Advertisement

ದಾವಣಗೆರೆ ಎಪಿಎಂಸಿಗೆ ದಾಖಲೆ ಪ್ರಮಾಣದ ಆವಕ

11:22 AM Apr 29, 2020 | Naveen |

ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್‌ನ ಅಟ್ಟಹಾಸ, ತಿಂಗಳಿಗೂ ಅಧಿಕ ಕಾಲ ಜಾರಿಯಲ್ಲಿರುವ ಲಾಕ್‌ಡೌನ್‌ ನಡುವೆಯೂ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟಿನಲ್ಲಿ ದಾಖಲೆ ಬರೆದಿದೆ!.

Advertisement

ಹೌದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳೆದ ವರ್ಷಕ್ಕಿಂತಲೂ ಲಾಕ್‌ಡೌನ್‌ ಅವಧಿಯ ನಡುವೆ ನೀಡಿರುವ ವಿನಾಯತಿ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಭತ್ತ, ಮೆಕ್ಕೆಜೋಳ, ರಾಗಿ, ಶೇಂಗಾ ಆವಕವಾಗಿದೆ. ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ನೆರೆಯ ಜಿಲ್ಲೆಯ ರೈತರಿಗೆ ಪ್ರಮುಖ ಮಾರುಕಟ್ಟೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗ ಹಾಗೂ ರಾಜ್ಯದ ನಾಲ್ಕು ದಿಕ್ಕುಗಳಿಗೆ ಪ್ರಮುಖ ಸಂಪರ್ಕ ಕೇಂದ್ರ. ಹಾಗಾಗಿ ಇಲ್ಲಿನ ಎಪಿಎಂಸಿ ಸದಾ ಬ್ಯುಸಿ. ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾ.23 ರಿಂದ ಜಾರಿಯಲ್ಲಿರುವ ಲಾಕ್‌ ಡೌನ್‌ನಿಂದ ರೈತರು ಮಾರುಕಟ್ಟೆಗೆ ಬೆಳೆಗಳನ್ನು ತರದಂತಾಗಿತ್ತು. ಹಾಗಾಗಿ ರೈತರ ಸಂಕಷ್ಟ ಹೆಚ್ಚಾಗಿತ್ತು. ಬೆಳೆಗಳ ಧಾರಣೆಯ ಕುಸಿತದಿಂದ ರೈತರ ಪರಿಸ್ಥಿತಿ ಗಂಭೀರವಾಗತೊಡಗಿತ್ತು. ತರಕಾರಿ ಬೆಳೆದಂತಹವರು ಹೊಲಗಳಲ್ಲೇ ಬೆಳೆ ಹಾಳು ಮಾಡುವ ಹಂತವನ್ನೂ ತಲುಪಿದ್ದರು.

ರೈತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಏ.1 ರಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗೆ ವಿನಾಯಿತಿ ನೀಡಿದ ನಂತರ ರೈತರ ಪರಿಸ್ಥಿತಿ ಮತ್ತು ಬೆಳೆಗಳ ಧಾರಣೆಯೂ ಸುಧಾರಣೆಯಾಗುತ್ತಿರುವ ಪ್ರತೀಕ ಎಂಬಂತೆ ಕೃಷಿ ಮಾರುಕಟ್ಟೆಗೆ ಆವಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮುಕ್ತ ಅವಕಾಶ ನೀಡಿರುವ ನಂತರ ದಾವಣಗೆರೆ ಮಾರುಕಟ್ಟೆಗೆ (ಏ.1 ರಿಂದ 27ರ ವರೆಗೆ) 82,493 ಕ್ವಿಂಟಾಲ್‌ ಮೆಕ್ಕೆಜೋಳ, 12,3 17 ಕ್ವಿಂಟಾಲ್‌ ರಾಗಿ, 99,093 ಕ್ವಿಂಟಾಲ್‌ ಭತ್ತ, 10,066 ಕ್ವಿಂಟಾಲ್‌ ಶೇಂಗಾ ಬಂದಿದೆ. ಲಾಕ್‌ ಡೌನ್‌ ಪ್ರಾರಂಭದಲ್ಲಿ ಮಾ.23 ರಿಂದ 30ರ ವರೆಗೆ 11 ಕ್ವಿಂಟಾಲ್‌ ಶೇಂಗಾ, 83 ಕ್ವಿಂಟಾಲ್‌ ಮೆಕ್ಕೆಜೋಳ, 71 ಕ್ವಿಂಟಾಲ್‌ ಭತ್ತ, 1,100 ಕ್ವಿಂಟಾಲ್‌ ಈರುಳ್ಳಿ ಮಾರುಕಟ್ಟೆಗೆ ಬಂದಿತ್ತು.

ವಿನಾಯತಿ ನೀಡಿದ ನಂತರ ಎಲ್ಲಾ ಪ್ರಮುಖ ಬೆಳೆಗಳ ಆವಕ ಹೆಚ್ಚಾಗಿದೆ. ಕಳೆದ ಸಾಲಿನ ಆವಕಗಳ ಪ್ರಮಾಣವನ್ನು ಲಾಕ್‌ಡೌನ್‌ ನಂತರದ ಅವಧಿಗೆ ಹೋಲಿಕೆ ಮಾಡಿದರೆ ದಾಖಲೆ ಪ್ರಮಾಣದಲ್ಲಿ ಆವಕ ಬಂದಿದೆ. 2019ರ ಏ.1 ರಿಂದ 24ರ ವರೆಗೆ ನೋಡಿದರೆ 4,117 ಕ್ವಿಂಟಾಲ್‌ ಶೇಂಗಾ, 34,151 ಕ್ವಿಂಟಾಲ್‌ ಮೆಕ್ಕೆಜೋಳ, 1,579 ಕ್ವಿಂಟಾಲ್‌ ರಾಗಿ, 31,428 ಕ್ವಿಂಟಾಲ್‌ ಭತ್ತ, 9,690 ಕ್ವಿಂಟಾಲ್‌ ಈರುಳ್ಳಿ ಬಂದಿತ್ತು. ಈ ವರ್ಷದಲ್ಲಿ ಈವರೆಗೆ ಬಂದಿರುವ ಆವಕ 3-4 ಪಟ್ಟು ಹೆಚ್ಚಾಗಿದೆ.

ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ. ಪ್ರತಿ ಅಂಗಡಿಗಳ ಮುಂದೆ ಸ್ಥಳ ನಿಗದಿಪಡಿಸಲಾಗಿದೆ. ರೈತರು, ದಲ್ಲಾಲರು, ವರ್ತಕರು ಕಡ್ಡಾಯವಾಗಿ ಮಾಸ್ಕ್
ಧರಿಸಬೇಕು. ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಪ್ರಾಗಂಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. ಬೇರೆ ಬೇರೆ ಕಡೆಯಿಂದ ಬರುವವರ ಆರೋಗ್ಯ ತಪಾಸಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Advertisement

ಲಾಕ್‌ಡೌನ್‌ ನಡುವೆ ನೀಡಲಾಗಿರುವ ವಿನಾಯತಿ ಅವಧಿಯಲ್ಲಿ ದಾವಣಗೆರೆ ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಭತ್ತ, ಮೆಕ್ಕೆಜೋಳ, ಈರುಳ್ಳಿ, ರಾಗಿಯಂತಹ ಪ್ರಮುಖ ಬೆಳೆಗಳು ಬರುತ್ತಿವೆ. ಕೊರೊನಾ ವೈರಸ್‌ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ.
ಜೆ. ಪ್ರಭು,
ಎಪಿಎಂಸಿ ಕಾರ್ಯದರ್ಶಿ

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next