆಯುವಂತೆಯೇ ಇಲ್ಲ. ಎಂತದ್ದೇ ಪರಿಸ್ಥಿತಿ ನಿರ್ಮಾಣವಾದರೂ ಸಮರ್ಥವಾಗಿ ಎದುರಿಸಲು ಅಗತ್ಯ ಔಷಧಿ, ಪ್ರಯೋಗಾಲಯ, ಸಲಕರಣೆ ಒಳಗೊಂಡಂತೆ ಪ್ರತಿಯೊಂದನ್ನೂ ಸಿದ್ಧ ಮಾಡಿಕೊಂಡಿರಬೇಕು ಎಂದರು.
ಈವರೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಗಲು ಇರಳು ಎನ್ನದೆ ಶ್ರಮಿಸುತ್ತಿರುವ ಫಲವಾಗಿ ಜಿಲ್ಲೆ ಹಳದಿ ಪಟ್ಟಿಯಲ್ಲಿದೆ. ಯಾವುದೇ ಹೊಸ ಪ್ರಕರಣ ಪತ್ತೆ ಆಗಿಲ್ಲ. ಕೊಂಚ ಎಡವಟ್ಟಾದರೂ ಪರಿಸ್ಥಿತಿ ಗಂಭೀರವಾಗಬಹುದು. ನಾನು ಮುಖ್ಯಮಂತ್ರಿಗಳ ಮುಂದೆ ತಲೆತಗ್ಗಿಸುವಂತೆ ಆಗಬಾರದು. ಅಯ್ಯೋ, ಆಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬಹುದಿತ್ತಲ್ಲ ಎಂದು ಅಂದುಕೊಳ್ಳುವುದಕ್ಕಿಂತಲೂ ಈಗಲೇ ಎಲ್ಲಾ ರೀತಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಸೂಚಿಸಿದರು.
ಕೋವಿಡ್-19 ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳಿಸಿಕೊಡಬೇಕು. ವರದಿ ಬರುವುದಕ್ಕೆ 2-3 ದಿನ ಬೇಕಾಗುತ್ತದೆ. ದಾವಣಗೆರೆಯಲ್ಲೇ ವಿಆರ್‌ಡಿಎಲ್ ಪ್ರಾರಂಭಿಸುವುದು ಸೂಕ್ತ. ಕೋವಿಡ್ ಸಂದರ್ಭದಲ್ಲೇ ಜಿಲ್ಲಾ ಆಸ್ಪತ್ರೆಗೆ ಅಗತ್ಯ ಪರಿಕರ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಸಲಹೆ ನೀಡಿದರು. ಕೋವಿಡ್ ವೈರಸ್ ಹರಡುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಪಾಲನೆ ಅತೀ ಮುಖ್ಯ. ದಾವಣಗೆರೆಯಲ್ಲಿ ಲಾಕ್‌ಡೌನ್ ಹೇಗೆ ಪಾಲನೆಯಾಗುತ್ತಿದೆ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು. ಆಜಾದ್‌ನಗರ, ಶಾಂತಿ ಟಾಕೀಸ್ ರಸ್ತೆ ಇತರೆ ಭಾಗದಲ್ಲಿ ಲಾಕ್‌ಡೌನ್ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂದು ಶಾಸಕ ಎಸ್.ವಿ. ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳವುದು ಸಹ ಮುಖ್ಯ. ನಗರಾಭಿವೃದ್ಧಿ ಇಲಾಖೆ ಸಚಿವನಾಗಿ ಆದನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ದಾವಣಗೆರೆಯ ಎಲ್ಲಾ ಕಡೆ ಸ್ವತ್ಛ ವಾತಾವರಣ ನಿರ್ಮಾಣ ಮಾಡಿರಬೇಕು. ಪರಿಶೀಲನಾ ಸಂದರ್ಭದಲ್ಲಿ ಏನಾದರೂ ಕೊರತೆ, ಸಮಸ್ಯೆ ಕಂಡು ಬಂದಲ್ಲಿ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿಗೆ ಸಚಿವರು ತಾಕೀತು ಮಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಭೈರತಿ ಬಸವರಾಜ್, ವಲಸೆ ಕಾರ್ಮಿಕರು ಒಳಗೊಂಡಂತೆ ಎಲ್ಲಾ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುವಂತೆ ತಿಳಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಜಿಪಂ ಅಧ್ಯಕ್ಷೆ ಯಶೋದಮ್ಮ, ಮೇಯರ್ ಬಿ.ಜಿ. ಅಜಯ್‌ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಇತರರು ಇದ್ದರು.