ದಾವಣಗೆರೆ: ಶುಕ್ರವಾರ ರಾತ್ರಿ ಮೃತಪಟ್ಟ ಕೋವಿಡ್ ಸೋಂಕಿತ ಜಾಲಿನಗರದ ವೃದ್ಧ (ರೋಗಿ ಸಂಖ್ಯೆ-556)ರ ಅಂತ್ಯಕ್ರಿಯೆ ಕೋವಿಡ್-19ರ ನಿಯಮಾವಳಿಯಂತೆ ನೆರವೇರಿಸಲಾಗಿದೆ.
ಶನಿವಾರ, ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೋಲೀಸ್, ಮಹಾನಗರಪಾಲಿಕೆ, ಆರೋಗ್ಯ ಇಲಾಖೆ ಹಾಗೂ ಅಗ್ನಿಶಾಮಕದಳ ತಂಡದೊಂದಿಗೆ ಶವ ಸಂಸ್ಕಾರವನ್ನು ಕೋವಿಡ್-19 ನಿಯಮಾವಳಿಯಂತೆ ಶುಕ್ರವಾರ ರಾತ್ರಿಯೇ ನಡೆಸಲಾಗಿದೆ ಎಂದು ತಿಳಿಸಿದರು.
ಮೂರು ದಿನದಿಂದ ಅಸ್ವಸ್ಥತೆಯಿಂದ ಬಳಲುತಿದ್ದ ವೃದ್ಧ, ಏ.28ರಂದು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. 29 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಅವರನ್ನು ತೀವ್ರ ಉಸಿರಾಟದ ತೊಂದರೆ ಪ್ರಕರಣ ಎಂಬುದಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಯಿಂದ ಚೇತರಿಸಿಕೊಳ್ಳಲಿಲ್ಲ. ಈ ಹಿಂದೆ ಅವರು ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಮಣಿಪಾಲ್‌ನ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಕಳೆದ 5 ವರ್ಷದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಜಿಲ್ಲಾಧಿಕಾರಿ ಮೃತ ವೃದ್ಧನ ಬಗ್ಗೆ ಮಾಹಿತಿ ನೀಡಿದರು. ಶುಕ್ರವಾರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಒಟ್ಟು 92 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಶನಿವಾರ ಸಹ ಒಟ್ಟು 72 ಸ್ಯಾಂಪಲ್ ಕಳುಹಿಸಿ ಕೊಡಲಾಗಿದ್ದು, ಫಲಿತಾಂಶದ ವರದಿ ಬರಬೇಕಿದೆ. ಜೊತೆಗೆ ಎಪಿಸೆಂಟರ್‌ನ ಸುತ್ತ ಮುತ್ತಲಿನ ಕಾರ್ಮಿಕರಲ್ಲಿ ಕೋವಿಡ್ ಲಕ್ಷಣ ಇಲ್ಲದಿದ್ದರೂ ಸಹ ಅವರ ಗಂಟಲು ದ್ರವ ಸ್ಯಾಂಪಲ್ ಕಳುಹಿಸಿಕೊಡಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಿದ್ದೇವೆ. ಆ ಪ್ರದೇಶವೂ ಸ್ಲಂ ಆಗಿದೆ. ಬಹಳಷ್ಟು ಇಕ್ಕಟ್ಟಿನ ಜಾಗದಲ್ಲಿ ಮನೆಗಳಿವೆ. ಇಂತಹ ಜಾಗದಲ್ಲಿ ಜನರು ವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ನಾವು ಯಾವುದೇ ಅಪಾಯ ತೆಗೆದುಕೊಳ್ಳುವುದು ಬೇಡ ಎಂಬುದಾಗಿ ಅಲ್ಲಿರುವ ಎಲ್ಲರ ಗಂಟಲು ಸ್ವಾಬ್ ಸಂಗ್ರಹಿಸಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಡ್ರಗ್ಸ್ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿಗೆ ಸಂಬಂಧಪಟ್ಟಂತೆ ಮಾತ್ರೆ ತೆಗೆದುಕೊಂಡವರ ವಿವರ ಒದಗಿಸಲು ಸೂಚಿಸಲಾಗಿದೆ. ಮೆಡಿಕಲ್ ಶಾಪ್‌ಗ್ಳಲ್ಲಿ ಔಷಧ ಖರೀದಿಸಿದವರ ಬಗ್ಗೆ ಪರಿಶೀಲಿಸಲು ನೋಡಲ್ ಅಧಿಕಾರಿ ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಪರಿಶೀಲನೆಗಾಗಿ 35 ತಂಡ ರಚಿಸಿದ್ದು, ಸರ್ವೇ ಕಾರ್ಯ ಜಾರಿಯಲ್ಲಿದೆ. ಒಂದೊಂದು ತಂಡಕ್ಕೆ 15 ಮೆಡಿಕಲ್ ಶಾಪ್‌ಗ್ಳ ಸರ್ವೇ ಕಾರ್ಯ ವಹಿಸಲಾಗಿದೆ. ವರದಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಕಳುಹಿಸಿಕೊಡಲಾಗುವುದು. ಅದರಲ್ಲಿ ಸಂದೇಹ ಬರುವಂತಹದ್ದು ಕಂಡುಬಂದರೆ ಪರೀಕ್ಷೆಗೆ ಒಳಪಡಿಸುವ ಕುರಿತು ಪ್ರಕ್ರಿಯೆ ಶುರುವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯ್ಕ ಈ ಸಂದರ್ಭದಲ್ಲಿದ್ದರು.