Advertisement

ಸಮಾಜ ಸೇವೆಯಿಂದ ಜೀವನ ಸಾರ್ಥಕ

11:40 AM Dec 09, 2019 | Naveen |

ದಾವಣಗೆರೆ: ಸಮಾಜ ಸೇವೆ… ಎನ್ನುವುದು ಜೀವನದ ಸಾರ್ಥಕತೆಯ ಪ್ರತೀಕ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.

Advertisement

ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಸಮಾನ ಮನಸ್ಕರ ಸೇವಾ ಸಮಿತಿ ನೂತನ ಸಂಸ್ಥೆ ಉದ್ಘಾಟನೆ ಮತ್ತು ಕನ್ನಡ ನಿತ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾರೂ ಸಹ ಸಮಾಜದ ಸೇವೆ ಮಾಡದೆ ಸಾಯುವುದು ತರವಲ್ಲ. ಕೈಲಾದಷ್ಟು ಸೇವೆ ಮಾಡುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರು ನಿಸ್ವಾರ್ಥತೆ, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ದೇಶ, ಸಮಾಜ ಸೇವೆ ಮಾಡಬೇಕು. ಅಂತಹವರ ಹೆಸರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಇರುತ್ತದೆ. ಬುದ್ಧ, ಬಸವಣ್ಣ,
ಗಾಂಧೀಜಿ, ಅಂಬೇಡ್ಕರ್‌ ಮುಂತಾದವರು ನಿಸ್ವಾರ್ಥವಾದ ದೇಶ, ಸಮಾಜ ಸೇವೆ ಮಾಡಿರುವ ಕಾರಣಕ್ಕಾಗಿಯೇ ಇಂದಿಗೂ ಅವರನ್ನು ಸ್ಮರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇಂದಿನ ಆಧುನಿಕ ವಾತಾವರಣದಲ್ಲಿ ಹಣ, ಅಧಿಕಾರ, ಅಂತಸ್ತು ಗಳಿಸುವುದೇ ಪ್ರಮುಖ ಗುರಿಯಾಗಿದೆ. ಅದರಿಂದಲೇ ತೃಪ್ತಿ ಎಂಬ ಮನೋಭಾವ ಇದೆ. ಹಣ, ಅಧಿಕಾರ, ಅಂತಸ್ತನಿಂದ ನೆಮ್ಮದಿ, ತೃಪ್ತಿ ದೊರೆಯುವುದಿಲ್ಲ, ಸಂಕಷ್ಟದಲ್ಲಿರುವರ ಒಂದಷ್ಟು ಸೇವೆ ಮಾಡುವುದರಿಂದ ಆತ್ಮತೃಪ್ತಿ ದೊರೆಯುತ್ತದೆ. ಇತರರ ಸೇವೆ ಮಾಡುವುದು ದೇವರಿಗೂ ಸಹ ತೃಪ್ತಿಯನ್ನು ನೀಡುತ್ತದೆ ಎಂದು ತಿಳಿಸಿದರು.

ಪ್ರಸ್ತುತ ವಾತಾವರಣದಲ್ಲಿ ಎಲ್ಲಾ ಕಡೆ ಸ್ವಾರ್ಥವೇ ಹೆಚ್ಚಾಗಿ ಕಂಡು ಬರುತ್ತಿದೆ. ಹೆತ್ತ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳದ ನಿಕೃಷ್ಟ… ಪರಿಸ್ಥಿತಿ ಕಂಡು ಬರುತ್ತಿರುವುದು ಆತಂಕಕಾರಿ. ಬೆಂಗಳೂರಿನಂತಹ ವಾತಾವರಣ ಈಗ ದಾವಣಗೆರೆಯ ಪ್ರತಿಷ್ಠಿತ ಬಡಾವಣೆಯಲ್ಲೂ ಕಂಡು ಬರುತ್ತಿದೆ. ವಯಸ್ಸಾದ ತಂದೆ-ತಾಯಿಗಳನ್ನು ನೋಡಿಕೊಳ್ಳದೆ ವೃದ್ಧಾಶ್ರಮಗಳ ಪಾಲು ಮಾಡುತ್ತಿರುವುದು ನಿಜಕ್ಕೂ ದೊಡ್ಡ ದುರಂತ. ತಂದೆ-ತಾಯಿಗಳನ್ನ ನೋಡಿಕೊಳ್ಳುವುದು ಸಹ ಒಂದು ಸೇವೆಯೇ. ಹಾಗಾಗಿ ಎಲ್ಲರೂ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಾನವರಾಗಿ ಹುಟ್ಟಿರುವ ಪ್ರತಿಯೊಬ್ಬರು ಸಾಯಲೇಬೇಕು. ಸಾಯುವ ಮುನ್ನ ಪರರಿಗಾಗಿ ಬದುಕುವಂತಹ ಶ್ರೇಷ್ಠ ಗುಣವನ್ನು ನಮ್ಮದಾಗಿಸಿಕೊಳ್ಳಬೇಕು. ಪರರಿಗೆ ಕೈಲಾದಷ್ಟು ಸಹಾಯ, ನೆರವು, ಸೇವೆ ನೀಡುವ ಉದ್ದೇಶದಿಂದ ಪ್ರಾರಂಭವಾಗಿರುವ ಸಮಾನ ಮನಸ್ಕರ ಸೇವಾ ಸಮಿತಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಾರ್ಥಕತೆ ಪಡೆದುಕೊಳ್ಳಲಿ ಎಂದು ಆಶಿಸಿದರು.

Advertisement

ಸಮಾನ ಮನಸ್ಕರ ಸೇವಾ ಸಮಿತಿ ಸಂಸ್ಥೆ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಜಾಗತೀಕರಣವನ್ನು ಅಪ್ಪಿ, ಒಪ್ಪಿಕೊಂಡು, ಸ್ವಾರ್ಥತೆಯ ಜೀವನ ನಡೆಸುತ್ತಿರುವ ಕಾಲಘಟ್ಟದಲ್ಲಿ ಸಮಾನ ಮನಸ್ಕರು ದೊರೆಯುವರೇ ಎಂಬ ಪ್ರಶ್ನೆ ಮತ್ತು ಸವಾಲು ಎಲ್ಲರ ಮುಂದಿದೆ. ಎಲ್ಲರೂ ಅವಕಾಶ, ಪರಿಸ್ಥಿತಿ, ತಮಗೆ ಬೇಕಾದ ಅನುಕೂಲಕ್ಕಾಗಿ ಅಸಹಜ ಬದುಕು ನಡೆಸುತ್ತಿದ್ದಾರೆ. ಸಂಬಂಧಗಳು ಯೂಸ್‌ ಆ್ಯಂಡ್‌ ಥ್ರೋ… ಎನ್ನುವಂತಾಗುತ್ತಿವೆ. ಅಂತದ್ದರ ನಡುವೆಯೂ ಕೆಲವರು ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡುತ್ತಿದ್ದಾರೆ. ಒಳ್ಳೆಯ ಉದ್ದೇಶದೊಂದಿಗೆ ಪ್ರಾರಂಭವಾಗಿರುವ ಸಮಾನ ಮನಸ್ಕರ ಸೇವಾ ಸಮಿತಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲಿ ಎಂದು ತಿಳಿಸಿದರು.

ಸಮಾನ ಮನಸ್ಕರ ಸೇವಾ ಸಮಿತಿ ಅಧ್ಯಕ್ಷ ಬಂಕಾಪುರದ ಚನ್ನಬಸಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ಸಮಿತಿ ಅಧ್ಯಕ್ಷ ಜಿ.ಅಬ್ದುಲ್‌ ಸತ್ತಾರ್‌ಸಾಬ್‌ ಅಧ್ಯಕ್ಷತೆ ವಹಿಸಿದ್ದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕೆ.ಎಚ್‌. ಮಂಜುನಾಥ್‌, ಉಪಾಧ್ಯಕ್ಷ ಬಕ್ಕೇಶ್‌ ನಾಗನೂರು ಇತರರು ಇದ್ದರು. ಸಂಗೀತಾ ಮತ್ತು ವೀಣಾ ಪ್ರಸಾದ್‌ ಪ್ರಾರ್ಥಿಸಿದರು. ಟಿ. ಅಜ್ಜೇಶಿ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next