Advertisement

4 ಕಾರ್ಮಿಕ ಕೋಡ್‌ ಮಾಲೀಕರ ಪರ

10:05 AM Aug 03, 2019 | Naveen |

ದಾವಣಗೆರೆ: ಕೇಂದ್ರ ಸರ್ಕಾರ ಕಾರ್ಮಿಕ ವಲಯ ವಿರೋಧಿ 4 ಕಾರ್ಮಿಕ ಕೋಡ್‌ 2019, ಮೋಟಾರ್‌ ವಾಹನ ಮಸೂದೆ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಶುಕ್ರವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಕೇಂದ್ರ ಸರ್ಕಾರ 44 ಕಾರ್ಮಿಕ ಕಾಯ್ದೆಗಳ ಬದಲಿಗೆ 4 ಕಾರ್ಮಿಕ ಕೋಡ್‌-2019 ಮಸೂದೆ ಮಂಡಿಸಿದೆ. 4 ಕಾರ್ಮಿಕ ಕೋಡ್‌ ಮಸೂದೆ ಅಕ್ಷರಶಃ ಕಾರ್ಮಿಕ ವಿರೋಧಿ. 4 ಕಾರ್ಮಿಕ ಕೋಡ್‌ ಮಾಲೀಕರ ಶೋಷಣೆ ಮತ್ತು ಲೂಟಿ ಪರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ವರ್ಗ ಅನೇಕ ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ 44 ಕಾರ್ಮಿಕ ಕಾಯ್ದೆಗಳು ಜಾರಿಗೆ ಬಂದ ಪರಿಣಾಮ ಕಾರ್ಮಿಕರಿಗೆ ಅಲ್ಪಸ್ವಲ್ಪ ಸೌಲಭ್ಯ ದೊರೆಯುತ್ತಿದ್ದವು. ಆದರೆ, ಕಾರ್ಮಿಕ ವಿರೋಧಿ ಮೋದಿ ಸರ್ಕಾರ ದೊರೆಯುತ್ತಿದ್ದ ಸೌಲಭ್ಯಗಳನ್ನೂ ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಲೇ ಇತ್ತು. ಈಗ ಮಸೂದೆಯ ಮೂಲಕ ಕಾರ್ಮಿಕ ಸೌಲಭ್ಯ ಕಬಳಿಸುತ್ತಿದೆ ಎಂದು ದೂರಿದರು.

ಭಾರತದ 5ನೇ ಕಾರ್ಮಿಕ ಸಮ್ಮೇಳನದ ತೀರ್ಮಾನದಂತೆ ಮಾಸಿಕ ವೇತನ 18 ಸಾವಿರ ಎಂದು ನಿರ್ಧರಿಸಲಾಗಿತ್ತು. ಕೇಂದ್ರದ ಮಸೂದೆ ಪ್ರಕಾರ ವೇತನ 4,628 ರೂ. ಮಾತ್ರ ಎಂದಿರುವುದು ಅತ್ಯಂತ ಖಂಡನೀಯ.

ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷೆ ಇತ್ಯಾದಿಗಳು ಹಿಂದಿನ ಕಾಯ್ದೆಯಲ್ಲಿ ಇದ್ದವು. ಹೊಸ ಮಸೂದೆ ಆ ಎಲ್ಲವನ್ನೂ ಹಿಂದಕ್ಕೆ ಪಡೆಯುವ ಹುನ್ನಾರ ಹೊಂದಿದೆ. ಕೆಲಸದ ವೇಳೆಯಲ್ಲಿನ ಯಾವುದೇ ರೀತಿಯ ಅವಘಡ, ಅನಾರೋಗ್ಯಕ್ಕೆ ಕಾರ್ಮಿಕರೇ ಹೊಣೆಗಾರರು. ಮಾಲೀಕರಲ್ಲ ಎಂಬುದು ಕಾರ್ಮಿಕ, ಜೀವ ವಿರೋಧಿ ನೀತಿ ಎಂದು ದೂರಿದರು.

Advertisement

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೋಟಾರ್‌ ವಾಹನ ಮಸೂದೆ ಅತ್ಯಂತ ಅಪಾಯಕಾರಿ. ಅಪಘಾತ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಮಸೂದೆ ಸಾರ್ವಜನಿಕರಿಗೆ, ವಾಹನ ಮಾಲೀಕರು, ಚಾಲಕರಿಗೆ ಸಾಕಷ್ಟು ಕಿರುಕುಳಕ್ಕೆ ಕಾರಣವಾಗುತ್ತದೆ. ಕೂಡಲೇ ಎರಡೂ ಮಸೂದೆಗಳನ್ನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಆನಂದರಾಜ್‌, ಆವರಗೆರೆ ಎಚ್.ಜಿ. ಉಮೇಶ್‌, ಕೆ.ಎಲ್. ಭಟ್, ಮಂಜುನಾಥ್‌ ಕುಕ್ಕುವಾಡ, ಕೆ.ಎಚ್. ಆನಂದರಾಜ್‌, ಆವರಗೆರೆ ವಾಸು, ಆವರಗೆರೆ ಚಂದ್ರು, ಎನ್‌.ಟಿ. ಬಸವರಾಜ್‌, ಐರಣಿ ಚಂದ್ರು, ಸರೋಜಾ, ಎಂ.ಬಿ. ಶಾರದಮ್ಮ, ವಿಶಾಲಾಕ್ಷಿ, ಎಸ್‌.ಎಸ್‌. ಮಲ್ಲಮ್ಮ, ಲೋಕಿಕೆರೆ ಆಂಜಿನಪ್ಪ, ದಾದಾಪೀರ್‌, ಕೆ. ಶ್ರೀನಿವಾಸಮೂರ್ತಿ, ಉಮಾಪತಿ, ಲೋಕೇಶ್‌, ಶಿವಾಜಿರಾವ್‌, ಲಕ್ಷ್ಮಣ್‌, ಶಿವಕುಮಾರ್‌, ಜಯಂತಿ, ಮಂಜುನಾಥ್‌ ಕೈದಾಳೆ, ಹಾಲೇಶನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next