Advertisement

ಉಜ್ವಲ ಭವಿಷ್ಯಕ್ಕೆ ಸಂವಹನ ಕೌಶಲ್ಯ ಅನಿವಾರ್ಯ

10:22 AM Aug 29, 2019 | Team Udayavani |

ದಾವಣಗೆರೆ: ವಿದ್ಯಾರ್ಥಿಗಳು ವಿಷಯ ಜ್ಞಾನದ ಜತೆಗೆ ಉತ್ತಮ ಸಂವಹನ ಕೌಶಲ್ಯ ಹೊಂದಿದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕೆ.ಎಸ್‌.ಪಿ.ಎಚ್. ಆ್ಯಂಡ್‌ ಐಡಿಸಿ ಲಿ., ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದಕರ್‌ ಸಲಹೆ ನೀಡಿದ್ದಾರೆ.

Advertisement

ಬುಧವಾರ, ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ಜ್ಞಾನಸೌಧ ಸಭಾಂಗಣದಲ್ಲಿ ವಿವಿಯ 11ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಸಂವಹನ ಕಲೆ ಬಹಳ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಪದವೀಧರರಲ್ಲಿ ಸಂವಹನ ಕಲೆ ಕೊರತೆಯಿದೆ. ಸಂವಹನ ಕಲೆ ಇಲ್ಲದಿದ್ದಲ್ಲಿ ಏನೂ ಸಾಧನೆ ಮಾಡಲಾಗದು ಎಂದರು.

ವ್ಯಕ್ತಿ ಆಳವಾದ ಆಧ್ಯಯನ, ಜ್ಞಾನ, ಕಠಿಣ ಪರಿಶ್ರಮ, ಶ್ರದ್ಧೆ ಇಲ್ಲದೆ ಸಾಧನೆ ಅಥವಾ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಿಲ್ಲ. ಅಂತಹ ಸಾಧಕರನ್ನು ಮಾದರಿಯನ್ನಾಗಿಟ್ಟುಕೊಂಡು ತಾವು ಏನಾದರೂ ಸಾಧನೆ ಮಾಡಬೇಕೆಂಬ ದೃಢ ನಿರ್ಧಾರ ಕೊಳ್ಳಬೇಕು. ಸಾಧನೆಗೆ ಅಡ್ಡದಾರಿ ಹಿಡಿಯಬಾರದು. ಅನೈತಿಕ ಮಾರ್ಗದಲ್ಲಿ ಗಳಿಸಿದ ಯಶಸ್ಸು ಕ್ಷಣಿಕ. ನೈತಿಕ ಮಾರ್ಗದಲ್ಲಿ ತಕ್ಷಣ ಫಲಿತಾಂತ ಸಿಗದಿರಬಹುದು. ಆದರೆ, ನೀತಿಯುತ ಮಾರ್ಗದಲ್ಲಿ ಗಳಿಸಿದ ಯಶಸ್ಸು ಸುದೀರ್ಘ‌ವಾಗಿರಲಿದೆ. ಮೇಲಾಗಿ ಶಿಸ್ತು-ಬದ್ಧತೆ ಅಳವಡಿಸಿಕೊಂಡಲ್ಲಿ ಮಾತ್ರ ಇದೆಲ್ಲಾ ಸಾಧ್ಯ ಎಂದು ಹೇಳಿದರು.

ಹಾಗೆಯೇ ತಾಳ್ಮೆ ಸಹ ತುಂಬಾ ಪ್ರಮುಖ. ಏಕೆಂದರೆ ಬೇರೆಯವರ ಮಾತನ್ನು ಸಹನೆಯಿಂದ ಕೇಳಿ ನಂತರ ಸರಿಯಾಗಿ ಉತ್ತರಿಸಬೇಕು. ಇದಕ್ಕೆ ಉತ್ತಮ ಸಂವಹನ ಕೌಶಲ್ಯ ಅಗತ್ಯ. ಸಂವಹನ ಕಲೆಗೆ ಇಂಗ್ಲಿಷ್‌ ಭಾಷೆಯೇ ಕಲಿಯಬೇಕೆಂದೇನಿಲ್ಲ. ಕನ್ನಡ ಭಾಷೆಯೇ ಸಾಕು. ಗೊತ್ತಿರುವ ಭಾಷೆಯಲ್ಲೇ ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ನಡವಳಿಕೆ, ಚಿಂತನೆಯೂ ಸಹ ಸಕಾರಾತ್ಮಕವಾಗಿರಬೇಕು. ನಕಾರಾತ್ಮಕ ಚಿಂತನೆಗಳಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಾಗದು. ಬುದ್ಧಿವಂತಿಕೆ ಜತೆಗೆ ಬದ್ಧತೆ, ಏಕಾಗ್ರತೆ ಬಹಳ ಮುಖ್ಯ. ಮೇಲಾಗಿ ನಿತ್ಯ ಜೀವನದಲ್ಲಿ ಸಣ್ಣ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಪತ್ರಿಕೆ ಓದಿದಾಗ ವಿಷಯದ ಆಳ ಅರಿಯಲು ಪ್ರಯತ್ನಿಸಬೇಕು. ಒಂದು ಘಟನೆ, ಪ್ರಕರಣದ ಸುತ್ತ ಮುತ್ತಲಿನ ವಿಷಯದ ಬೆನ್ನತ್ತಬೇಕು. ಆಗ ಜ್ಞಾನ ವೃದ್ಧಿಯಾಗಲಿದೆ. ಈಗ ನಾವಿರುವುದು ಸ್ಪರ್ಧಾತ್ಮಕ ಜಗತ್ತು. ಸಾಧನೆಯ ಕನಸು ಕಾಣಬೇಕು. ಆ ಕನಸು ಸಾಕಾರಗೊಳಿಸಲು ಗುರಿ, ಬದ್ಧತೆ ಹೊಂದಲೇಬೇಕು. ಸಕಾರಾತ್ಮಕ ಚಿಂತನೆಯಿಂದ ಇದು ಸಾಧ್ಯ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕ್ರೈಂ ಸ್ಟೋರಿಗಳಂತಹ ಕಾರ್ಯಕ್ರಮ ವೀಕ್ಷಿಸಬೇಡಿ. ಅಂತಹ ಕಾರ್ಯಕ್ರಮ ವೀಕ್ಷಣೆಯಿಂದ ಮನೋವಿಕಾರ, ನಕಾರಾತ್ಮಕ ಭಾವ ಬೆಳೆಯಲಿದೆ ಎಂದು ಅವರು ಎಚ್ಚರಿಸಿದರು.

Advertisement

ಸನ್ಮಾನ ಸ್ವೀಕರಿಸಿ, ಮಾತನಾಡಿದ ಕುವೆಂಪು ವಿವಿ ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ, ದಾವಿವಿ ಬೆಳವಣಿಗೆ ಶ್ರಮಿಸಿದ ಅನೇಕರಲ್ಲಿ ತಾವು ಸಹ ಒಬ್ಬರು. ವಿವಿ ಆರಂಭದಿಂದಲೂ ಸಮಗ್ರ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದೇನೆ. ತಮ್ಮ ನಾಲ್ಕು ದಶಕಗಳ ಅಧ್ಯಾಪಕ ವೃತ್ತಿಯಲ್ಲಿ ನೋವು, ಕಷ್ಟ ಅನುಭವಿಸಿದ್ದೇನೆ. ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಇದ್ದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ದೊರೆಯಲಿದೆ ಎಂದರು.

ದೇಶದ 800 ವಿಶ್ವವಿದ್ಯಾಲಯಗಳಲ್ಲಿ ಕುವೆಂಪು ವಿವಿ 73ನೇ ಸ್ಥಾನದಲ್ಲಿದೆ. ಕುವೆಂಪು ವಿವಿ ಕುಲಪತಿಯಾದ ಮೇಲೆ ತಮ್ಮ ಜವಾಬ್ದಾರಿ ಹೆಚ್ಚಿದೆ. ತಾವು ಆ ವಿವಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿದ್ದು,ಆ ನಿಟ್ಟಿನಲ್ಲಿ ಸಹ್ಯಾದ್ರಿ ಸ್ಕೂಲ್ ಆಫ್‌ ಎಕನಾಮಿಕ್ಸ್‌ ಪ್ರಾರಂಭಿಸುವ ಆಲೋಚನೆ ಇದೆ. ಕುವೆಂಪು ವಿವಿ ದಾವಿವಿಗೆ ದೊಡ್ಡ ಸಹೋದರನಿದ್ದಂತೆ. ಪ್ರತಿಯೊಬ್ಬರೂ ವಿವಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ದಾವಿವಿಯಲ್ಲೇ ಕೆಲಸ ಮಾಡಿರುವ ತಾವು ಎಲ್ಲಾ ಸಹಕಾರ, ಬೆಂಬಲ ನೀಡುವುದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಾವಿವಿ ಕುಲಪತಿ ಪ್ರೊ| ಎಸ್‌.ವಿ.ಹಲಸೆ ಮಾತನಾಡಿ, ಸತ್ಯ, ಶುದ್ಧ ಕಾಯಕದಿಂದ ಉನ್ನತಿ ಸಾಧ್ಯ. ಆ ನಿಟ್ಟಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ ಸಾಗಿದ್ದರಿಂದಲೇ ಶಿಕ್ಷಕರಾಗಿದ್ದ ಅವರು ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು. ಅಂತಹ ಮಹಾನ್‌ ಸಾಧಕರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಪ್ರಾಮಾಣಿಕ ಪ್ರಯತ್ನದಿಂದ ಸಾಧನೆಗೆ ಮುಂದಾಗಬೇಕು. ಶಿಸ್ತು-ಬದ್ಧತೆಯಿಂದ ವ್ಯಾಸಂಗ ಮಾಡಿದಲ್ಲಿ ಅದು ಸಾಧ್ಯವಾಗಲಿದೆ. ಮೇಲಾಗಿ ಮೌಲ್ಯಾಧಾರಿತ ಶಿಕ್ಷಣ ಇಂದಿನ ಅನಿವಾರ್ಯ ಎಂದರು. ಇದೇ ಸಂದರ್ಭದಲ್ಲಿ ದಾವಿವಿ ಸ್ಥಾಪನೆ ಹೋರಾಟ ಸಮಿತಿಯ ಮುಖಂಡ ಎಂ.ಎಸ್‌.ಕೆ.ಶಾಸ್ತ್ರಿ, ದಾವಣಗೆರೆ ವಿವಿ ಆರಂಭದ ಇತಿಹಾಸ, ಹೋರಾಟದ ಕ್ಷಣಗಳನ್ನು ಹಂಚಿಕೊಂಡರು.

ವಿವಿ ಕುಲಸಚಿವ ಪ್ರೊ| ಪಿ. ಕಣ್ಣನ್‌ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಮೈಕ್ರೋ ಬಯಲಾಜಿ ವಿಭಾಗದ ಪ್ರೊ| ಶಿಶುಪಾಲ ದಾವಿವಿ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಬಸವರಾಜ ಬಣಕಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next