Advertisement

ಒಪಿಡಿ ಬಂದ್‌-ವೈದ್ಯರ ಪ್ರತಿಭಟನೆ

11:13 AM Nov 09, 2019 | |

ದಾವಣಗೆರೆ: ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಶುಕ್ರವಾರ ಭಾರತೀಯ ವೈದ್ಯರ ಸಂಘ, ಜೆಜೆಎಂ ಕಿರಿಯ ವೈದ್ಯರ ಸಂಘಗಳ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಹೊರ ರೋಗಿಗಳ ವಿಭಾಗ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಜೆಜೆಎಂ ಆಸ್ಪತ್ರೆ ಹೊರ ರೋಗಿಗಳ ವಿಭಾಗದ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದ ವೈದ್ಯರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ. ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಇಂತಹ ಹಲ್ಲೆ, ದೌರ್ಜನ್ಯ ಪ್ರಕರಣಗಳಿಂದ ಸದಾ ಅಸುರಕ್ಷಿತ ವಾತಾವರಣದ ನಡುವೆ ಕೆಲಸ ಮಾಡಬೇಕಾಗುತ್ತಿದೆ.

ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜನಾರೋಗ್ಯ ಕಾಪಾಡುವ ನಿಟ್ಟಿನಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವಿರುದ್ಧ ಹಲ್ಲೆ, ದೌರ್ಜನ್ಯ ನಡೆಯುತ್ತಲೇ ಇವೆ. ಮುಕ್ತವಾಗಿ ಕೆಲಸ ಮಾಡಲಿಕ್ಕೂ ಆಗದಂತ ಭಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧಿತರು ಕೂಡಲೇ ಸೂಕ್ತ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕು. ಎಲ್ಲಾ ಕಡೆ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಕಾನೂನುನ್ನು ಪರಿಣಾಮಕಾರಿ ರೀತಿ ಜಾರಿಗೊಳಿಸಬೇಕು. ಒಳ ಮತ್ತು ಹೊರ ರೋಗಿಗಳೊಂದಿಗೆ ಬರುವಂತಹ ಪೋಷಕರು ಇತರೆಯವರ ಸಂಖ್ಯೆ ನಿರ್ಬಂಧಕ್ಕೆ ಕ್ರಮ ತೆಗೆದುಕೊಳ್ಳಬೇಕು. ಕೇವಲ ಇಬ್ಬರಿಗೆ ಮಾತ್ರವೇ ಅವಕಾಶ ಮಾಡಿಕೊಡಬೇಕು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ, ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ವೈದ್ಯರು ಉತ್ತಮ ಚಿಕಿತ್ಸೆ ನೀಡಿ, ರೋಗಿಗಳನ್ನು ಗುಣಪಡಿಸುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿರುತ್ತಾರೆ ಹೊರತು. ಯಾರಿಗೂ ತೊಂದರೆ ಮಾಡುವಂತಹ ಉದ್ದೇಶ ಇರುವುದೇ ಇಲ್ಲ. ಆದರೂ, ವೈದ್ಯರು, ಸಿಬ್ಬಂದಿ ಮೇಲೆ ಏಕಾಏಕಿ, ವಿನಾಕಾರಣ ದೌರ್ಜನ್ಯ, ಹಲ್ಲೆ ನಡೆಸುವುದು ಸರಿ ಅಲ್ಲ. ಇದೇ ಸ್ಥಿತಿ ಮುಂದುವರೆದಲ್ಲಿ ತುರ್ತು ಚಿಕಿತ್ಸಾ ವಿಭಾಗವನ್ನೂ ನಿಲ್ಲಿಸಿ, ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು.

ಭಾರತೀಯ ವೈದ್ಯರ ಸಂಘದ ಅಧ್ಯಕ್ಷ ಡಾ| ಗಣೇಶ್‌ ಇಡುಗುಂಜಿ, ಡಾ| ಬಿ.ಎಸ್‌. ನಾಗಪ್ರಕಾಶ್‌, ಡಾ| ಆರ್‌. ರವಿ, ಡಾ| ಮಧು ಎಸ್‌. ಪೂಜಾರ್‌, ಡಾ| ಎಸ್‌. ಅಶ್ವಿ‌ನಿ, ಡಾ| ಮಂಜುನಾಥ್‌, ಡಾ| ಪ್ರತೀಕ್ಷಾ ವೈಷ್ಣವ್‌, ಡಾ| ಜೀವನಾ, ಡಾ| ಡಿ.ಎಂ. ನರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next