ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುಂದುವಾಡ ಕೆರೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ಇಲ್ಲಿ ಭಾಗವಹಿಸುವುದರೊಂದಿಗೆ ಕೈಜೋಡಿಸಿ… ಎಂಬ ಧ್ಯೇಯ ವಾಕ್ಯದೊಂದಿಗೆ ನಮ್ಮ ನಗರ-ನಮ್ಮ ಕೆರೆ ಸ್ವಚ್ಛತಾ ಆಂದೋಲನದಲ್ಲಿ ಚುಮು ಚುಮು ಚಳಿಯಲ್ಲೂ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಇತರೆ ಅಧಿಕಾರಿಗಳು, ಸಾರ್ವಜನಿಕರು ಕುಂದುವಾಡ ಕೆರೆ ಏರಿ ಸ್ವಚ್ಛ ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಮಾತನಾಡಿ, ನಮ್ಮ ಸುತ್ತಮುತ್ತ ಬದಲಾವಣೆ ಬಯಸುವ ನಾವು ಮೊದಲು ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆಗ ಮಾತ್ರ ಧನಾತ್ಮಕ ಬದಲಾವಣೆ ಸಾಧ್ಯ. ನಾಗರಿಕರು ತಮ್ಮ ಮನೆ ಸುತ್ತಮುತ್ತಲಿನ ವಾತಾರವಣ, ಚರಂಡಿ ಇತರೆ ಸ್ವಚ್ಛವಾಗಿಟ್ಟುಕೊಳ್ಳುವ ಸಂಕಲ್ಪ ತೊಡಬೇಕು. ಆಗ ಇಡೀ ನಗರ ಸ್ವಚ್ಛವಾಗಿ ಕಂಗೊಳಿಸುತ್ತದೆ. ನಾವು ಎಷ್ಟು ಲೋಡ್ ಕಸ ಸಂಗ್ರಹಿಸಿದೆವು ಎನ್ನುವುದಕ್ಕಿಂತ ಮುಖ್ಯವಾಗಿ ಎಷ್ಟು ಹಸಿರೀಕರಣ ಮಾಡಿದೆವು ಎನ್ನುವುದು ಮುಖ್ಯವಾಗುತ್ತದೆ ಎಂದರು.
ಸರ್ಕಾರವೇ ಸ್ವಚ್ಛತೆ ಮಾಡಬೇಕು ಎಂದು ದೂರುವ ಬದಲಾಗಿ ಎಲ್ಲರೂ ಕೂಡಿ ಕೆಲಸ ಮಾಡೋಣ ಎಂಬ ಮನಸ್ಥಿತಿ ನಿರ್ಮಾಣ ಆಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಒಬ್ಬೊಬ್ಬರು ಒಂದು ಕಳೆಯ ಗಿಡವನ್ನು ಕಿತ್ತರೂ ಸಾಕು, ನಗರ ಸ್ವಚ್ಛವಾಗುತ್ತದೆ. ನಾಗರಿಕರು ಮನಸ್ಸು ಮಾಡಿದರೆ 10 ಕೆರೆಯನ್ನು ಸ್ವಚ್ಛಗೊಳಿಸಬಹುದು. ಸ್ವಚ್ಛತೆ ಕಾರ್ಯ ನಿರಂತರವಾಗಿ ಸಾಗಲಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಪಾಲಿಕೆ ಸೇರಿದಂತೆ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕರು, ವಾಯು ವಿಹಾರ ಬಳಗದವರು ಸಂತೋಷದಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ.
ನಿರಂತರವಾಗಿ ನಡೆಯುವಂತಹ ಕೆಲಸ. ಆಸಕ್ತರೆಲ್ಲರೂ ದಿನವೂ ತಮ್ಮ ಶ್ರಮದಾನ ಮಾಡಬಹುದು. ಕುಂದುವಾಡ ಕೆರೆ ಸುತ್ತಮುತ್ತ ಉತ್ತಮ ಗಿಡ, ಮರಗಳಿದ್ದು ಒಳ್ಳೆಯ ಪರಿಸರ ಏರ್ಪಟ್ಟಿದೆ. ಮನಸ್ಸಿಗೆ ಮತ್ತು ಆರೋಗ್ಯಕ್ಕೆ ಚೇತೋಹಾರಿಯಾಗಿದ್ದು, ಎಲ್ಲರೂ ಶ್ರಮದಾನದ ಮೂಲಕ ನಮ್ಮ ನಗರದ ಸ್ವತ್ಛತೆಯ ಕಾಪಾಡಿಕೊಳ್ಳೋಣ ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಆರ್.ಬಳ್ಳಾರಿ, ದೂಡಾ ಆಯುಕ್ತ ಆದಪ್ಪ, ಹೆಚ್ಚುವರಿ ಅಧೀಕ್ಷಕ ಎಂ. ರಾಜೀವ್, ನಗರ ಡಿವೈಎಸ್‌ಪಿ ನಾಗೇಶ್ ಐತಾಳ್, ಗ್ರಾಮಾಂತರ ಡಿವೈಎಸ್‌ಪಿ ಎಂ.ಕೆ. ಗಂಗಲ್ ಇದ್ದರು.