Advertisement

ಸಮಾನ ಅನುದಾನಕ್ಕೆ ಸದಸ್ಯರ ಆಗ್ರಹ

01:14 PM Aug 17, 2019 | Naveen |

ದಾವಣಗೆರೆ: ಕೆಲ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಭಯೋತ್ಪಾದಕರಂತೆ ಇದ್ರೆ ಕಷ್ಟದಲ್ಲಿದ್ದವರು, ಸಂತ್ರಸ್ತರಿಗೆ ಪರಿಹಾರ ದೊರೆಯಲಿಕ್ಕೆ ಹೆಂಗೆ ಸಾಧ್ಯ….

Advertisement

ಇದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆಶೈಜಲಾ ಬಸವರಾಜ್‌ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ಗೆ ಕೇಳಿದ ಪ್ರಶ್ನೆ.

ಶುಕ್ರವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅನುಪಾಲನಾ ವರದಿ ನೀಡುತ್ತಿದ್ದಾಗ, ಬಾಡ ಗ್ರಾಮದ ರಾಜಪ್ಪ ಎಂಬುವರು 2018ರ ಏ. 14 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಆತ್ಮಹತ್ಯೆ ಪರಿಶೀಲನಾ ಸಭೆ ತಿರಸ್ಕರಿಸಿದೆ. ರಾಜಪ್ಪಗೆ ಕೈಗಡ ಸಾಲ ಇದ್ದ ಕಾರಣಕ್ಕೆ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಉತ್ತರ ನೀಡಿದರು.

ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಭಯೋತ್ಪಾದಕರಂತೆ ಇದ್ರೆ ಕಷ್ಟದಲ್ಲಿದ್ದವರು, ಸಂತ್ರಸ್ತರಿಗೆ ಹೆಂಗೆ ಪರಿಹಾರ ದೊರೆಯಲಿಕ್ಕೆ ಸಾಧ್ಯ. ಆರ್‌ಐ, ವಿಎಯಾರಾದರೂ ಏನಾದರೂ ಹೇಳಿದರೆ ಎಲ್ಲಿ ಜೈಲಿಗೆ ಹೋಗಬೇಕಾಗುತ್ತದೆಯೋ ಎನ್ನುವ ರೀತಿ ಪ್ರಶ್ನೆ ಕೇಳುತ್ತಾರೆ. ನೆರೆ ಸಂತ್ರಸ್ತರಿಗೆ ಸಹ ಅದೇ ರೀತಿ ಕ್ರಾಸ್‌ ಪ್ರಶ್ನೆ ಕೇಳಿದ್ದಾರೆ. ಕೆಳ ಹಂತದ ಅಧಿಕಾರಿಗಳು ಭಯೋತ್ಪಾದಕರಂತೆ ವರ್ತನೆ ಮಾಡುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆರ್‌ಐ, ವಿಎ ಏನೇ ಬರೆದರೂ ನಡೆಯುತ್ತದೆ ಎಂಬ ಕಾರಣಕ್ಕೆ ಆ ರೀತಿ ಪ್ರಶ್ನೆ ಕೇಳುತ್ತಾರೆ. ವರದಿ ನೀಡುತ್ತಾರೆ. ರಾಜಪ್ಪಗೆ ಸೊಸೈಟಿ ಸಾಲ ಇತ್ತು ಎಂಬುದಕ್ಕೆ ದಾಖಲೆ ಇವೆ. ಅವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರನ್ನು ನಾನೇ ಶಾಲೆಗೆ ಸೇರಿಸಿದ್ದೇನೆ. ನನ್ನ ಜೊತೆ ಬಾಡಕ್ಕೆ ಬಂದರೆ ಆಕ್ಕಪಕ್ಕದ ಮನೆಯವರೇ ಎಲ್ಲವನ್ನೂ ಹೇಳುತ್ತಾರೆ. ಸಾಲ ಇರುವುದಕ್ಕೆ ಎಲ್ಲಾ ದಾಖಲೆ ಕೊಡುತ್ತೇನೆ. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಹೇಳಿದರೂ ಬೇಕಾಬಿಟ್ಟಿಯಾಗಿ ವರದಿ ಕೊಡುತ್ತಾರೆ. ನೀವು ಅದನ್ನು ನಮ್ಮ ಗಮನಕ್ಕೆ ತರುವುದೇ ಇಲ್ಲ ಎಂದು ಹೇಳಿದರು.

Advertisement

ಈ ವಿಷಯವಾಗಿ ಸಾಕಷ್ಟು ಚರ್ಚೆ ನಡೆದ ನಂತರ, ಆತ್ಮಹತ್ಯೆ ಪರಿಶೀಲನಾ ಸಭೆಗೆ ಮರು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಚ್. ಬಸವರಾಜೇಂದ್ರ ಸೂಚಿಸಿದರು.

ದಾವಣಗೆರೆ: ಸರ್ಕಾರಿ ಮತ್ತು ಖಾಸಗಿ ಕೊಳವೆಬಾವಿ ಮರುಪೂರಣಕ್ಕೆ ಸಮಾನ ಅನುದಾನ ಬಿಡುಗಡೆಗೆ ಅವಕಾಶ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶುಕ್ರವಾರ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಿರ್ಧರಿಸಿತು.

ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ ಮಾತನಾಡಿ, ಖಾಸಗಿಯವರಿಗೆ ಕೊಳವೆಬಾವಿ ಮರು ಪೂರಣಕ್ಕೆ 18 ಸಾವಿರ ನೀಡಲಾಗುತ್ತದೆ. ಆದೇ ಗ್ರಾಮ ಪಂಚಾಯತಿ ಇತರೆ ಸರ್ಕಾರಿ ಯೋಜನೆಯ ಕೊಳವೆಬಾವಿಗಳಿಗೆ 75 ಸಾವಿರ ಕೊಡಲಾಗುತ್ತದೆ. ಖಾಸಗಿ ಮತ್ತು ಸರ್ಕಾರಿ ಯೋಜನೆ ಕೊಳವೆಬಾವಿಯ ಮರುಪೂರಣ ಕೆಲಸ ಒಂದೇ. ಆದರೆ, ಅನುದಾನ ಕೊಡುವುದರಲ್ಲಿ ಬಹಳ ವ್ಯತ್ಯಾಸ ಇದೆ. ಸರ್ಕಾರಿ ಮತ್ತು ಖಾಸಗಿ ಕೊಳವೆ ಬಾವಿ ಮರುಪೂರಣಕ್ಕೆ ಸಮಾನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ತೀರ್ಮಾನಿಸಿತು.

ದಾವಣಗೆರೆ ಜಿಲ್ಲೆಯಲ್ಲಿ ಅದರಲ್ಲೂ ಜಗಳೂರು ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ. ಅಣಬೂರು ಜಿಲ್ಲಾ ಪಂಚಾಯತ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ. ಜನಸಂಖ್ಯೆಗೆ ತಕ್ಕಂತೆ ಆಸ್ಪತ್ರೆ ಪ್ರಾರಂಭಿಸಿ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ. ಸವಿತಾ ಇತರರು ಒತ್ತಾಯಿಸಿದರು.

10 ರಿಂದ 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು ಎಂಬ ನಿಯಮ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ ತಿಳಿಸಿದರು. ಅಗತ್ಯ ಇರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.

ಭದ್ರಾ ಬಲದಂಡೆ ನಾಲೆಗೆ 2,188 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ನಾಲೆಯಲ್ಲಿ ಇರುವ ಹೂಳು ಗಿಡ- ಮರ ತೆಗೆಸಲು ಅನುದಾನ ಇಲ್ಲ. ಜಿಲ್ಲಾ ಪಂಚಾಯತಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಆನುಕೂಲ ಆಗುತ್ತದೆ ಎಂದು ಭದ್ರಾ ನಾಲಾ ಅಧಿಕಾರಿಗಳು ಮನವಿ ಮಾಡಿಕೊಂಡರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ವಾಗೀಶಸ್ವಾಮಿ ಮಾತನಾಡಿ, ಭದ್ರಾ ನಾಲೆಯಲ್ಲಿ ಹೂಳು ಇದೆ. ಮರ-ಗಿಡ ಇವೆ. ಹಾಗಾಗಿ ನೀರು ಸರಾಗವಾಗಿ ಹರಿದು ಹೋಗಲು ಅನಾನೂಕಲವಾಗಿದೆ. ಅದಕ್ಕೆ ಅಗತ್ಯ ಅನುದಾನ ಬೇಕಾಗುತ್ತದೆ. ಅಧಿಕಾರಿಗಳು ಸಹ ಸರಿಯಾಗಿ ನೀರು ಹರಿಸಬೇಕು. ನೀರಗಂಟಿಗಳಿಗೆ ಸರಿಯಾಗಿ ವೇತನ ಕೊಟ್ಟು ಕೆಲಸ ಮಾಡಿಸಿ ಎಂದರು. ನಾಲಾ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.

ಜಿಲ್ಲೆಯ ಅನೇಕ ಶಾಲೆಯಲ್ಲಿ ಶೌಚಾಲಯಗಳ ನಿರ್ವಹಣೆ ಸರಿಯಾಗಿಯೇ ಇಲ್ಲ ಎಂದು ಸಿಇಒ ಎಚ್. ಬಸವರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

2017-18ನೇ ಸಾಲಿನಲ್ಲಿ 74 ಶೌಚಾಲಯಕ್ಕೆ ಅನುದಾನ ಬಿಡುಗಡೆಯಾಗಿದೆ. ಜಗಳೂರುನಲ್ಲಿ 31, ಚನ್ನಗಿರಿಯಲ್ಲಿ 15, ದಾವಣಗೆರೆ ದಕ್ಷಿಣದಲ್ಲಿ 2 ಒಟ್ಟು 74 ಶೌಚಾಲಯ ಕಟ್ಟಿಸಿದ ನಂತರ ಉದ್ಯೋಗ ಖಾತರಿಯಲ್ಲಿ ಕಟ್ಟಿಸಿಕೊಳ್ಳುವಂತೆ ಹೇಳಲಾಗುತ್ತಿದೆ. ನಮ್ಮ ಇಲಾಖೆಯಿಂದ 1 ಲಕ್ಷ ನೀಡಬೇಕು. ಖಾತರಿ ಯೋಜನೆಯಿಂದ 70 ಸಾವಿರ ನೀಡಲಾಗುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದರು.

ಶೌಚಾಲಯ, ಕಾಂಪೌಂಡ್‌, ನೀರಿನ ವ್ಯವಸ್ಥೆಯಂತೆ ಮಕ್ಕಳಿಗೆ ಕುಳಿತುಕೊಳ್ಳಲು ಅಗತ್ಯ ಕೊಠಡಿಗಳ ವ್ಯವಸ್ಥೆ ಮಾಡಿ ಎಂದು ಉಪಾಧ್ಯಕ್ಷ ಸುರೇಂದ್ರನಾಯ್ಕ ಒತ್ತಾಯಿಸಿದರು. 1,250 ಕೊಠಡಿ ಬೇಕು. 750 ಕೊಠಡಿಗಳನ್ನು ಕೆಡವಿ, ಮತ್ತೆ ಕಟ್ಟಲಿಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಕೆಲವಾರು ಶಾಲೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಶಿಕ್ಷಕರು, ಇನ್ನು ಕೆಲವು ಶಾಲೆಯಲ್ಲಿ ಶಿಕ್ಷಕರೇ ಇಲ್ಲ. ಹೆಚ್ಚುವರಿ ಶಿಕ್ಷಕರ ಸಮಸ್ಯೆ ಇದೆ ಎಂದು ಸುರೇಂದ್ರನಾಯ್ಕ ಹೇಳಿದರು. ವರ್ಗಾವಣೆ ನೀತಿ ಆ ರೀತಿ ಇದೆ. ಜಿಲ್ಲೆಯಲ್ಲಿ ವರ್ಗಾವಣೆ ಕೋರಿ 2,500 ಅರ್ಜಿ ಸಲ್ಲಿಸಲಾಗಿತ್ತು. ಅವರಲ್ಲಿ 240 ಜನ ಶಿಕ್ಷಕರ ವರ್ಗಾವಣೆ ಮಾತ್ರ ಆಗಿದೆ ಎಂದು ಡಿಡಿಪಿಐ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next