ದಾವಣಗೆರೆ: ದಾವಣಗೆರೆಯಲ್ಲಿ ಶನಿವಾರ ಹೊಸದಾಗಿ ಒಂದು ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿದ್ದು, ಈಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಕ್ರಿಯ ಪ್ರಕರಣ 83ಕ್ಕೇರಿದೆ.
ಜಾಲಿನಗರದ 65 ವರ್ಷದ ಮಹಿಳೆಗೆ (ರೋಗಿ ನಂಬರ್-1061) ಸೋಂಕು ತಗುಲಿದೆ. ಅವರಿಗೆ ರೋಗಿ ನಂಬರ್ -533(ಸ್ಟಾಫ್ ನರ್ಸ್) ಸಂಪರ್ಕದಿಂದ ಕೋವಿಡ್ ಸೋಂಕು ವ್ಯಾಪಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ದೃಢಪಟ್ಟಿರುವ ವ್ಯಕ್ತಿಗಳು ವಾಸಿಸುವ ಒಟ್ಟು ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್‌ಗಳನ್ನಾಗಿ ಆದೇಶಿಸಲಾಗಿದೆ. ಬಾಷಾನಗರ, ಜಾಲಿನಗರ, ಇಮಾಂ ನಗರ, ಬೇತೂರು ರಸ್ತೆ, ಎಸ್.ಪಿ.ಎಸ್.ನಗರ, ಶಿವನಗರ, ಕೆಟಿಜೆ ನಗರ ಹಾಗೂ ರೈತರ ಬೀದಿ ಕಂಟೈನ್‌ಮೆಂಟ್ ಝೋನ್‌ಗಳಾಗಿವೆ. ಈ ಝೋನ್‌ಗಳಲ್ಲಿನ ವಾಸಿಗಳ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮನೆಯಲ್ಲಿ ಪ್ರತ್ಯೇಕವಾಗಿ ಒಟ್ಟು 145 ಹಾಗೂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 465 ಮಂದಿಯನ್ನು ಇರಿಸಲಾಗಿದೆ. ಕೋವಿಡ್ ಸೋಂಕು ಪರೀಕ್ಷೆ ಸಂಬಂಧ ಶನಿವಾರ ಒಟ್ಟು 374 ಮಂದಿಯ ಗಂಟಲು ಸ್ವಾಬ್ ಸಂಗ್ರಹಿಸಲಾಗಿದ್ದು, ಇದುವರೆಗೆ ಒಟ್ಟು 3250 ಮಂದಿ ಗಂಟಲು ಸ್ವಾಬ್ ಸಂಗ್ರಹಿಸಿದಂತಾಗಿದೆ. 201 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಎಂಬುದಾಗಿ ಬಂದಿದ್ದು, ಇದುವರೆಗೂ ಲ್ಯಾಬ್‌ಗೆ ಕಳುಹಿಸಲಾದ ಸ್ಯಾಂಪಲ್‌ಗಳಲ್ಲಿ ಒಟ್ಟು 2065 ಸ್ಯಾಂಪಲ್ ನೆಗೆಟಿವ್ ಎಂಬ ವರದಿ ಬಂದಿವೆ.
ಇನ್ನೂ 1096 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ರೋಗಿ ನಂಬರ್-1061 ಸೇರಿ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಸೋಂಕಿತರ ಒಟ್ಟು 89 ಆಗಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.