Advertisement

ಮೇ 24ಕ್ಕೆ ಸರ್ಕಾರದಿಂದ ಸಾಮೂಹಿಕ ವಿವಾಹ

11:23 AM Feb 06, 2020 | Naveen |

ದಾವಣಗೆರೆ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇ 24ರಂದು ಸಾಮೂಹಿಕ ವಿವಾಹ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪ್ರವರ್ಗ ಎ ಶ್ರೇಣಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿವಾಹ ನೆರವೇರಿಸುವ ಸಂಬಂಧ ದಿನಾಂಕ ನಿಗದಿ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಯವರು ಸಾಮೂಹಿಕ ವಿವಾಹಕ್ಕೆ ಏಪ್ರಿಲ್‌ 26 ಅಥವಾ ಮೇ 24 ಈ ಎರಡು ದಿನಾಂಕ ಸೂಚಿಸಿದ್ದರು. ಈ ಪೈಕಿ ಮೇ 24ರಂದು ವಿವಾಹ ನೆರವೇರಿಸಲು ಅನುಕೂಲಕರವಾಗಿರುವ ಹಿನ್ನೆಲೆಯಲ್ಲಿ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರು, ಇತರೆ ಪದಾಧಿಕಾರಿಗಳು ಸಮ್ಮಿತಿಸಿದ್ದರಿಂದ ಆ ದಿನದಂದು ಜಿಲ್ಲಾ ಧಿಕಾರಿಗಳು ವಿವಾಹಕ್ಕೆ ದಿನಾಂಕ ನಿಗದಿಗೊಳಿಸಿದರು.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವರು ದೇವಾಲಯದ ಕಚೇರಿಯಲ್ಲಿ ಅರ್ಜಿ ಪಡೆದು, ದಾಖಲೆ ನೀಡಿ, ವಿವಾಹ ನಡೆಯುವ ದಿನಾಂಕಕ್ಕೆ 30 ದಿನಗಳ ಮುಂಚಿತವಾಗಿ ದೇವಸ್ಥಾನದ ಕಾರ್ಯ ನಿರ್ವಹಣಾ ಧಿಕಾರಿಗಳಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು. ಸರ್ಕಾರದ ನಿಯಮದಂತೆ ಗಂಡಿಗೆ ಕನಿಷ್ಠ 21 ಮತ್ತು ಹೆಣ್ಣಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆ ಸಲ್ಲಿಸಬೇಕು. ವಿವಾಹ ನಡೆಯುವ ಸ್ಥಳದಲ್ಲಿ ವಿವಾಹ ನೋಂದಣಾಧಿಕಾರಿ ಮತ್ತು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸುವ ಬಗ್ಗೆ ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾಮೂಹಿಕ ವಿವಾಹದಲ್ಲಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್‌ ಮತ್ತು ಶಲ್ಯಕ್ಕಾಗಿ 5,000 ರೂ. ಪ್ರೋತ್ಸಾಹ ಧನವನ್ನು ಆತನ ಖಾತೆಗೆ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆಗೆ 10,000 ರೂ. ಗಳನ್ನು ನೇರವಾಗಿ ವಧುವಿನ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು. ವಧುವಿಗೆ ನೀಡುವ 40,000 ಮೊತ್ತದಲ್ಲಿ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡುಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Advertisement

ಸಾಮೂಹಿಕ ವಿವಾಹಕ್ಕೆ ವಧು-ವರರೊಂದಿಗೆ ಎಷ್ಟು ಜನ ಬಂಧುಗಳು/ಪೋಷಕರು ಆಗಮಿಸುತ್ತಾರೆ ಎಂಬ ಬಗ್ಗೆ ಮುಂಚಿತವಾಗಿ ವಧು-ವರರಿಂದ ಮಾಹಿತಿ ಪಡೆದು ಅವರುಗಳಿಗೆ ದೇವಾಲಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು.

ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಿಕೊಡುವಂತೆ ದೇವಸ್ಥಾನದ ಸಮಿತಿ ಅಧ್ಯಕ್ಷರು ವಿನಂತಿಸಿದ್ದು, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಈ ಬಗ್ಗೆ ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಾಚೀನ ವಸ್ತು ಸಂರಕ್ಷಿಸಿ: ಮುಜರಾಯಿ ಇಲಾಖೆಯಲ್ಲಿನ ಪ್ರಾಚೀನ ವಸ್ತುಗಳನ್ನು ಸಂರಕ್ಷಿಸಬೇಕು. ಅನಾದಿ ಕಾಲದ ಚಿನ್ನ, ಬೆಳ್ಳಿ, ಒಡವೆಗಳು, ವಿಗ್ರಹಗಳು, ತಾಳೆಗರಿ ಇತ್ಯಾದಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಸಂರಕ್ಷಣೆಗೆ ಸಂಬಂಧಿಸಿದವರು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಆನಂದ್‌, ತಹಶೀಲ್ದಾರರಾದ ಸಂತೋಷ್‌ಕುಮಾರ್‌, ನಾಗರಾಜ್‌, ತಿಮ್ಮಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌. ಕೆ.ಎಚ್‌, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಎಸ್‌.ಓ.ರವಿ, ಸಾಮಾಜಿಕ ಭದ್ರತೆ ಶಾಖೆಯ ಸಹಾಯಕ ನಿರ್ದೇಶಕಿ ನೀಲಾ.ಎಸ್‌, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next