Advertisement

ಸರಕಾರದಿಂದ ಕೃಷಿ-ಕೈಗಾರಿಕೆಗೆ ಆದ್ಯತೆ

11:28 AM Mar 08, 2020 | Naveen |

ದಾವಣಗೆರೆ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೃಷಿ ಮತ್ತು ಕೈಗಾರಿಕೆಗೆ ಸಮಾನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಹೊನ್ನಾಳಿಯ ಹಿರೇಕಲ್ಮಠದಲ್ಲಿ ಶನಿವಾರ ಚಂದ್ರ ಸ್ಮರಣೆ ರಾಜ್ಯಮಟ್ಟದ ಕೃಷಿ ಮೇಳ-2020 ಉದ್ಘಾಟಿಸಿ ಮಾತನಾಡಿದ ಅವರು, ರೈತರು ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕುವ
ಕಾರ್ಯಕ್ರಮ ಜಾರಿಗೊಳಿಸಲು ನಮ್ಮ ಸರ್ಕಾರ ಸದಾ ಬದ್ಧ. ಕೃಷಿ ಕ್ಷೇತ್ರದ ಅಭಿವೃದ್ಧಿಯ ಜತೆಗೆ ಯುವ ಜನಾಂಗಕ್ಕೆ ಉದ್ಯೋಗ ಅವಕಾಶ ಮಾಡಿಕೊಡುವ ಕೈಗಾರಿಕೆ ಪ್ರಾರಂಭಿಸಲಾಗುವುದು. ಕೃಷಿ ಮತ್ತು ಕೈಗಾರಿಕೆ ಒಂದಾದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿನ ಬಹುತೇಕರ ಕಸುಬು ಕೃಷಿ ಆಗಿದೆ. ರೈತರು ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕ ಬೇಕು ಎಂಬ ಉದ್ದೇಶದಿಂದ ಆರ್ಥಿಕ ಸಂಕಷ್ಟದ ನಡುವೆಯೂ ಮಾ.5ರಂದು ಮಂಡಿಸಿದ ಬಜೆಟ್‌ನಲ್ಲಿ ಏತ ನೀರಾವರಿ ಯೋಜನೆಗಳಿಗೆ 5 ಸಾವಿರ ಕೋಟಿ ರೂ. ನೀಡಲಾಗಿದೆ. ನೀರಾವರಿ ಯೋಜನೆಗಳಿಗೂ ಹೆಚ್ಚು ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕು ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂಬುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಮುಂದಿನ ಮೂರು ವರ್ಷದಲ್ಲಿ ರೈತರು ಪ್ರಾಮಾಣಿಕ, ಸ್ವಾಭಿಮಾನ ಮತ್ತು ಗೌರವದಿಂದ ಬದುಕಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಸರ್ಕಾರಗಳ ವೈಫಲ್ಯದಿಂದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿ ಜೀವನ ನಡೆಸುವ ರೈತರನ್ನು ಸಂಪೂರ್ಣವಾಗಿ ಸಂಕಷ್ಟದಿಂದ ಹೊರ ತಂದು ನೆಮ್ಮದಿಯ ಜೀವನ ನಡೆಸಲು ಏನು ಸವಲತ್ತು ಬೇಕೋ ಅವೆ ಲ್ಲವನ್ನೂ ಸರ್ಕಾರ ಒದಗಿಸಲಿದೆ ಎಂದು ತಿಳಿಸಿದರು.

Advertisement

ಕಳೆದ 110 ವರ್ಷದಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ಒಳಗೊಂಡಂತೆ ಅನೇಕ ಕಡೆ ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ. ಲಕ್ಷಾಂತರ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅವರು ನೆಮ್ಮದಿ ಜೀವನ ನಡೆಸಬೇಕು ಎಂದು ಸರ್ಕಾರ ಹಲವಾರು ಕ್ರಮ ತೆಗೆದುಕೊಂಡಿದೆ. ಮನೆ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ 95 ಸಾವಿರ ನೀಡಿದರೆ ರಾಜ್ಯ ಸರ್ಕಾರ 5 ಲಕ್ಷ ನೀಡಲಿದೆ. ಈಗಾಗಲೇ 1 ಲಕ್ಷ ಬಿಡುಗಡೆ ಮಾಡಿ, ಬುನಾದಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಬೆಳೆ ಕಳೆದುಕೊಂಡತಹವರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪರಿಹಾರಕ್ಕಿಂತಲೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 10 ಸಾವಿರ ರೂ. ನೀಡುತ್ತಿದೆ. ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು. ರಾಜ್ಯ ಸರ್ಕಾರ ರೈತರು ನೆಮ್ಮದಿಯಿಂದ ಬದುಕುವಂತಹ ಕಾರ್ಯಕ್ರಮಗಳ ಜತೆಗೆ ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಬಲಿಷ್ಠವಾಗಬೇಕು. ಯುವಕರಿಗೆ ಉದ್ಯೋಗ ದೊರೆಯಲು ಕೈಗಾರಿಕೆ ಬರಬೇಕು. ಕೃಷಿ ಮತ್ತು ಕೈಗಾರಿಕೆ ಒಟ್ಟಿಗೆ ಹೋದಾಗ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಆಗುತ್ತದೆ ಎಂದು ಪುನರುಚ್ಚರಿಸಿದರು.

ಹೊನ್ನಾಳಿಯ ಹಿರೇಕಲ್ಮಠ ದೇಶದ ಅತಿ ದೊಡ್ಡ ಶಿಲಾಮಠ ಎಂಬ ಇತಿಹಾಸ ಹೊಂದಿದೆ. 11ನೇ ಶತಮಾನದಲ್ಲಿ ಮಠವನ್ನು ಸ್ಥಾಪಿಸಿದ ಚನ್ನಪ್ಪ ಸ್ವಾಮೀಜಿ ಚಿರಪರಿಚಿತರು. 16ನೇ ಜಗದ್ಗುರುಗಳಾದ ಶ್ರೀ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಧರ್ಮ ಜಾಗೃತಿ, ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ನಾಡಿನ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸ್ವಾಮೀಜಿಯವರು ಕೃಷಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ ಚಂದ್ರ ಸ್ಮರಣೆ, ರಾಜ್ಯ ಮಟ್ಟದ ಕೃಷಿ ಮೇಳ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next