Advertisement

ಕನಕದಾಸರ ಕೃತಿಗಳು ಪ್ರಸ್ತುತ ಸಮಾಜಕ್ಕೆ ಪೂರಕ

11:16 AM Nov 16, 2019 | Naveen |

ದಾವಣಗೆರೆ: ಇಂದು ಸಮಾಜದಲ್ಲಿ ಇತಿಹಾಸ ಮತ್ತು ಪುರಾಣದ ಮಹಾಪುರುಷರನ್ನು ದೇವರನ್ನಾಗಿಸುವ ಪರಿಪಾಠವಿದೆ. ಇದು ಬದಲಾಗಬೇಕು ಎಂದು ಡಿ.ಆರ್‌.ಎಂ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ| ವಡ್ನಾಳ್‌ .ಜಿ.ರುದ್ರೇಶ್‌ ಹೇಳಿದ್ದಾರೆ.

Advertisement

ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸರ ಸರಳ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಮನುಷ್ಯ ದೇವರಾದರೆ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಸಮಾಜದ ಶಕ್ತಿ ಮತ್ತು ನಮ್ಮ ನೆರಳಾಗಿರುವ ಪುರಾಣದ ಮತ್ತು ಇತಿಹಾಸದ ಮಾನವತಾವಾದಿಗಳ ಆದರ್ಶ, ಸಂದೇಶ ಅನುಸರಿಸಬೇಕು ಎಂದರು.

ಕನಕದಾಸರು ಜಾತಿ ಮತ್ತು ಧರ್ಮದ ಅಂಧಕಾರ ತೊಲಗಿಸಲು ಪಾಳೆಗಾರಿಕೆ ಬಿಟ್ಟು ಆಳವಾದ ಅನುಭವದ ಮೂಲಕ ಸಮಾಜ ಕಟ್ಟುವಿಕೆ ಕೆಲಸ ಮಾಡಿದರು. ಅವರ ಕೃತಿಗಳು ಪ್ರಸ್ತುತ ಸಮಾಜಕ್ಕೆ ಪೂರಕವಾಗಿವೆ ಎಂದು ಹೇಳಿದರು.

ಕನಕದಾಸರು ಸಮಾಜದ ವಿಜ್ಞಾನಿಯಾಗಿ, ರಾಜಕೀಯ ಮತ್ತು ಧಾರ್ಮಿಕ ಚಿಂತನೆಯಲ್ಲಿ ತೊಡಗಿ, ಲೋಕ ಕಲ್ಯಾಣಕ್ಕಾಗಿ ದಾಸರಾದರು. ಪಾಳೇಗಾರ ವೃತ್ತಿಯಲ್ಲಿದ್ದ ಅವರು ಶಸ್ತ್ರಾಸ್ತ್ರ ಮನುಷ್ಯನ ಕುಲಕ್ಕೆ ಮಾರಕ ಎಂಬುದಾಗಿ ತಿಳಿದು ಅದನ್ನು ತ್ಯಜಿಸಿದರು ಎಂದು ತಿಳಿಸಿದರು.

ಧಾನ್ಯಗಳಿಗೆ ಧ್ವನಿ ನೀಡಿದವರು ಕನಕದಾಸರು. ರಾಮ ಧಾನ್ಯಚರಿತೆಯ ಮೂಲಕ ಧಾನ್ಯಗಳಿಗೆ ಧ್ವನಿಯಾಗಿ ಸಮಾಜದ ಮೇಲು-ಕೀಳಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ಮೋಹನ ತರಂಗಿಣಿ ಮತ್ತು ಹರಿಭಕ್ತಸಾರ ಕೃತಿಗಳ ಮೂಲಕ ಜನರಲ್ಲಿ ಭಕ್ತಿಯ ಕುರಿತು ತಿಳಿವಳಿಕೆ ಮೂಡಿಸಿ, ನಾನು ಎಂಬ ಅಹಂಕಾರ ಇಲ್ಲದಿದ್ದರೆ ಎಲ್ಲರೂ ಸ್ವರ್ಗಕ್ಕೆ ಹೋಗಬಹುದು ಎಂಬುದನ್ನು ಸಮಾಜಕ್ಕೆ ತಿಳಿಸಿಕೊಟ್ಟವರು ಎಂದು ಹೇಳಿದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಮಾಜದ ಮುಖಂಡರು, ಅಧಿಕಾರಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಮರ್ಪಿಸಿದರು. ಕನಕದಾಸರ ಭಾವಚಿತ್ರದ ಬಿಡಿಸುವುದು ಹಾಗೂ ಭಾರತೀಯ ಸಂಸ್ಕೃತಿಗೆ ಕನಕದಾಸರ ಕೊಡುಗೆ ಎಂಬ ವಿಷಯ ಕುರಿತು ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಕುರುಬರ ಸಮಾಜದ ಜಿಲ್ಲಾಧ್ಯಕ್ಷ ಕೆಂಗೋ ಹನುಮಂತಪ್ಪ, ಕುರುಬ ಸಮಾಜದ ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ, ಬಿ.ಎಚ್‌. ಹನುಮಂತಪ್ಪ, ಎಚ್‌.ಪಿ.ಗೋಣೆಪ್ಪ, ರೈತ ಮುಖಂಡ ಬಲ್ಲೂರು ರವಿಕುಮಾರ್‌ ಪ್ರಭಾರ ಅಪರ ಜಿಲ್ಲಾ ಧಿಕಾರಿ ಜಿ.ನಜ್ಮಾ, ಎಎಸ್‌ಪಿ ರಾಜೀವ್‌, ತಹಶೀಲ್ದಾರ್‌ ಸಂತೋಷ್‌ಕುಮಾರ್‌, ಚುನಾವಣಾ ತಹಶೀಲ್ದಾರ್‌ ಪ್ರಸಾದ್‌, ಜಿ.ಪಂ ಉಪ ಕಾರ್ಯದರ್ಶಿ ಆನಂದ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ದಿವಾಕರ ರೆಡ್ಡಿ, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next