Advertisement
ಊಹೆಗೂ ನಿಲುಕದ ರೀತಿ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹೆದರುವ ಅಗತ್ಯ ಇಲ್ಲ. ಆದರೆ, ಜಾಗೃತವಹಿಸಿ. ಭಾರೀ ಜನಸಂದಣಿಯತ್ತ ಸುಳಿಯಬೇಡಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.
Related Articles
Advertisement
ಡಿಜೆ ಯಿಂದ ಹೊರ ಹೊಮ್ಮುತ್ತಿದ್ದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಅಕ್ಕ ನಿನ್ನ ಮಗಳ ಜೊತೆ…, ಇತರೆ ಹಾಡುಗಳಿಗೆ ಭರ್ಜರಿ ಸ್ಟೆಪ್ ಹಾಕಿದರು. ಮೈ ಮೇಲೆ ಪರಿವೇ ಇಲ್ಲದಂತೆ ಕುಣಿದು ಕುಪ್ಪಳಿಸಿದರು.
ಕೇಕೆ ಹಾಕಿದರು. ಮೊಟ್ಟೆ ಒಡೆದರು, ಬಟ್ಟೆ ಹರಿದರು, ವಿದ್ಯುತ್ ತಂತಿಯ ಮೇಲೆ ಹಾಕುವ ಮೂಲಕ ಆನಂದ ಅನುಭವಿಸಿದರು. ಕೆಲವರನ್ನು ಮೇಲಕ್ಕೆ ತೂರಿ ಕ್ಯಾಚ್ ಹಿಡಿದರು. ಕೆಲವರು ಆಯ ತಪ್ಪಿ ಬಿದ್ದರು. ಒಟ್ಟಾರೆಯಾಗಿ ಅವರದ್ದೇ ಲೋಕದಲ್ಲಿ ಇರುವಂತೆ ಹಬ್ಬವನ್ನಾಚರಸಿದರು. ತಮ್ಮ ಅತ್ಯಾಪ್ತರಿಗೆ ಬಣ್ಣ ಹಾಕುವುದಕ್ಕೆ ಬೆನ್ನಟ್ಟಿ ಹೋಗುವುದು, ಹಾಗೂ ಹೀಗೂ ಅವರನ್ನ ಹಿಡಿದು ಬೇಡ ಬೇಡ ಎಂದರೂ ಬಣ್ಣ ಹಾಕಿ, ತಲೆ ಮೇಲೆ ಮೊಟ್ಟೆ ಒಡೆದು ಯುದ್ಧವನ್ನೇ ಗೆದ್ದವರಂತೆ ಸಂಭ್ರಮಿಸುವುದು ಸಾಮಾನ್ಯವಾಗಿತ್ತು.
ಕೆಲವರನ್ನ ಸಿನಿಮಾ ಮಾದರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಫಾಲೋ ಮಾಡಿ, ಬಣ್ಣ ಹಾಕುತ್ತಿದ್ದರು. ಪ್ರಮುಖ ವೃತ್ತ, ರಸ್ತೆಗಳಲ್ಲಿ ಮಾತ್ರವಲ್ಲ ಗಲ್ಲಿ, ಬೀದಿ, ವಠಾರದಲ್ಲೂ ಬಣ್ಣದ ಹಬ್ಬದ ಸಂಭ್ರಮ ಕಂಡು ಬಂದಿತು.
ಚಿಕ್ಕ ಮಕ್ಕಳು, ಯುವತಿಯರು, ಯುವಕರು, ವಯೋವೃದ್ಧರಾದಿಯಾಗಿ ಯಾವುದೇ ವಯೋ ಮಾನ, ಜಾತಿ, ಧರ್ಮದ ಹಂಗಿಲ್ಲದೆ ಹಬ್ಬ ಆಚರಿಸಿದರು. ತೀರಾ ಆಪ್ತರು, ಬೇಕಾದವರು, ಬಂಧುಗಳ ಮನೆ ಮನೆಗೆ ತೆರಳಿ ಬಣ್ಣ ಹಾಕಿದರು. ಗಂಡು ಮಕ್ಕಳು ಮಾತ್ರವಲ್ಲ ಹೆಣ್ಣು ಮಕ್ಕಳು ಸಹ ದ್ವಿಚಕ್ರ ವಾಹನ, ಕಾರುಗಳಲ್ಲಿ ದೂರ ದೂರದ ಪ್ರದೇಶದಲ್ಲಿನ ಮನೆಗೆ ಹೋಗಿ ಬಣ್ಣ ಹಾಕಿದರು. ರಾಂ ಆ್ಯಂಡ್ ಕೋ ವೃತ್ತದಲ್ಲಿ ಒಂದು ಕಡೆ ಯುವತಿಯರಿಗಾಗಿಯೇ ಪ್ರತ್ಯೇಕವಾಗಿ ಷವರ್ ಬಾತ್, ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು, ಚಿಕ್ಕ ಮಕ್ಕಳು ಬಣ್ಣದಾಟದಲ್ಲಿ ಸಂಭ್ರಮಿಸಿದರು. ಸೇರಿಗೆ ಸೆವ್ವಾ ಸೇರು… ಎನ್ನುವಂತೆ ಸಖತ್ ಡ್ಯಾನ್ಸ್ ಮಾಡಿದರು.
ಹೋಳಿ ಹಿನ್ನೆಲೆಯಲ್ಲಿ ತ್ರಿಬಲ್ ರೈಡಿಂಗ್, ಬಟ್ಟೆ ಹರಿಯುವುದು, ಬಟ್ಟೆ ಕಿತ್ತು ಹಾಕಿಕೊಂಡು ಬರೀ ಮೈಯಲ್ಲಿ ಅಸಭ್ಯವಾಗಿ ವರ್ತಿಸುವುದು, ಸೈಲೆನ್ಸರ್ ಕಿತ್ತು ಕರ್ಕಶ ಧ್ವನಿಯೊಂದಿಗೆ ಬೈಕ್ ರೈಡಿಂಗ್ ಮಾಡುವುದು, ರಸ್ತೆ ಮಧ್ಯೆದಲ್ಲಿ ನಿಂತು ಡ್ಯಾನ್ಸ್ ಮಾಡುವುದನ್ನು ನಿಷೇಧಿಸಲಾಗಿತ್ತಾದರೂ ಅಂತಹ ಎಲ್ಲವೂ ಕಂಡು ಬಂದವು. ಕೆಲವಡೆ ಹಬ್ಬದಲ್ಲಿ ಭಾಗವಹಿಸಿದ್ದ ಕೆಲವರ ವರ್ತನೆಯಂತೂ ತೀರಾ ಅಸಹ್ಯಕರವಾಗಿತ್ತು. ಹೋಳಿ ಹಬ್ಬದಲ್ಲಿ ವಿಕೃತಿ ಮೇಳೈಸುವುದು ಹೆಚ್ಚಾಗುತ್ತಿರುವುದು ಇಂದು ಸಹ ಮುಂದುವರೆಯಿತು.
ತ್ರಿಬಲ್ ರೈಡಿಂಗ್, ಬರೀ ಮೈಯಲ್ಲಿ ಬೈಕ್ ರೈಡಿಂಗ್ ಮಾಡುತ್ತಿದ್ದವ ಕೆಲ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಅನೇಕ ದ್ವಿಚಕ್ರ ವಾಹನ ಸೀಜ್ ಮಾಡಿದರು. ಕೆಲವರು ರಾಸಾಯನಿಕ ಬಣ್ಣಗಳ ಬದಲಿಗೆ ಹರ್ಬಲ್ ಬಣ್ಣಗಳನ್ನು ಬಳಸಿದರು. ಅರಿಶಿನ, ಮೊಸರು, ದಾಸವಾಳ ಹೂವಿನ ಪುಡಿ ಮಿಶ್ರಣದ ಬಣ್ಣ ಬಳಸುವ ಮೂಲಕ ಇತರರಿಗೆ ಮಾದರಿಯಾದರು. ಮನೆ, ಗಲ್ಲಿ, ವಠಾರ, ಸರ್ಕಲ್, ಹಾಸ್ಟೆಲ್‌ಗಳಲ್ಲಿ ಹೋಳಿ ಸಂಭ್ರಮ ಕಂಡು ಬಂದಿತು. ಕೆಲವು ಕಡೆ ಮಡಕೆ… ಒಡೆಯುವ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು. ಮಡಕೆ ಒಡೆಯುವುದಕ್ಕೆ ಪ್ರಯತ್ನಿಸುತ್ತಿದ್ದವರ ಮೇಲೆ ನೀರು ಎರೆಚುವುದು, ನೀರಿನ ಎರೆಚಾಟಕ್ಕೆ ಮೇಲಕ್ಕೆ ಹತ್ತಿದವರು ಕೆಳಕ್ಕೆ ಬೀಳುವುದು, ಮತ್ತೆ ಮೇಲೆ ಹತ್ತಿ, ಮಡಕೆ ಒಡೆಯುವುದು ಸಖತ್ ಮಜಾ ನೀಡುವಂತಿತ್ತು.
ಮಧ್ಯಾಹ್ನ 1 ಆಗುತ್ತಿದ್ದಂತೆ ಪೊಲೀಸರು ಹೋಳಿ ಆಡುತ್ತಿದ್ದವರನ್ನ ತೆರವುಗೊಳಿಸಿದರು. ಹೋಳಿ ನಂತರ ಮನೆ, ಚಾನೆಲ್‌ಗಳಿಗೆ ತೆರಳಿದರು. ರಾಂ ಆ್ಯಂಡ್ ಕೋ ವೃತ್ತದಲ್ಲಿ ಎಲ್ಲೆಂದರಲ್ಲಿ ಬಟ್ಟೆ, ಚಪ್ಪಲಿ ರಾಶಿ ಕಂಡು ಬಂದಿತು. ಮೊಟ್ಟೆಯ ಗಬ್ಬು ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿತ್ತು.
ಹೋಳಿ ಹಿನ್ನೆಲೆಯಲ್ಲಿ ಅಶೋಕ ರಸ್ತೆ, ಹದಡಿ ರಸ್ತೆ, ಹಳೆ ಬಸ್ ನಿಲ್ದಾಣ, ಎವಿಕೆ ರಸ್ತೆ ಒಳಗೊಂಡಂತೆ ಅನೇಕ ಕಡೆ ಆಘೋಷಿತ ಬಂದ್ ವಾತಾವರಣ ಇತ್ತು. ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ ಮುಚ್ಚಲಾಗಿತ್ತು. ಸಂಚಾರ ವಿರಳವಾಗಿತ್ತು. ಮಧ್ಯಾಹ್ನದ ನಂತರವೇ ಸಹಜ ಸ್ಥಿತಿ ಕಂಡು ಬಂದಿತು.