Advertisement

ಸಚಿವ ಈಶ್ವರಪ್ಪ ಬಳಿ ನಿಯೋಗಕ್ಕೆ ನಿರ್ಧಾರ

11:28 AM Dec 11, 2019 | Naveen |

ದಾವಣಗೆರೆ: ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಬಳಿ ನಿಯೋಗ ತೆರಳಲಾಗುವುದು ಎಂದು ದಾವಣಗೆರೆ ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ತಿಳಿಸಿದರು.

Advertisement

ಮಂಗಳವಾರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ನೌಕರರ 6ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಪಂಚಾಯತ್‌ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್‌ ನೌಕರರು ಸಚಿವ ಈಶ್ವರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸೋಣ. ತಾಲೂಕು ಪಂಚಾಯತ್‌ ಎಂದೆಂದಿಗೂ ಗ್ರಾಮ ಪಂಚಾಯತ್‌ ನೌಕರರ ಪರ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಆಗುವುದಿಲ್ಲ. ಹಲವಾರು ತಿಂಗಳ ವೇತನ ಬಾಕಿ ಇರುವ ಬಗ್ಗೆ ನನ್ನ ಬಳಿಯೇ ಅನೇಕ ಗ್ರಾಮ ಪಂಚಾಯತ್‌ ನೌಕರರು ಸಮಸ್ಯೆ ಹೇಳಿಕೊಂಡಿದ್ದಾರೆ. ಒಂದು ತಿಂಗಳ ವೇತನ ಬರದೇ ಇದ್ದರೆ ಸಾಕಷ್ಟು ಸಮಸ್ಯೆ ಆಗುತ್ತದೆ. ತಿಂಗಳಗಟ್ಟಲೆ ವೇತನ ಆಗದೇ ಇದ್ದರೆ ಜೀವನ ನಿಭಾಯಿಸುವುದು ಬಹಳ ಕಷ್ಟವಾಗುತ್ತದೆ. ತುರ್ತು ಸಂದರ್ಭದಲ್ಲಾದರೂ ಗ್ರಾಮ ಪಂಚಾಯತ್‌ ಅಧಿಕಾರಿಗಳು ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಬೇಕು ಎಂದುಸೂಚಿಸಿದರು.

ಗ್ರಾಮ ಪಂಚಾಯತ್‌ ನೌಕರರ ವೇತನದ ವಿಳಂಬ, ಕಾಯಮಾತಿ ಒಳಗೊಂಡಂತೆ ಹಲವಾರು ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯತ್‌ ಸಾಮಾನ್ಯಸಭೆಯಲ್ಲಿ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನೌಕರರ ಕಷ್ಟಕ್ಕೆ ಪ್ರತಿಫಲ ದೊರಕಿಸಿ ಕೊಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ಮಾಡಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ ಮಾತನಾಡಿ, ಗ್ರಾಮಗಳ ಸ್ವಚ್ಛತೆ, ಕುಡಿಯುವ ನೀರು ಪೂರೈಕೆಯಂತಹ ಕೆಲಸ ಮಾಡುವ ನೌಕರರಿಗೆ ಸರಿಯಾಗಿ ವೇತನ ಆಗುವುದಿಲ್ಲ ಎನ್ನುವುದು ವಿಷಾದನೀಯ. ನೌಕರರು ಸಹ ನಮ್ಮಂತೆ ಎಂದು ಅಧಿಕಾರಿಗಳು ತಿಳಿದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದರು.

Advertisement

ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಕಾಧಿಕಾರಿ ಬಿ.ಎಂ. ದಾರುಕೇಶ್‌ ಮಾತನಾಡಿ, ಗ್ರಾಮ ಪಂಚಾಯತ್‌ ನೌಕರರು ಇಲ್ಲದ ತಾಲೂಕು ಪಂಚಾಯತ್‌ ಊಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಸ್ವಚ್ಛತೆ, ಕುಡಿಯುವ ನೀರು ಮುಂತಾದ ಕೆಲಸಕ್ಕೆ ದೊರೆಯಬೇಕಾದ ವೇತನ, ಸರ್ಕಾರಿ ಸೌಲಭ್ಯ ದೊರೆಯಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಕಿ ವೇತನದ ಬಗ್ಗೆ ಮಾಹಿತಿ ನೀಡಿದರೆ ಇಂದೇ ವೇತನ ಪಾವತಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ನೌಕರರು ನಿವೃತ್ತರಾಗುವ ವೇಳೆಗೆ 50 ಸಾವಿರ ವೇತನ, ಅಧಿಕಾರಿಗಳಂತೆ ಎಲ್ಲಾ ಸರ್ಕಾರಿ ಸೌಲಭ್ಯ ದೊರೆಯುವಂತಾಗಬೇಕು. ಪ್ರತಿ ತಿಂಗಳ 1ನೇ ತಾರೀಕಿಗೆ ಸಂಬಳ ದೊರೆಯಬೇಕು ಎನ್ನುವುದು ತಮ್ಮ ಅಪೇಕ್ಷೆ. ಗ್ರಾಮ ಪಂಚಾಯತ್‌ ನೌಕರರಿಗೆ ಗುರುತಿನ ಪತ್ರ, ಸಮಯಕ್ಕೆ ಸರಿಯಾಗಿ ವೇತನ ಆರೋಗ್ಯ ಸೇವೆ ಎಲ್ಲಾ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನೌಕರರು ಭಯ, ಹೆದರಿಕೆಯಿಂದ ಕೆಲಸ ಮಾಡುವ ಅಗತ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಯಾವುದೇ ನೌಕರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ತಾಲೂಕು ಪಂಚಾಯತ್‌ ಸದಾ ಗ್ರಾಮ ಪಂಚಾಯತ್‌ ನೌಕರರೊಟ್ಟಿಗೆ ಇರುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಂ. ಉಮೇಶ್‌ ಪ್ರಾಸ್ತಾವಿಕ ಮಾತುಗಳಾಡಿದರು. ದಾವಣಗೆರೆ ತಾಲೂಕು ಗ್ರಾಮ ಪಂಚಾಯತ್‌ ನೌಕರರ ಸಂಘದ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಕೆ.ಎಲ್‌. ಭಟ್‌, ಆರ್‌. ಶ್ರೀನಿವಾಸಾಚಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next