Advertisement

ಮುಗಿಯದ ಕಾಮಗಾರಿ; ಚಿಂತೆಯಲ್ಲಿ ವ್ಯಾಪಾರಿ!

11:26 AM Mar 16, 2020 | |

ದಾವಣಗೆರೆ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಣ್ಣಿನ ಸಗಟು ಮಾರುಕಟ್ಟೆ ನಿರ್ಮಾಣ ಕಾರ್ಯ ನಿಗದಿತ ಸಮಯಕ್ಕೆ ಮುಗಿಯದೆ ಸಗಟು ವ್ಯಾಪಾರಿಗಳು ಮಳಿಗೆಗಳಿಗೆ ಕಾಯುವಂತಾಗಿದೆ!.

Advertisement

2019 ರ ಜ. 1ರಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿ ಬ್ಲಾಕ್‌ ಹಣ್ಣಿನ ಸಗಟು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಒಂದು ವರ್ಷದಲ್ಲಿ ಮಾರುಕಟ್ಟೆ ಆರಂಭವಾಗಲಿದೆ ಎಂದು ತಿಳಿಸಿದ್ದರು. ಆದರೆ, ಈಗ ಹಣ್ಣಿನ ಸಗಟು ಮಾರುಕಟ್ಟೆ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದೆ. ಮಾವಿನ ಹಣ್ಣಿನ… ಸೀಸನ್‌ ಆರಂಭದ ಹೊತ್ತಿಗೆ ಮಾರುಕಟ್ಟೆ ಪ್ರಾರಂಭವಾದರೆ ಒಳ್ಳೆಯದು ಎನ್ನುತ್ತಾರೆ ಸಗಟು ವ್ಯಾಪಾರಿ ನಯಾಜ್‌ಖಾನ್‌ ಸೌದಾಗರ್‌.

ದಾವಣಗೆರೆಯ ಮಾರುಕಟ್ಟೆಗೆ ಸಂತೇಬೆನ್ನೂರು, ಚನ್ನಗಿರಿ, ಶಿಕಾರಿಪುರ, ಕುಂದಾಪುರ ಮುಂತಾದ ಭಾಗದಿಂದ ಹಣ್ಣುಗಳು ಬರುತ್ತವೆ. ಅತೀ ಮುಖ್ಯವಾಗಿ ಮಾವು ಅತಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಇಲ್ಲಿಂದ ಮಹಾರಾಷ್ಟ್ರ, ಗೋವಾಕ್ಕೆ ರಫ್ತಾಗುತ್ತದೆ. ಅಲ್ಲಿಂದ ಬೇರೆ ಬೇರೆ ದೇಶಗಳಿಗೂ ಹೋಗುತ್ತದೆ. ಏ.15 ರ ಹೊತ್ತಿಗೆ ಮಾವಿನ ಸೀಸನ್‌ ಪ್ರಾರಂಭವಾಗುವ ವೇಳೆಗೆ ಮಾರುಕಟ್ಟೆಯೂ ಓಪನ್‌ ಆದರೆ ನಮಗೆ ಬಹಳ ಅನುಕೂಲ ಆಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಖರೀದಿ ಮಾಡಿದಂತಹ ಮಾವಿನ ಹಣ್ಣುಗಳ ಶೇಖರಣೆಗೆ ವಿಶಾಲ ಜಾಗ ಬೇಕಾಗುತ್ತದೆ. ಟ್ರಾನ್ಸ್‌ಪೊàರ್ಟ್‌ ಮಾಡಲು ಸ್ಥಳಾವಕಾಶ ಅಗತ್ಯ. ಈ ಮಾರ್ಕೆಟ್‌ ಸ್ಟಾರ್ಟ್‌ ಆದರೆ ನಮಗೆ ಮಾತ್ರವಲ್ಲ ರೈತರು, ಬೆಳೆಗಾರರಿಗೆ ಎಲ್ಲರಿಗೂ ಅನುಕೂಲ ಆಗಲಿದೆ ಎಂಬುದು ನಯಾಜ್‌ಖಾನ್‌ ಒತ್ತಾಸೆ.

ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ತುಮಕೂರು ಹೊರತುಪಡಿಸಿ ಬೇರೆ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಣ್ಣಿನ ಸಗಟು ಮಾರುಕಟ್ಟೆ ಇಲ್ಲ. ದಾವಣಗೆರೆ ಮಾರುಕಟ್ಟೆಗೆ ಬಹಳ ದೂರದ ಊರುಗಳಿಂದ ಬೆಳೆಗಾರರು ಮಾತ್ರವಲ್ಲ ವ್ಯಾಪಾರಸ್ಥರು ಬರುತ್ತಾರೆ. ಹಾಗಾಗಿ ದಾವಣಗೆರೆ ಮಾರುಕಟ್ಟೆ ಸಗಣು ಹಣ್ಣಿನ ವ್ಯಾಪಾರಕ್ಕೆ ಹೇಳಿ ಮಾಡಿಸಿದಂತಹ ಜಾಗ. ಹಣ್ಣಿನ ಸಗಟು ಮಾರುಕಟ್ಟೆ ಪ್ರಾರಂಭವಾದಲ್ಲಿ ವ್ಯಾಪಾರ-ವಹಿವಾಟು ವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ.

Advertisement

ಈಗಿರುವ ಹಣ್ಣಿನ ಮಾರುಕಟ್ಟೆಯಲ್ಲಿನ ಮಳಿಗೆಗಳು ತೀರಾ ಚಿಕ್ಕದ್ದಾಗಿವೆ. ಸೂಕ್ಷ್ಮವಾಗಿ ಹಣ್ಣುಗಳನ್ನು ಶೇಖರಣೆ ಮಾಡಲು ಜಾಗ ಇಲ್ಲ. ಇನ್ನು ಬೇರೆ ಬೇರೆ ಊರುಗಳಿಂದ ಬಂದಂತಹ ಹಣ್ಣಿನ ಅನ್‌ಲೋಡ್‌ ಮಾಡುವುದಕ್ಕೆ ಮತ್ತು ಬೇರೆ ಕಡೆ ಕಳುಹಿಸುವುದಕ್ಕೆ ಲೋಡಿಂಗ್‌ ಮಾಡಲು ಸಾಕಷ್ಟು ತೊಂದರೆ ಆಗುವುದ ಮನಗಂಡು ಸಗಟು ವ್ಯಾಪಾರಕ್ಕೆ ಪ್ರತ್ಯೇಕ ಮಾರುಕಟ್ಟೆ ಬೇಕೇ ಬೇಕು ಎಂಬ ವ್ಯಾಪಾರಸ್ಥರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯಲಿಲ್ಲ ಎಂಬ ಕೊರಗು ಕಾಡುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿ ಬ್ಲಾಕ್‌ ನ 4 ಎಕರೆ ವಿಸ್ತೀರ್ಣದಲ್ಲಿ 50+30 ಅಡಿ ಸುತ್ತಳತೆಯ ನಿವೇಶನ ಕೋರಿ 75 ಜನ ವರ್ತಕರು ಅರ್ಜಿ ಸಲ್ಲಿಸಿದ್ದರು. ಮೂಲೆ ನಿವೇಶನ ಹೊರತುಪಡಿಸಿ, ಪ್ರತಿ ಚದುರ ಅಡಿಗೆ 225 ರೂಪಾಯಿಯಂತೆ 58 ಜನ ವರ್ತಕರಿಗೆ ನಿವೇಶನ ಮಂಜೂರು ಮಾಡಲಾಗಿದೆ. 10 ವರ್ಷದ ನಂತರ ಸೇಲ್‌ ಡೀಡ್‌ ನೀಡಲಾಗುವುದು.

ಸಗಟು ಮಾರುಕಟ್ಟೆಯ ಮಳಿಗೆಗಳನ್ನು ನಿವೇಶನ ಪಡೆದವರೇ ಕಟ್ಟಿಸಿಕೊಳ್ಳುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ. ಮಾರುಕಟ್ಟೆಗೆ ವ್ಯಾಪಾರಕ್ಕೆಂದು ಬಂದಂತಹ ರೈತರಿಗೆ ವಿಶ್ರಾಂತಿ ತಾಣದ ಅಗತ್ಯವೂ ಇದೆ. ಇದ್ದಂತಹ ಒಂದು ಬೋರ್‌ ಈಚೆಗೆ ಕೆಟ್ಟಿದೆ. ಅದನ್ನು ಸರಿಪಡಿಸಿ, ಅನುಕೂಲ ಮಾಡಿಕೊಡಬೇಕು ಎಂಬುದು ವ್ಯಾಪಾರಸ್ಥರ ಆಗ್ರಹ.

ಎಲ್ಲವೂ ಆದಲ್ಲಿ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಣ್ಣಿನ ಸಗಟು ಮಾರುಕಟ್ಟೆ ರಾಜ್ಯಕ್ಕೇ ಮಾದರಿ ಮಾರುಕಟ್ಟೆ ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಅಗತ್ಯ ಸೌಲಭ್ಯ ಒದಗಿಸಲಾಗುವುದು
ದಾವಣಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಣ್ಣಿನ ಸಗಟು ಮಾರುಕಟ್ಟೆಗೆ ರಸ್ತೆ, ಡ್ರೈನೇಜ್‌, ಶೌಚಾಲಯ ಒಳಗೊಂಡಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಸಗಟು ವ್ಯಾಪಾರಸ್ಥರ ಬೇಡಿಕೆಯಂತೆ ಕೋಲ್ಡ್‌ ಸ್ಟೋರೇಜ್‌ಗೆ ಅಗತ್ಯವಾದ ಜಾಗ ನೀಡಲಾಗುವುದು. ದಾವಣಗೆರೆಯವರೊಬ್ಬರು ಕೋಲ್ಡ್‌ ಸ್ಟೋರೇಜ್‌ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಸುಸಜ್ಜಿತ ಹಣ್ಣಿನ ಸಗಟು ಮಾರುಕಟ್ಟೆಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯ ಒದಗಿಸಿಕೊಡಲಾಗುವುದು.
ಜಿ. ಪ್ರಭು, ಕಾರ್ಯದರ್ಶಿ

„ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next