ದಾವಣಗೆರೆ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ(ದುಗ್ಗಮ್ಮ) ಜಾತ್ರೆ ಮಾ. 1 ರಿಂದ 14ರ ವರೆಗೆ ನಡೆಯಲಿದೆ. ಮಂಗಳವಾರ ಶ್ರೀ ದುರ್ಗಾಂಬಿಕಾ ಶಾಲೆಯಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಜ.28 ರಂದು ಹಂದರಗಂಬ ಪೂಜೆ, ಮಾ.1ರಂದು ಪಂಚಾಮೃತಾಭಿಷೇಕ, ರಾತ್ರಿ ಕಂಕಣಧಾರಣೆ, ಸಾರು ಹಾಕುವುದು, 2 ರಂದು ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ, 3 ರಂದು ಭಕ್ತಿ ಸಮರ್ಪಣೆ, 4 ರ ಬೆಳಗ್ಗೆ ಚರಗ ಚೆಲ್ಲುವ ಕಾರ್ಯಕ್ರಮ ನಡೆಸಲು ಸಭೆ ತೀರ್ಮಾನಿಸಿತು. ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ಗೆ ಗೌಡ್ರ ರೇವಣಸಿದ್ದಪ್ಪ ಎಂಬುವರನ್ನು ತೆಗೆದುಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಗ್ರಾಮ ದೊಡ್ಡದಾಗಿದೆ. ಯುವಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 21 ಜನರ ಟ್ರಸ್ಟ್ ರಚಿಸಬೇಕು ಎಂದು ಕರಿಗಾರ ಕರಿಬಸಪ್ಪ ಒತ್ತಾಯಿಸಿದರು.
ದುಗ್ಗಮ್ಮನ ಹಬ್ಬದಲ್ಲಿ ನಾವು ಜಾತ್ರೆ ಕೆಲಸ ಮಾಡುತ್ತೇವೆ. ನಮ್ಮನ್ನೂ ಟ್ರಸ್ಟ್‌ಗೆ ಸೇರಿಸಿ ಎಂದು ಅಜ್ಜಪ್ಪ ಎನ್ನುವರು ಒತ್ತಾಯಿಸಿದರು. ದಾವಣಗೆರೆಯ ಪ್ರತಿಯೊಂದು ವಿಭಾಗಕ್ಕೂ ಒಂದೊಂದು ಸಮಿತಿ ಮಾಡಿ, ಇಬ್ಬರು ಧರ್ಮದರ್ಶಿಗಳು ಸಲಹೆ ನೀಡುವಂತಾಗಬೇಕು. ಎಲ್ಲರಿಗೂ ಪ್ರಾತಿನಿಧ್ಯ ಕೊಡಬೇಕು ಮತ್ತು ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಬಳ್ಳಾರಿ ಷಣ್ಮುಖಪ್ಪ ಒತ್ತಾಯಿಸಿದರು.
ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ಗೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡುವುದಕ್ಕೆ 5 ಜನರ ಸಮಿತಿ ರಚಿಸಿಕೊಂಡು ಚರ್ಚೆ ಮಾಡಿ, ಹೆಸರು ನೀಡಿದರೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡಿ, ಟ್ರಸ್ಟ್‌ಗೆ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಶಾಸಕ ಮೋತಿ ವೀರಣ್ಣ ಹೇಳಿದರು.
ಉಪ ಸಮಿತಿ ರಚನೆ: ದುರ್ಗಾಂಬಿಕಾ ಜಾತ್ರಾ ಹಿನ್ನೆಲೆಯಲ್ಲಿ ಉಪ ಸಮಿತಿಗಳ ರಚನೆ ಮಾಡಲಾಯಿತು. ಸಾಂಸ್ಕೃತಿಕ ಸಮಿತಿಗೆ ಹನುಮಂತರಾವ್ ಸಾವಂತ್, ಹನುಮಂತರಾವ್ ಜಾಧವ್, ಕುಸ್ತಿ ಸಮಿತಿಗೆ ಎಚ್.ಬಿ. ಗೋಣೆಪ್ಪ, ಕುರಿ ಕಾಳಗಕ್ಕೆ ಉಮೇಶ್ ಸಾಳಂಕಿ, ರಾಮಕೃಷ್ಣ, ಬಾಬುದಾರರ ಸಮಿತಿಗೆ ಗೌಡ್ರು ಚನ್ನಬಸಪ್ಪ, ಗೌಡ್ರ ರೇವಣಸಿದ್ದಪ್ಪ, ಉತ್ಸವ ಸಮಿತಿಗೆ ಬಿ.ಎಚ್. ವೀರಭದ್ರಪ್ಪ, ಜೆ.ಕೆ. ಕೊಟ್ರಬಸಪ್ಪ, ಪೆಂಡಾಲ್ ಸಮಿತಿಗೆ ಪಿಸಾಳೆ ಸತ್ಯನಾರಾಯಣ, ಎಸ್.ಎಂ. ಗುರುರಾಜ್ ಅವರನ್ನು ಸಭೆ ನೇಮಕ ಮಾಡಿತು.
ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ, ಗೌಡ್ರು ಚನ್ನಬಸಪ್ಪ, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ, ನಗರಸಭೆ ಮಾಜಿ ಸದಸ್ಯ ಜೆ.ಕೆ. ಕೊಟ್ರಬಸಪ್ಪ, ಪಿಸಾಳೆ ಸತ್ಯನಾರಾಯಣ, ಹನುಮಂತರಾವ್ ಸಾವಂತ್, ಇತರರಿದ್ದರು.