Advertisement
ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಕ್ಫ್ ಆಸ್ತಿಗಳ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಆವರು ಮಾತನಾಡಿದರು. ಸಮಸ್ಯೆ ಹೊಂದಿರುವ ಆಸ್ತಿಗಳನ್ನು ಸಂಬಂಧಿತ ತಹಶೀಲ್ದಾರರ ಹೆಸರಿಗೆ ಮಾಡಿಕೊಂಡು ನಂತರ ವಕ್ಫ್ ಮಂಡಳಿಗೆ ವರ್ಗಾಯಿಸುವ ಮೂಲಕ ಆದಷ್ಟು ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.
Related Articles
Advertisement
ಜಿಲ್ಲಾ ರಕ್ಷಣಾಧಿಕಾರಿ ಆರ್.ಚೇತನ್, ಯಾವ ಕಾರಣಕ್ಕಾಗಿ ಬಾಕಿ ಇಡಲಾಗಿದೆ ಎಂಬುದನ್ನು ಪರಿಶೀಲಿಸಿ, ಅವರಿಗೆ ಬರೆದು ತಿಳಿಸಿ, ಬಾಕಿ ಇತ್ಯರ್ಥಕ್ಕೆ ಸಹಕಾರಿಯಾಗತ್ತದೆ ಎಂದರು.
ವಕ್ಫ್ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಇಂಡೀಕರಣ ಮಾಡುವಾಗ ಇ-ಸ್ವತ್ತು ಪೋರ್ಟಲ್ನಲ್ಲಿ ಸ್ವತ್ತು ಹೊಂದಿರುವವರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತರೆ ದಾಖಲಾತಿಗಳನ್ನು ಕೇಳುತ್ತದೆ. ವಕ್ಫ್ ಸಂಸ್ಥೆಯಾಗಿದ್ದು ಈ ತರಹ ದಾಖಲೆ ಒದಗಿಸಲು ಬರುವುದಿಲ್ಲ. ಅಂತಹ ತಾಂತ್ರಿಕ ದೋಷದಿಂದ ಇಂಡೀಕರಣ ಸಾಧ್ಯ ಆಗುತ್ತಿಲ್ಲ. ಹಿಂದೆ ಮುತುವಲ್ಲಿಗಳ ಹೆಸರಿನಲ್ಲಿ ಮಸೀದಿ, ಖಬರಸ್ತಾನದ ಆಸ್ತಿ ಇದ್ದು ಅವರು ಅನಧಿಕೃತವಾಗಿ ಜಾಗಗಳನ್ನು ಮಾರಾಟ ಮಾಡಿರುವುದೂ ಉಂಟು. ಆದ್ದರಿಂದ ಆಸ್ತಿಯು ವಕ್ಫ್ ಸಂಸ್ಥೆ ಹೆಸರಿನಲ್ಲಿ ಖಾತೆ ಇಂಡೀಕರಣವಾಗುವುದು ಅವಶ್ಯಕವಾಗಿದೆ.ಮಹಾನಗರಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಝಂಡಕಟ್ಟೆಗಳು, ಮಸೀದಿ ಸೇರಿದಂತೆ ಒಟ್ಟು 16 ಪ್ರಕರಣಗಳು ಇಂಡೀಕರಣಕ್ಕೆ ಬಾಕಿ ಇವೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದರು.
ನಗರಪಾಲಿಕೆ, ನಗರಸಭೆ ಆಸ್ತಿಗಳೆಂದು ಪಹಣಿಯಲ್ಲಿ ನಮೂದಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಎಲ್ಲ ಝಂಡಕಟ್ಟೆಗಳನ್ನು ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಮಾಡುವುದು ತಪ್ಪಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದಾಗ ಸುಪ್ರಿಂ ಕೋರ್ಟ್ ಆದೇಶದಂತೆ ಝಂಡೆ ಕಟ್ಟೆಗಳು ವಕ್ಫ್ ಆಸ್ತಿ ಹೇಳಿದೆ ವಕ್ಫ್ ಅಧಿಕಾರಿ ತಿಳಿಸಿದರು.
ಖಬರಸ್ತಾನ್ ಇಲ್ಲದ ಗ್ರಾಮಗಳಲ್ಲಿ ಖಬರಸ್ತಾನ್ ಮತ್ತು ಈದ್ಗಾ ಉದ್ದೇಶಕ್ಕಾಗಿ ಭೂ ಮಂಜೂರಾತಿ ಕುರಿತು ಜಿಲ್ಲೆಯಲ್ಲಿ ಬಾಕಿ ಇರುವ ಒಟ್ಟು 18 ಪ್ರಕರಣ ಇತ್ಯರ್ಥಪಡಿಸಲು ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ, ಸರ್ವೇಯರ್ ಮತ್ತು ವಕ್ಫ್ ಅಧಿಕಾರಿಗಳ ಸಮಿತಿ ರಚಿಸಿ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಾಗುವುದು ಎಂದು ವಕ್ಫ್ ಅಧಿಕಾರಿ ತಿಳಿಸಿದರು.
ಹೊನ್ನಾಳಿ ತಾಲೂಕಿನ ಹನಗವಾಡಿ ಗ್ರಾಮದ ಸರ್ವೇ ನಂ 71 ರಲ್ಲಿ 5 ಎಕರೆ 5 ಗುಂಟೆ ಜಮೀನು ಮುಸ್ಲಿಂ ಖಬರಸ್ತಾನದ ಆಸ್ತಿ ಎಂದು ಗುರುತಿಸಿ, ಕಾಂಪೌಂಡ್ ನಿರ್ಮಿಸಲು ಸರ್ಕಾರದಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಇತರರು ಅರ್ಧ ಅರ್ಧ ಭೂಮಿಯನ್ನು ಬಳಕೆ ಮಾಡಿಕೊಳ್ಳೋಣ ಎನ್ನುತ್ತಿದ್ದಾರೆ. ಜಮೀನಿನ ಹದ್ದುಬಸ್ತು ಗುರುತಿಸಿ ಕಾಂಪೌಂಡ್ ನಿರ್ಮಿಸಲು ಆದೇಶಿಸಬೇಕು ಎಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮಹಮ್ಮದ್ ಸಿರಾಜ್ ಕೋರಿದರು.
ಚನ್ನಗಿರಿ ಪಟ್ಟಣದಲ್ಲಿರುವ ಜುಮ್ಮಾ ಷಾ ಮಕಾನ್ ಆಸ್ತಿ ಸಂ.229 ರಲ್ಲಿ 205+232 ಅಡಿ ಜಾಗ ವಕ್ಫ್ ಸ್ವತ್ತಾಗಿದ್ದು ಹಾಗೂ ಅನುಭವದಲ್ಲಿದೆ. ಉಚ್ಚನ್ಯಾಯಾಲಯದಲ್ಲಿ 1978 ರಲ್ಲಿ ವಕ್ಫ್ ಆಸ್ತಿಯೆಂದು ಆದೇಶವಾಗಿರುತ್ತದೆ. ಆದರೆ, ಪಹಣಿಯಲ್ಲಿ ಈ ಜಾಗ ಕೋಟೆ ರಂಗನಾಥ ದೇವಸ್ಥಾನ ಎಂದು ತೋರಿಸಲಾಗುತ್ತಿದ್ದು, ಖಾತೆ ಬದಲಾವಣೆಗೆ ಬಗ್ಗೆ ಅನೇಕ ಬಾರಿ ಚನ್ನಗಿರಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದರೂ ವಿಳಂಬ ಮಾಡಲಾಗುತ್ತಿದೆ. ಖಾತೆ ಬದಲಾವಣೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ರಿ.ಸ.ನಂ 176/2 ರಲ್ಲಿ 4 ಎಕರೆ 32 ಗುಂಟೆ ಜಮೀನು ಮುಸ್ಲಿಂ ಜನಾಂಗದ ಖಬರಸ್ತಾನವಾಗಿದ್ದು, ಇದೀಗ ಆ ಜಮೀನಿನಲ್ಲಿ ಅನ್ಯ ಕೋಮಿನವರು ನಮ್ಮ ಪೂರ್ವಜರ ಕಾಲದಿಂದ ಶವ ಸಂಸ್ಕಾರ ಮಾಡುತ್ತಿದ್ದರೆಂದು ಶವ ಸಂಸ್ಕಾರ(ಅಗ್ನಿ ಮುಖಾಂತರ)ಮಾಡುತ್ತಿದ್ದಾರೆ. ಆ ಸಮಸ್ಯೆ ಬಗೆಹರಿಸಲು ಮುಹಮ್ಮ್ ಸಾಬ್ ಎಂಬುವರು ಒಂದು ಎಕರೆ ಜಮೀನನ್ನು ಅವರಿಗೆ ಬಿಟ್ಟು ಕೊಟ್ಟರೂ ಶವಸಂಸ್ಕಾರಕ್ಕೆ ಅಡಚಣೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ, ಸಿಇಒ ಎಸ್ಪಿ ಯವರು ಸ್ಥಳ ಪರಿಶೀಲಿಸಿ ಪ್ರಕರಣ ಇತ್ಯರ್ಥಪಡಿಸುವಂತೆ ಕೋರಿದರು.
ಎಲ್ಲಾ ಪ್ರಕರಣಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕಂಡುಬಂದ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ತಿಳಿಸಿದರು.
ಮಸೀದಿ, ಇತರೆ ಪ್ರಾರ್ಥನ ಮಂದಿರಗಳಿಗೆ ಸಿಸಿ ಟಿವಿ ಅಳವಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಸೂಚಿಸಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಹಮ್ಮದ್ ಸಿರಾಜ್ ತಿಳಿಸಿದರು. ಜಿಪಂ ಸಿಇಒ ಎಚ್. ಬಸವರಾಜೇಂದ್ರ, ಆರ್‌ಟಿಒ ಎನ್.ಜೆ. ಬಣಕಾರ್ ಇತರರು ಇದ್ದರು.