ದಾವಣಗೆರೆ: ಲಾಕ್‌ಡೌನ್ ಉಲ್ಲಂಘಿಸಿ ನಗರದಲ್ಲಿ ಶುಕ್ರವಾರ ರಸ್ತೆಗೆ ಇಳಿದಿದ್ದವರಿಗೆ ಪೊಲೀಸರು ಭರ್ಜರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ನೇತೃತ್ವದಲ್ಲಿ ನಿಜಲಿಂಗಪ್ಪ ಬಡಾವಣೆ ಮುಖ್ಯ ರಸ್ತೆ, ಶಾಮನೂರು ರಸ್ತೆ, ವಿನೋಬ ನಗರ 2ನೇ ಮುಖ್ಯ ರಸ್ತೆ, ಹಳೆ ಪಿಬಿ ರಸ್ತೆ, ಹೊಂಡದ ವೃತ್ತ, ಹಗೇದಿಬ್ಬ ವೃತ್ತ, ಆಜಾದ್ ನಗರ, ಬಾಷಾನಗರ ಮುಖ್ಯ ರಸ್ತೆ, ಮುಸ್ತಫಾ ನಗರ, ಆರ್‌ಎಂಸಿ ಯಾರ್ಡ್ ಇತರೆ ಭಾಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ 130ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿರುವ ಸಮುದಾಯ ಭವನಕ್ಕೆ ರವಾನಿಸಲಾಯಿತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರಬಾರದು. ನಿಮಗಾಗಿ ನಾವು ಬೀದಿಯಲ್ಲಿದ್ದೇವೆ. ದಯಮಾಡಿ ನೀವು ಮನೆಯಲ್ಲಿಯೇ ಇರಿ…, ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಅಜಾಗರೂಕತೆ ಸರಿಯಲ್ಲ. ಮನೆಯಲ್ಲಿ ಇದ್ದರೆ ಮನೆತನ…. ಹೊರಗಡೆ ಬಂದರೆ ಡೆಡ್ಲಿ ಕೊರೊನಾ.. ಎಂಬುದಾಗಿ ಇದೇ ವೇಳೆ ಪ್ರಚುರಪಡಿಸಲಾಯಿತು. ಸಮುದಾಯ ಭವನದಲ್ಲಿದ್ದವರ ಕೈಗೆ.. ಕ್ಷಮಿಸಿ ನಾನು ಲಾಕ್‌ಡೌನ್ ಉಲ್ಲಂಘನೆ ಮಾಡಿದ್ದೇನೆ… ಎಂಬ ನಾಮಫಲಕ ನೀಡಿ ತಿಳಿವಳಿಕೆ ಹೇಳಲಾಯಿತು. ಎಲ್ಲರಿಗೂ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳು ಥರ್ಮಲ್ ಸ್ಕ್ರೀನಿಂಗ್ ಒಳಗೊಂಡಂತೆ ಇತರೆ ತಪಾಸಣೆ ನಡೆಸಿದರು.
ವಿನೋಬ ನಗರ 2ನೇ ಮುಖ್ಯ ರಸ್ತೆಯಲ್ಲಿ ಓರ್ವ ಬೈಕ್ ಸವಾರನನ್ನ ಖುದ್ದು ತಡೆದ ಎಸ್ಪಿ ಹನುಮಂತರಾಯ, ಸರಿಯಾಗಿಯೇ ಬಿಸಿ ಮುಟ್ಟಿಸಿ ವಶಕ್ಕೆ ತೆಗೆದುಕೊಂಡರು. ಹಳೆ ಪಿಬಿ ರಸ್ತೆಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಬೈಕ್ ಸವಾರನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆಜಾದ್‌ನಗರ, ಬಾಷಾ ನಗರ ಮುಖ್ಯ ರಸ್ತೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಎಸ್ಪಿ ಹನುಮಂತರಾಯ ಬೈಕ್ ಸವಾರರು, ದಾರಿಹೋಕರಿಗೆ ತಿಳಿ ಹೇಳಿದರು. ಕೆಲವರನ್ನು ವಶಕ್ಕೆ ಸಹ ಪಡೆದರು. ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದವರನ್ನು ಬೆನ್ನಟ್ಟಿ ಹಿಡಿಯಲಾಯಿತು.