ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಪುರುಷ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಬಣ್ಣಿಸಿದರು.
ಜಿಲ್ಲಾಡಳಿತದಿಂದ ಬುಧವಾರ ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಅತ್ಯಂತ ಧೀಮಂತ ನಾಯಕರು. ಅತ್ಯಂತ ಸರಳ ಮತ್ತು ಸ್ವಾಭಿಮಾನಿ ನಾಯಕ, ಉತ್ತಮ ಪ್ರಧಾನಿಯಾಗಿದ್ದರು. ದೇಶದಲ್ಲಿ ಆಹಾರ ಕೊರತೆ ಎದುರಾದಾಗ ದೇಶವಾಸಿಗಳೆಲ್ಲ ಸೋಮವಾರ ಉಪವಾಸ ಮಾಡುವ ಮೂಲಕ ಆಹಾರ ಕೊರತೆ ನೀಗಿಸಬೇಕು ಎಂದು ಕರೆ ನೀಡಿ ಯಶಸ್ವಿಯಾಗಿದ್ದರು.
ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ತಿಳಿಸಿದರು. ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ಸದಸ್ಯ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಪ್ರಭಾರ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ, ರಕ್ಷಣಾಧಿಕಾರಿ ಹನುಮಂತರಾಯ, ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ವಿಶೇಷ ಭೂಸ್ವಾಧೀನಾಧಿ ಕಾರಿ ರೇಷ್ಮಾ ಹಾನಗಲ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಮಲ್ಲಾಪುರ, ಡಿಡಿಪಿಯು ನಿರಂಜನ್, ತಹಶೀಲ್ದಾರ್ ಸಂತೋಷ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ರಾಘವೇಂದ್ರಸ್ವಾಮಿ ಇತರರು ಇದ್ದರು.
ಸಿದ್ಧಗಂಗಾ ಶಾಲೆಯ ಅನುಪಮಾ ಕೆ.ಪಾಟಿಲ್ ಮತ್ತು ಅನುಷಾ ಭಗವದ್ಗೀತೆಯ ಕೆಲವು ಶ್ಲೋಕ, ಬಾಪೂಜಿ ಶಾಲೆಯ ಮಹಮದ್ ಸಾದಿಕ್ ಹಾಗೂ ಸಿದ್ದಗಂಗಾ ಪ್ರೌಢಶಾಲೆಯ ಎ. ಮಸ್ಕಾನ್ ಕುರಾನ್, ಸಿದ್ದಗಂಗಾ ಶಾಲೆಯ ಅನುಷಾ ಗ್ರೇಸಿ ಬೈಬಲ್‌ನ ಕೆಲ ಬೋಧನೆ ಪಠಿಸಿ, ವಿದ್ಯಾರ್ಥಿಗಳಿಗೆ ಧರ್ಮಗಳಲ್ಲಿನ ಶಾಂತಿ, ಸತ್ಯ, ಅಹಿಂಸೆ, ಸಾಮರಸ್ಯದ ಸಾರವನ್ನು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಪರಿಸರ ಸ್ನೇಹಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ಅಂಗೀಕಾರ್ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಸತಿ ಯೋಜನೆ, ಶೇ.24.10, ಅನಿಲ ಸಂಪರ್ಕ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ, ಎಲ್‌ಇಡಿ ಬಲ್ಬ್ ಫಲಾನುಭವಿಗಳಿಗೆ ಸೌಲಭ್ಯ ಮತ್ತು ಸಸಿ ವಿತರಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಇ-ಆಟೋಗೆ ಚಾಲನೆ ನೀಡಲಾಯಿತು. ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಸ್ವಚ್ಚ ಭಾರತ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಅಜಯ್ ನಾರಾಯಣ ಕಬ್ಬೂರ್ ಪ್ರಾರ್ಥಿಸಿದರು. ಉಪ ವಿಭಾಗಾ ಧಿಕಾರಿ ಬಿ.ಟಿ. ಕುಮಾರಸ್ವಾಮಿ ಸ್ವಾಗತಿಸಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ವಂದಿಸಿದರು.