Advertisement

ಓದು-ಕಲಿಕೆ ಅಭ್ಯಾಸಕ್ಕೆ ಸೀಮಿತ ಸಲ್ಲ: ಶ್ರೀ

11:28 AM Nov 09, 2019 | Team Udayavani |

ದಾವಣಗೆರೆ: ಓದು, ಕಲಿಕೆ ಕೇವಲ ಅಭ್ಯಾಸಕ್ಕೆ ಸೀಮಿತ ಆಗಬಾರದು. ಅದು ಜ್ಞಾನಾರ್ಜನೆ ಮತ್ತು ಸಮಾಜದ ಉನ್ನತಿಗೆ ಪೂರಕವಾಗಿರಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

Advertisement

ಶುಕ್ರವಾರ, ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡಅಧ್ಯಯನ ವಿಭಾಗ ಏರ್ಪಡಿಸಿದ್ದ ಮಧ್ಯಕರ್ನಾಟಕದ ಕನ್ನಡ ಸಾಹಿತ್ಯ: ತಾತ್ವಿಕ ನೆಲೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪ್ರಸಾರಾಂಗ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯಗಳು ಜ್ಞಾನದಾಸೋಹದ ಕಾರ್ಯ ಮಾಡಬೇಕು. ವಿದ್ಯೆ, ವಿನಯವನ್ನು ಕಲಿಸಿ, ಭವಿಷ್ಯ ರೂಪಿಸಬೇಕು. ಆಗಲೇ ಶಿಕ್ಷಣದ ಮೂಲ ಉದ್ದೇಶ ಸಾರ್ಥಕವೆನಿಸುತ್ತದೆ ಎಂದರು.

ಸಂವಾದ, ಗೋಷ್ಠಿ, ಚರ್ಚೆಯಲ್ಲಿ ವಿದ್ವಾಂಸರು ನಡೆಸಿದ ವಿಭಿನ್ನ ವಿಷಯಗಳ ಚಿಂತನ-ಮಂಥನದಿಂದ ಆವಿಷ್ಕಾರ ಹೊರ ಬರುತ್ತದೆ. ಅದನ್ನು ಸಂಗ್ರಹಿಸುವ, ಅಭಿವೃದ್ಧಿಪಡಿಸುವ ಅಥವಾ ವಿಭಿನ್ನ ಆಯಾಮಕ್ಕೆ ಒಯ್ಯುವ ಕೆಲಸವನ್ನು ವಿಶ್ವವಿದ್ಯಾನಿಲಯಗಳು ಮಾಡಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಗಳ ಜ್ಞಾನಾರ್ಜನೆ, ವೈಚಾರಿಕ ಆಲೋಚನೆ ಮತ್ತು ಸಮಷ್ಠಿ ಬೆಳವಣಿಗೆ ಸಾಧ್ಯ. ಅಲ್ಲದೆ, ಜಾಗತಿಕ ಮಟ್ಟದ ಪೈಪೋಟಿಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಅವಕಾಶವಾಗುತ್ತದೆ ಎಂದು ತಿಳಿಸಿದರು.

ಒಳ್ಳೆಯ ವಿಚಾರವನ್ನು ಯಾವುದೇ ಭೇದವಿಲ್ಲದೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದಕ್ಕೆ ಯಾವುದೇ ವಯೋಮಾನದ ಮಾನದಂಡ ಇರಬಾರದು. ವ್ಯಕ್ತಿ ಯಾರೇ ಆಗಿದ್ದರೂ ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಬೇಕು.ಆಗಲೇ ಪರಿವರ್ತನೆ ಕಾಣಬಹುದು ಎಂದು ಅವರು ಹೇಳಿದರು.

ಕರ್ನಾಟಕ ಸಾಹಿತ್ಯಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ ಮಾತನಾಡಿ, ಮಧ್ಯ ಕರ್ನಾಟಕದ ವ್ಯಾಪ್ತಿ ಬಹಳ ದೊಡ್ಡದು.ಇಲ್ಲಿಯ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಭಾಷೆ,..ಹೀಗೆ ಎಲ್ಲವೂ ತಮ್ಮದೇ ಆದ ವಿಶಿಷ್ಟ ಮಾನ್ಯತೆ ಪಡೆದಿವೆ. ಅವುಗಳ ಸ್ಪಷ್ಟ ಪರಿಕಲ್ಪನೆಯ ಅರಿವು ಮೂಡಿಸುವ, ಅಕ್ಷರಜ್ಞಾನದ ಜೊತೆಗೆ ವಿಚಾರಗಳ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.

Advertisement

ಮಧ್ಯಕರ್ನಾಟಕ ಭಾಗದ ಸಾಹಿತ್ಯ, ತಾತ್ವಿಕತೆ, ಸಂಸ್ಕೃತಿ, ಸಂಪ್ರದಾಯಗಳ ವರ್ತಮಾನದ ತವಕ, ತಲ್ಲಣಗಳಿಗೆ, ಸಮಸ್ಯೆಗಳಿಗೆ ವಿಚಾರ ಸಂಕಿರಣ ಪರಿಹಾರ ಒದಗಿಸುವಂತಾದರೆ ಉದ್ದೇಶ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.

ಅರಣ್ಯ ಮತ್ತು ಹಳ್ಳಿಗಳು ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಉಳಿಸಿ ಬೆಳೆಸಿದ ವಿಶ್ವವಿದ್ಯಾನಿಲಯಗಳು. ಇವು ನೀಡುವ ಜ್ಞಾನ, ಬದುಕಿನ ಮೌಲ್ಯಗಳನ್ನು ಜಗತ್ತಿನ ಯಾವ ವಿಶ್ವವಿದ್ಯಾಲಯಗಳಿಂದಲೂ ಪಡೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ|
ಸ.ಚಿ.ರಮೇಶ್‌ ಮಾತನಾಡಿ, ಜ್ಞಾನದ ಅರಿವು ವಿಸ್ತಾರದ ಜೊತೆಗೆ ಜನರ ಸಾಮಾಜಿಕ ಮೌಲ್ಯಗಳನ್ನು, ಸಮಷ್ಠಿ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಜತೆಗೆ ಮಕ್ಕಳ ಜ್ಞಾನಾಸಕ್ತಿ, ಕಲಿಕೆಯ ಮನೋಭಾವಗಳೂ ಅತಿ ಮುಖ್ಯ.

ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು. ಪುಸ್ತಕ ಓದುವ, ಬರೆಯುವ ಹವ್ಯಾಸ ರೂಢಿಸಿಕೊಂಡಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯಎಂದರು.

ಇದೇ ಸಂದರ್ಭದಲ್ಲಿಎನ್‌.ಎಸ್‌. ವೀರೇಶ್‌ ಅವರ ನಾಲ್ಕು ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಕುಲಸಚಿವ ಪ್ರೊ| ಬಸವರಾಜ ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ| ಗಾಯತ್ರಿ ದೇವರಾಜ್‌, ಹಣಕಾಸು ಅಧಿಕಾರಿ ಪ್ರೊ| ಗೋಪಾಲ ಎಂ.ಅಡವಿರಾವ್‌, ಕಲಾ ನಿಕಾಯದ ಡೀನ್‌ ಪ್ರೊ| ಕೆ.ಬಿ. ರಂಗಪ್ಪ, ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ ಕೊಂಡಜ್ಜಿ ಜಯಪ್ರಕಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next