ಡಾ|ಎಂ.ಚಿದಾನಂದ ಮೂರ್ತಿ ಬೆಂಗಳೂರಲ್ಲಿ ಶನಿವಾರ ನಿಧನರಾದ ಸುದ್ದಿ ತಿಳಿದ ಅವರ ಹುಟ್ಟೂರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೋಗಲೂರಲ್ಲಿ ನೀರವ ಮೌನ ಆವರಿಸಿತ್ತು. ಡಾ|ಚಿಮೂ ಅವರು ಕೊಟ್ಟೂರಯ್ಯ (ಕೊಟ್ರಯ್ಯ) ಹಾಗೂ ಪಾರ್ವತಮ್ಮ ದಂಪತಿಯ ಏಕೈಕ ಪುತ್ರ. ಅವರಿಗೆ ಇಬ್ಬರು ಸಹೋದರಿಯರು.
Advertisement
ಶಿಕ್ಷಕರಾಗಿ ಹಿರೇಕೋಗಲೂರಿಗೆ ಬಂದಿದ್ದ ಕೊಟ್ಟೂರಯ್ಯನವರು ಅದೇ ಗ್ರಾಮದ ಪಾರ್ವತಮ್ಮನವರನ್ನು ವಿವಾಹವಾದರು. ಹಾಗಾಗಿ ಆ ಗ್ರಾಮದಲ್ಲಿ ಜನಿಸಿದ ಚಿದಾನಂದ ಮೂರ್ತಿಯವರ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ ಹಿರೇಕೋಗಲೂರಿನಲ್ಲಿ ನಡೆಯಿತು.
Related Articles
Advertisement
ಹಿರೇಕೋಗಲೂರಿನಲ್ಲಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಚಿಮೂ, ಶಾಲೆಯ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಿ ಮುಗಿಸಿದ್ದರು. ಅವರ ಓದಿನ ಗೀಳನ್ನು ಮೆಚ್ಚಿಕೊಂಡ ಆಗ ಮುಖ್ಯ ಶಿಕ್ಷಕರಾಗಿದ್ದ ಟಿ. ಶೇಷಪ್ಪನವರು, “ಈಗಲೇ ಇಷ್ಟು ಪುಸ್ತಕ ಓದಿರಬೇಕಾದರೆ ಮುಂದೆ ಇವನು ಓದಿ ಓದಿ ನನ್ನ ಮಗ ಕೂಚುಭಟ್ಟ ಅನ್ನುವ ಹಾಗೆ ಆಗಬಹುದು. ಇಲ್ಲವೇ ಮುಂದೆ ದೊಡ್ಡ ಸಾಹಿತಿ ಆಗಬಹುದು’ ಎಂದಿದ್ದರಂತೆ.
ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಮಾವಿನ ತೋಟದಲ್ಲಿ ಮರ ಕೋತಿ ಆಟ ಆಡುವುದು, ಜೇನು ಹುಡುಕಿ ಜೇನು ತೆಗೆದು ತಿನ್ನುವುದು ಅವರ ಚಟುವಟಿಕೆಗಳಾಗಿದ್ದವು. ಈಗ ಇವರ ಸಮವಯಸ್ಕರು ಊರಿನಲ್ಲಿ ಯಾರೂ ಇಲ್ಲ. ಕೆ.ಜಿ.ಬಸವರಾಜಪ್ಪ (ಮಾಗನೂರು ಬಸಪ್ಪನವರ ಅಳಿಯ) ಎಂಬುವವರು ವಿದೇಶದಲ್ಲಿದ್ದಾರೆ. 2018ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯೊಂದಿಗೆ ನೀಡಿದ ಏಳು ಲಕ್ಷ ರೂ.ಗಳಲ್ಲಿ ನಾಲ್ಕು ಲಕ್ಷ ರೂ. ಗಳನ್ನು ಹಿರೇಕೋಗಲೂರಿನ ಕಾವೇರಿ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಶಾಲಾ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಿದ್ದಾರೆ. ಅವರ ಹೆಸರನ್ನು ಗ್ರಾಮದಲ್ಲಿ ಶಾಶ್ವತವಾಗಿ ಉಳಿಸುವ ಹಿನ್ನೆಲೆಯಲ್ಲಿ ಅವರ ಒಪ್ಪಿಗೆ ಪಡೆದು ಗ್ರಾಮದಲ್ಲಿ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ 32 ಲಕ್ಷ ರೂ.ಗಳ ಅನುದಾನದಲ್ಲಿ ನಾಡೋಜ ಡಾ|ಎಂ. ಚಿದಾನಂದ ಮೂರ್ತಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಿದೆ. ಅದರ ಉದ್ಘಾಟನೆ ಕಳೆದ ನ.11ರಂದು ನೆರವೇರಿದೆ ಎಂದು ಚಿದಾನಂದ ಮೂರ್ತಿಯವರ ನಿಕಟವರ್ತಿ, ನಾಡೋಜ ಡಾ| ಎಂ. ಚಿದಾನಂದ ಮೂರ್ತಿ ಸಾಹಿತ್ಯ ಸಾಂಸ್ಕೃತಿಕ ಭವನದ ಸಂಸ್ಥಾಪಕ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಹೇಳಿದರು.