Advertisement

ದುಗ್ಗಮ್ಮನ ಜಾತ್ರೇಲಿ ಕುರಿ, ಕೋಳಿ…ಬಲು ದುಬಾರಿ!

11:20 AM Mar 04, 2020 | Naveen |

ದಾವಣಗೆರೆ: ಈ ಬಾರಿಯ ದಾವಣಗೆರೆಯ ದುಗ್ಗಮ್ಮನ ಜಾತ್ರೇಲಿ ಕುರಿ, ಕೋಳಿ… ಬಲು ದುಬಾರಿ!.

Advertisement

ಹೌದು, ಸಾಮಾನ್ಯ ದಿನಗಳಲ್ಲಿನ ಬೆಲೆಗೂ ಜಾತ್ರಾ ಸಂದರ್ಭದಲ್ಲಿನ ಬೆಲೆಗೂ ಅಜಗಜಾಂತರ ಹೆಚ್ಚಳ ಆಗಿದೆ. ಬೇರೆ ದಿನಗಳಲ್ಲಿ 450 ರೂಪಾಯಿ ಆಸುಪಾಸಿನಲ್ಲಿರುವ ಕೆಜಿ ಕುರಿ ಮಾಂಸದ ಬೆಲೆ ಜಾತ್ರೆ ಬಂದಿರುವ ಕಾರಣಕ್ಕೆ 650- 700 ರೂಪಾಯಿ ದಾಟಿರುವುದು ಜಾತ್ರೆ ಮಾಡುವಂತಹವರಿಗೆ ಬಿಸಿ ತುಪ್ಪವಾಗಿದೆ.

ಕುರಿ ಮಾಂಸದ ರೇಟು ಕೇಳಿಯೇ ಜನರು ಬೆವರುವಂತಾಗಿದೆ. ಆದರೆ, ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆ ಮಾಡುವಾಗ ಮಾಂಸದ ದರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ರೇಟು ಜಾಸ್ತಿ ಅಂತ ಜಾತ್ರೆ ಮಾಡೋದ ಬಿಡೋಕೆ ಆಗುತ್ತಾ. ಎಷ್ಟೇ ರೇಟ್‌ ಆದರೂ ಹಬ್ಬ ಮಾಡಬೇಕಲ್ಲ. ನಮ್ಮಮ್ಮನ ಹಬ್ಬ ಮಾಡಿದರೆ ಅಮ್ಮ ನಮ್ಮ ಕೈ ಬಿಡೊಲ್ಲ… ಎನ್ನುತ್ತಾರೆ ವಿನೋಬ ನಗರ ನಿವಾಸಿ ಗಣೇಶ್‌.

ಬೇರೆ ಟೈಮ್‌ನಲ್ಲಿ 450 ರೂಪಾಯಿ ರೇಟು. ಹಬ್ಬ ಅಲ್ವಾ ಅದಕ್ಕೆ ಈಗ ರೇಟು ಜಾಸ್ತಿ. ಹಬ್ಬ ಅಂತಾ ಸಿಕ್ಕಾ ಪಟ್ಟೆ ರೇಟು ಜಾಸ್ತಿ ಮಾಡೋಕೆ ಹೋಗೊಲ್ಲ. ವ್ಯಾಪಾರ ನೋಡಿಕೊಂಡು ರೇಟು ಫಿಕ್ಸ್‌ ಆಗುತ್ತದೆ. ಏನೇ ಆದರೂ 650 ರೂಪಾಯಿ ದಾಟುತ್ತದೆ ಎಂದು ಬಾರ್‌ಲೈನ್‌ ರಸ್ತೆಯಲ್ಲಿನ ಮಟನ್‌ ಮಾರ್ಕೆಟ್‌ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗಾಗಿ ಕುರಿ ಸಾಕುವವರು ಇದ್ದಾರೆ. ಹಬ್ಬಕ್ಕಾಗಿ ಖರೀದಿ ಮಾಡುವರು ಇದ್ದಾರೆ. ಕುರಿ ಬೆಲೆ 10 ಸಾವಿರದಿಂದ 40 ಸಾವಿರದವರೆಗೆ ಇದೆ. ಈ ವರ್ಷ ಕೆಜಿ ಲೆಕ್ಕದ ಆಧಾರದಲ್ಲಿ ಕುರಿ ಬೆಲೆ ಫಿಕ್ಸ್‌ ಮಾಡುತ್ತಾ ಇರುವುದರಿಂದ ಬೆಲೆ ಹೆಚ್ಚಾಗಿದೆ ಎಂದು ಅನೇಕರು ಹೇಳುತ್ತಾರೆ.

Advertisement

ಮೊದಲೆಲ್ಲ ಕುರಿ ಹಲ್ಲು, ಮಾಂಸ ಎಷ್ಟು ಸಿಗಬಹುದು ಎಂಬ ಲೆಕ್ಕಾಚಾರದ ಮೇಲೆಯೇ ರೇಟು ಕೇಳ್ಳೋದು ನಡೆಯುತ್ತಿತ್ತು. ಈಗ ವ್ಯಾಪಾರಸ್ಥರು ಕೆಜಿ ಮಾಂಸದ ಲೆಕ್ಕಾ ಹಾಕಿ ರೇಟು ಹೇಳುತ್ತಾರೆ. ಹಂಗಾಗಿಯೇ ರೇಟು ಜಾಸ್ತಿ ಆಗ್ತಾ ಇದೆ. ಹಬ್ಬ ಅಂತಾ ಅವರು ಡಿಮ್ಯಾಂಡ್‌ ಮಾಡ್ತಾರೆ. ಹಬ್ಬ ಬಿಡೊಂಗೆ ಇಲ್ಲ ಅಂತ ಏನೋ ಚೌಕಾಸಿ ಮಾಡಿ, ಖರೀದಿ ಮಾಡುತ್ತೇವೆಂದು ಅನೇಕರು ಹೇಳುತ್ತಾರೆ.

ಕೋಳಿಗೆ ಕೊರೊನಾ ಭೀತಿ…!?
ದುಗ್ಗಮ್ಮನ ಜಾತ್ರೆಯಲ್ಲಿ ಕುರಿಗಿಂತಲೂ ಹೆಚ್ಚಾಗುವ ಬಳಸಲಾಗುವ ಕೋಳಿಗಳಿಗೆ ದೂರದ ಕೊರೊನಾ ವೈರಸ್‌ ಭೀತಿ ಕಾಡುತ್ತಿದೆ. ಅದೇನೋ ಕೊರೊನಾ… ಅಂತಾ ಬಂದೈತೆ ಅಂತಲ್ಲ. ಹಂಗಾಗಿ ಕೋಳಿ ವ್ಯಾಪಾರ ಸ್ವಲ್ಪ ಕಡಿಮೆ ಆಗಿದೆ. ಬುಧವಾರ ಬೆಳಗ್ಗೆ ಆಗೋ ವ್ಯಾಪಾರದ ಮೇಲೆ ಏನಾದರೂ ಹೇಳಬಹುದು. ಬೇರೆ ದಿನ ಕೆಜಿಗೆ 140-150 ರೂಪಾಯಿ ರೇಟಿತ್ತು. ಹಬ್ಬ ಅಂತ 170-180 ರೂಪಾಯಿ ಆಗಬಹುದು ಎಂದು ಕೋಳಿ ವ್ಯಾಪಾರಿ ಬಷೀರ್‌ ಹೇಳುತ್ತಾರೆ.

ಶಾಮಿಯಾನ ಭರಾಟೆ..
ಬುಧವಾರ, ಗುರುವಾರದ ಖಾರದ ಹಬ್ಬ(ಮಾಂಸದ ಊಟ)ಕ್ಕಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ನೆಂಟರು, ಆಪ್ತರು, ಬಂಧು-ಬಳಗ ಬರುವ ಕಾರಣಕ್ಕೆ ಎಲ್ಲಿ ನೋಡಿದರೂ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಹಳೆ ಭಾಗದಲ್ಲಂತೂ ಎಲ್ಲಿ ನೋಡಿದರೂ ಶಾಮಿಯಾನದ ಭರಾಟೆ ಜೋರಾಗಿಯೇ ಇದೆ. ಟೇಬಲ್‌ ಊಟದ ವ್ಯವಸ್ಥೆಯೂ ಕಂಡು ಬರುತ್ತಿದೆ. ಕುರಿ… ಕಡಿಯುವುದು, ಪೀಸ್‌ ಹಾಕುವುದು, ಇತರೆ ವ್ಯವಸ್ಥೆ ಮಾಡುವುದರ ಮೇಲೆಯೇ ದುಗ್ಗಮ್ಮನ ಜಾತ್ರೆ ಆಚರಣೆ ಡಿಸೈಡ್‌… ಮಾಡಲಾಗುತ್ತದೆ ಎಂಬ ಪ್ರತಿಷ್ಠೆಯ ಕಾರಣಕ್ಕಾಗಿಯೇ ಜನರು ಎಷ್ಟೇ ದರವಾದರೂ ಚಿಂತೆ ಮಾಡದೇ ಹಬ್ಬ ಮಾಡುತ್ತಿದ್ದಾರೆ.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next