Advertisement

ಒಂದು ವಾರ ಜಿಲ್ಲೆಯಲ್ಲಿ 144 ಸೆಕ್ಷನ್‌

11:33 AM Mar 19, 2020 | Naveen |

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ನಿರ್ವಹಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾ.18 ರಿಂದಲೇ ಜಾರಿಯಾಗಿರುವ 144 ಸೆಕ್ಷನ್‌ ಮಾ. 24ರ ವರೆಗೆ ಮುಂದುವರಿಯಲಿದೆ.

Advertisement

ಬುಧವಾರ, ತಮ್ಮ ಕಚೇರಿಯಲ್ಲಿ ಕೊರೊನಾ ವೈರಸ್‌ ಸೋಂಕು ನಿಯಂತ್ರಣ ಮತ್ತು ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಜನದಟ್ಟಣೆ ಹೆಚ್ಚಿರುವ ಕಚೇರಿಗಳಲ್ಲಿ ಸಾರ್ವಜನಿಕರ ನಿಯಂತ್ರಿಸಲು ಕ್ರವವಹಿಸಬೇಕು ಎಂದರು.

ಆರ್‌ಟಿಓ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಮಹಾನಗರ ಪಾಲಿಕೆ, ತಾಲೂಕು ಕಚೇರಿಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಕಚೇರಿಗಳಲ್ಲಿ ಜನರನ್ನು ನಿಯಂತ್ರಿಸಲು ಕ್ರಮ ವಹಿಸಬೇಕು. ಆಧಾರ್‌ ಮಾಡಿಸುವವರಿಗೆ ದಿನಕ್ಕೆ 50 ಟೋಕನ್‌ ನೀಡಲಾಗುತ್ತಿದೆ. ಇದೇ ರೀತಿಯಲ್ಲಿ ಆರ್‌ಟಿಓ ಕಚೇರಿಯಲ್ಲಿಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಸಹಕರಿಸಬೇಕು. ಹೆಚ್ಚು ಗದ್ದಲ ಸೃಷ್ಟಿಸಬಾರದು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಇರಬೇಕು. ಕೆಲವು ನೌಕರರು ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ ಇತರೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಪ್ರತಿ ದಿನ ಓಡಾಡುತ್ತಿರುವುದು ಕಂಡು ಬಂದಿದೆ. ಅಂತಹ ಸಿಬ್ಬಂದಿಗಳು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶಿಸಿದರು.

ಜಿಲ್ಲೆಯಲ್ಲಿ ಕೊರೊನಾ ವೈರಸ್‌ (ಕೋವಿಡ್‌ -19) ಸೋಂಕು ಪ್ರಕರಣ ಇದುವರೆಗೆ ವರದಿಯಾಗಿಲ್ಲ. ಬಾಪೂಜಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಚಿಕಿತ್ಸೆ ನೀಡುವ 5 ಬೆಡ್‌ಗಳುಳ್ಳ ಪ್ರತ್ಯೇಕ ಮಕ್ಕಳ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ ಹಾಗೂ ಕೊರೊನಾ ಸೋಂಕಿಗೆ ಸಂಬಂಧಿ ಸಿದಂತೆ ಬೆಡ್‌ಗಳ ಸಂಖ್ಯೆಯನ್ನು 146ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

Advertisement

ಪಿಡಿಓಗಳಿಗೆ ಸೂಚನೆ: ನರೇಗಾ ಯೋಜನೆಯಡಿ ಗ್ರಾಮಗಳಲ್ಲಿ ಒಂದೊಂದು ತಂಡದಲ್ಲಿ ನೂರಾರು ಜನ ಒಟ್ಟೊಟ್ಟಿಗೆ ಕೆಲಸ ನಿರ್ವಹಿಸುತ್ತಾರೆ. ಈ ತಂಡಗಳಲ್ಲಿ ಕಾರ್ಮಿಕರಿಗೆ ಶೀತ, ಕೆಮ್ಮು ಲಕ್ಷಣಗಳು ಕಂಡು ಬಂದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಪಿಡಿಓಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪ್ರಯಾಣಿಕರಿಗೆ ಸಾನಿಟೈಸರ್‌: ಕೆಎಸ್‌ ಆರ್‌ಟಿಸಿ ಬಸ್‌ ಚಾಲಕರು ಮತ್ತು ನಿರ್ವಾಹಕರಿಗೆ ಸೋಪು, ಮಾಸ್ಕ್ಗಳನ್ನು ಈಗಾಗಲೇ ನೀಡಲಾಗಿದ್ದು, ಇನ್ನು ಮುಂದೆ ಪ್ರಯಾಣಿಕರು ಬಸ್‌ ಇಳಿದ ನಂತರ ಬಸ್‌ ನಿಲ್ದಾಣದಲ್ಲಿ ಸ್ಯಾನಿಟೈಸರ್‌ ನೀಡುವ ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಎಲ್ಲ ಸರ್ಕಾರಿ ಕಚೇರಿ ಪ್ರವೇಶದ್ವಾರಗಳಲ್ಲಿ ಥರ್ಮಲ್‌ ಸ್ಕ್ಯಾನರ್‌ಗಳನ್ನು ಅಳವಡಿಸಬೇಕಿದ್ದು, ಜಿಲ್ಲೆಗೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಥರ್ಮಲ್‌ ಸ್ಕ್ಯಾನರ್‌ಗಳನ್ನು ಖರೀದಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ. ರಾಜೀವ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಎಚ್‌ಓ ಡಾ| ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ರಾಘವನ್‌, ಡಿಡಿಎಲ್‌ಆರ್‌ ರಾಮಾಂಜನೇಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌. ಜೆ.ಬಣಕಾರ್‌, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ: ಭಾಸ್ಕರ್‌ ನಾಯ್ಕ,, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next