Advertisement

ಕಾಯಿಲೆಗಳಿಗೆ ಆಯುಷ್‌ ಪದ್ಧತಿ ರಾಮಬಾಣ: ಯಶೋಧಮ್ಮ

05:06 PM Feb 19, 2020 | Naveen |

ದಾವಣಗೆರೆ: ಮಧುಮೇಹ ಮತ್ತು ರಕ್ತದೊತ್ತಡದಂತಹ ದಿಧೀರ್ಘ‌ ಕಾಲದ ಆರೋಗ್ಯ ಸಮಸ್ಯೆಗಳನ್ನು ಆಯುರ್ವೇದ ವೈದ್ಯ ಪದ್ಧತಿಯಿಂದ ಸುಲಭವಾಗಿ ನಿಯಂತ್ರಣಕ್ಕೆ ತರಬಹುದಲ್ಲದೇ ಇತರೆ ಕಾಯಿಲೆಗಳಿಗೂ ಆಯುಷ್‌ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಗಳವಾರ, ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ
ಆಯುಷ್‌ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಡಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಆಯುಷ್‌ ಸೆಮಿನಾರ್‌ ಉದ್ಘಾಟಿಸಿ,ಅವರು ಮಾತನಾಡಿದರು.

ಒತ್ತಡದ ಇಂದಿನ ದಿನಮಾನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಆಯುಷ್‌ ವೈದ್ಯ ಪದ್ಧತಿಯಲ್ಲಿ ಸಾಕಷ್ಟು ಸೂಕ್ತ ಚಿಕಿತ್ಸೆಗಳಿವೆ. ಆದರೆ, ಇದನ್ನು ಪರಿಗಣಿಸದ ಜನರು ಅಲೋಪತಿಗೆ ಮಾರುಹೋಗಿ ಅಡ್ಡ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ. ನಿಯಮಿತವಾಗಿ ಆಯುರ್ವೇದ ಪದ್ಧತಿ ಮೈಗೂಡಿಸಿಕೊಂಡರೆ ಯಾವುದೇ

ಕಾಯಿಲೆಗಳು ಬರುವುದಿಲ್ಲ. ನಮ್ಮ ಮನೆಯ ಸುತ್ತಮುತ್ತಲಿನಲ್ಲೇ ಸಿಗುವ ಔಷಧಗಳಿಂದ ನಾವು ರೋಗ ಗುಣಪಡಿಸಿಕೊಳ್ಳಬಹುದು ಎಂದು ಹೇಳಿದರು. ಮಧುಮೇಹ, ರಕ್ತದೊತ್ತಡ, ಸಂಧಿವಾತ ಸೇರಿದಂತೆ ಅನೇಕ ರೋಗಗಳಿಗೆ ಆಯುಷ್‌ ಪದ್ಧತಿಯಲ್ಲಿ ಚಿಕಿತ್ಸೆಗಳಿವೆ. ಸರಿಯಾದ ರೀತಿಯಲ್ಲಿ ಬಳಸುವುದನ್ನು ನಾವು ಕಲಿತರೆ ವೈದ್ಯರ ಬಳಿ ಹೋಗುವ ಅಗತ್ಯವೇ ಬರುವುದಿಲ್ಲ. ಅದರಲ್ಲೂ ಯುವಪೀಳಿಗೆ ಈ ಪದ್ಧತಿ ಬಗ್ಗೆ ಸೂಕ್ತ ರೀತಿಯಲ್ಲಿ ಅರಿವು ಪಡೆಯಬೇಕಿದೆ. ಆ ಮೂಲಕ ಪುರಾತನ ಆಯುರ್ವೇದ ಪದ್ಧತಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ.ಸದಸ್ಯೆ ಶೈಲಜಾ ಬಸವರಾಜ್‌ ಮಾತನಾಡಿ, ಶಾಂತತೆ ಆಯುಷ್‌ ಇಲಾಖೆಯ ಮೂಲಮಂತ್ರ. ಇಂದಿನ ಮೆಡಿಕಲ್‌ ವಿದ್ಯಾರ್ಥಿಗಳು ಎಂಬಿಬಿಎಸ್‌ಗಿಂತ ಬಿಎಎಂಎಸ್‌ ಪದವಿ ಪಡೆದು ನಮ್ಮದೇ ಆದ ಆಯುಷ್‌ ಪದ್ದತಿ ಉಳಿಸುವ ಅಗತ್ಯವಿದೆ. ಈ ಸೆಮಿನಾರ್‌ ದೃಶ್ಯ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.

Advertisement

ಅವಿದ್ಯಾವಂತರೂ ಸಹ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತ ಮಾಧ್ಯಮ ಕಲೆ. ಹಾಗಾಗಿ
ಹೊಸ ದೃಷ್ಟಿಕೋನದಿಂದ ವಿದ್ಯಾರ್ಥಿಗಳು ಇಂತಹ ಸೆಮಿನಾರ್‌ಗಳ ಸದುಪಯೋಗ ಪಡೆಯಬೇಕೆಂದು ಕಿವಿಮಾತು ಹೇಳಿದರು. ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಶಂಕರಗೌಡ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮದೇ ವೈದ್ಯ ಪದ್ಧತಿಯ ಆಯುಷ್‌ ಇಲಾಖೆಯನ್ನು ಉಳಿಸಿ ಬೆಳೆಸಲೆಂದೇ ಕೇಂದ್ರ ಸರ್ಕಾರ ಆಯುಷ್‌ ಇಲಾಖೆಯನ್ನೇ ಪ್ರತ್ಯೇಕಿಸಿ, ಪ್ರತ್ಯೇಕ ಸಚಿವರನ್ನೇ ನೇಮಿಸಿ ಅನುದಾನ ನೀಡುತ್ತಿದೆ. ಅದರಂತೆ ರಾಜ್ಯ ಸರ್ಕಾರ ಕೂಡ ಇಲಾಖೆಯ ಬೆಳವಣಿಗೆಗೆ ಸದಾ ಸಹಕಾರ ನೀಡುತ್ತಿದೆ. ಈಗಾಗಲೇ ಆಶಾ-ಅಂಗನವಾಡಿ ಕಾರ್ಯಕರ್ತೆಯರು, ದೈಹಿಕ ಶಿಕ್ಷಕರಿಗೆ ಆಯುಷ್‌ ಪದ್ಧತಿ ಮಾಹಿತಿ ಮತ್ತು ತರಬೇತಿ ನೀಡಲಾಗಿದೆ. ಇದೀಗ ಯುವಪೀಳಿಗೆಗೆ ತರಬೇತಿ ನೀಡುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ಪದ್ಧತಿ ಮತ್ತು ಮನೆ ಮದ್ದುಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಆಯುಷ್‌ ಬಗ್ಗೆ ಯುವ ಪೀಳಿಗೆ ತಿಳಿದುಕೊಂಡರೆ ಅನುಕೂಲ ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೆಮಿನಾರ್‌ ಆಯೋಜಿಸಲು ಮುಂದಾಗಿದೆ ಎಂದರು.

ಜಿಪಂ ಸದಸ್ಯೆ ಸಾಕಮ್ಮ ಗಂಗಾಧರಪ್ಪ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ರವೀಂದ್ರ ಎಸ್‌.ಕಮ್ಮಾರ್‌ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಯುಷ್‌ ಇಲಾಖೆಯ ಡಾ| ಸಿದ್ದೇಶ್‌ ಈ.ಬಿಸನಳ್ಳಿ, ಡಾ| ದ್ಯಾವನಗೌಡ, ಡಾ| ಎಸ್‌.ಎಸ್‌.ಸುಚಿತ್ರಾ,
ಡಾ| ಡಿ.ಎಸ್‌.ಪ್ರೀತಿ, ಡಾ| ಸುರೇಶ್‌ಕುಮಾರ್‌, ಡಾ.ಗಂಗಾಧರ ವರ್ಮ, ಇತರರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next