ದಾವಣಗೆರೆ: ಹಿಜಾಬ್ ವಿಚಾರವಾಗಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ದಾವಣಗೆರೆಯ ಉಪ ಕಾರಾಗೃಹದ ಲ್ಲಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಗೆ ನಿರಾಕರಿಸಿದ್ದರಿಂದ ಶ್ರೀರಾಮ ಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕಾರ್‍ಯಕರ್ತರು ಉಪ ಕಾರಾಗೃಹದ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಗುರುವಾರ ದಾವಣಗೆರೆಗೆ ಆಗಮಿಸಿದ್ದ ಪ್ರಮೋದ್ ಮುತಾಲಿಕ್ ವಸಂತ ರಸ್ತೆಯ ಉಪ ಕಾರಾಗೃಹದಲ್ಲಿ ಇರುವ ಹಿಂದು ಕಾರ್ಯಕರ್ತರನ್ನು ಭೇಟಿ ಮಾಡಲು ತೆರಳಿದ್ದರು. ಒಳಗಡೆ ಪ್ರವೇಶ ನೀಡಲು ಜೈಲಿನ ಸಿಬ್ಬಂದಿ ನಿರಾಕರಿಸಿದರು. ಈ ವೇಳೆ ವಾಗ್ವಾದವೇ ನಡೆಯಿತು.
ಹಿಂದೂ ಕಾರ್ಯಕರ್ತರ ಜೊತೆ ಮಾತನಾಡಬೇಕು. ಭೇಟಿಗೆ ಅವಕಾಶ ನೀಡುವಂತೆ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು. ಭೇಟಿಗಾಗಿಯೇ ಸಮಯ ನಿಗದಿ ಆಗಿರುತ್ತದೆ. ಸಮಯ ಇಲ್ಲದ ಕಾರಣ ಭೇಟಿಗೆ ಅವಕಾಶ ನೀಡಲಾಗದು ಎಂದು ಜೈಲರ್ ನಿರಾಕರಿಸಿದರು. ಆಗ ಶ್ರೀರಾಮ ಸೇನೆ ಕಾರ್‍ಯಕರ್ತರು ಮತ್ತು ಜೈಲರ್ ಮಧ್ಯೆ ವಾಗ್ವಾದ ನಡೆಯಿತು. ಹಿಂದೂ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಲು ಯಾಕೆ ಈ ರೀತಿ ವರ್ತಿಸುತ್ತೀರಾ. ಬೇರೆಯವರಿಗಾದರೆ ಅವಕಾಶ ಕೊಡುತ್ತೀರಾ ಎಂದು ಕಾರ್‍ಯಕರ್ತರು ಪ್ರಶ್ನಿಸಿದರು. ಉಪ ಕಾರಾಗೃಹದ ಮುಂದೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಹಿಜಾಬ್-ಕೇಸರಿ ಶಾಲು ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು. ಈ ವೇಳೆ ಹಿಂದು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿದ್ದವರ ಭೇಟಿಗೆ ಪ್ರಮೋದ್ ಮುತಾಲಿಕ್ ಮತ್ತು ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ಆಗಮಿಸಿದಾಗ ಈ ಘಟನೆ ನಡೆದಿದೆ. ಮಾತಿನ ಚಕಕಮಕಿ, ವಾಗ್ವಾದ ನಡೆದ ಬಳಿಕ ಧರಣಿಗೂ ಮುಂದಾದರು. ಅಂತಿಮವಾಗಿ ಭೇಟಿಗೆ ಅವಕಾಶ ನೀಡಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ಪ್ರಮೋದ್ ಮುತಾಲಿಕ್, ಹರಿಹರ, ಮಲೇಬೆನ್ನೂರು, ನಲ್ಲೂರಿನಲ್ಲಿ ಹಿಂದು ಕಾರ್‍ಯಕರ್ತರ ಮೇಲೆಯೇ ಹಲ್ಲೆಯಾಗಿದೆ. ಆದರೆ, ಪೊಲೀಸರು ಹಿಂದುಗಳ ಮೇಲೆ ಮಾತ್ರ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಇನ್ನೊಂದು ಕೋಮಿನವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.