Advertisement

Davangere: ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ ಬೇಟೆ

10:19 AM Apr 14, 2024 | Team Udayavani |

ದಾವಣಗೆರೆ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮತ ಪ್ರಚಾರ ನಡೆಯಿತು.

Advertisement

ಮಾಜಿ ಸಚಿವ ಕರುಣಾಕರ ರೆಡ್ಡಿ ಸಮ್ಮುಖದಲ್ಲಿ ನಡೆದ ಮತ ಪ್ರಚಾರದಲ್ಲಿ ದೇಶದ ಅಭಿವೃದ್ಧಿ ಹಾಗೂ ದೇಶದ ಹಿತರಕ್ಷಣೆ ದೃಷ್ಟಿಯಿಂದ ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಗಳಾಗಬೇಕಾಗಿದ್ದು ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಲಾಯಿತು.

ಶಿಂಗ್ರಿಹಳ್ಳಿಯಲ್ಲಿ ನಡೆದ ಪ್ರಚಾರದಲ್ಲಿ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಇದೊಂದು ಮಹತ್ತರವಾದ ಚುನಾವಣೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಆಗದ ಅಭಿವೃದ್ಧಿ ಕೆಲಸಗಳನ್ನು ನರೇಂದ್ರ ಮೋದಿ ಅವರು 2014ರಿಂದ ಮಾಡಿ ತೋರಿಸಿದ್ದಾರೆ. ಕೇವಲ 10 ವರ್ಷಗಳಲ್ಲಿ ಮೋದಿಯವರು ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಬಡವ, ಶ್ರೀಸಾಮಾನ್ಯರ ಪರವಾಗಿ ನಿಂತು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಕೋವಿಡ್‌ ಸಮಯದಲ್ಲಿ ಎಲ್ಲರಿಗೂ ಎರಡು ಬಾರಿ ಡೋಸ್‌ ನೀಡಿದ್ದಲ್ಲದೆ ಬೂಸ್ಟರ್‌ ಡೋಸ್‌ ಕೂಡ ಕೊಡಿಸಿದರು. ಉಚಿತವಾಗಿ ಪಡಿತರ ನೀಡಿದರು.

ಬಡವ, ಶ್ರೀಸಾಮಾನ್ಯರಿಗೆ ದೊಡ್ಡ ದೊಡ್ಡ ಕಾಯಿಲೆ ಬಂದರೆ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿ ಆಸ್ತಿ, ಪಾಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಇತ್ತು. ಅದನ್ನು ಮನಗಂಡು ಮೋದಿ ಅವರು ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೊಳಿಸಿ ಐದು ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ಬಡವ, ಶ್ರೀಸಾಮಾನ್ಯರ ಪರ ಇನ್ನಷ್ಟು ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.

Advertisement

ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿರುವ 12 ಕೆಎಸ್‌ಆರ್‌ಪಿ ತುಕಡಿಗಳ ಹೊರತಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವ ನಿಟ್ಟಿನಲ್ಲಿ ಎರಡು ಇಂಡಿಯಾ ರಿಸರ್ವ್‌ ಬೆಟಾಲಿಯನ್‌ ಸ್ಥಾಪನೆ ಮಾಡುವ ಪ್ರಸ್ತಾವನೆ ಕೇಂದ್ರ ಗೃಹ ಸಚಿವಾಲಯದ ಹಂತದಲ್ಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹರಪನಹಳ್ಳಿಯಲ್ಲಿ ಇಂಡಿಯ ರಿಸರ್ವ್‌ ಬೆಟಾಲಿಯನ್‌ ಸ್ಥಾಪನೆ ಮಾಡುವ ಉದ್ದೇಶದಿಂದ ಸಮಗ್ರ ಯೋಜನಾ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರದ ಮುಖಾಂತರ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಹರಪನಹಳ್ಳಿಗೆ ಘಟಕ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಜನಸಂಪರ್ಕ ಕಚೇರಿ ತೆರೆಯುವ ಉದ್ದೇಶವಿದೆ. ಸಾರ್ವಜನಿಕ ಕೆಲಸಗಳಿಗೆ ದಾವಣಗೆರೆಗೆ ಬರುವುದು ಇನ್ನು ಮುಂದೆ ತಪ್ಪಲಿ ಎನ್ನುವ ಉದ್ದೇಶ ನನ್ನದು. ಹರಪನಹಳ್ಳಿ ನಗರದಲ್ಲಿಯೇ ಜನಸಂಪರ್ಕ ಕಚೇರಿ ತೆರೆದು ಅಲ್ಲಿ ಸಿಬ್ಬಂದಿ ನೇಮಿಸಲಾಗುವುದು. ನಾನೂ ಕೂಡ ನಿರಂತರವಾಗಿ ಜನಸಂಪರ್ಕ ಕಚೇರಿಗೆ ಆಗಮಿಸಿ ಜನರ ಕಷ್ಟ ಸುಖಗಳನ್ನು ಆಲಿಸುತ್ತೇನೆ ಎಂದರು.

ಬಿಜೆಪಿ ಮುಖಂಡರಾದ ಕಡ್ಲೆಬಾಳು ಧನಂಜಯ, ಜಿ.ಎಸ್‌. ಅಶ್ವಿ‌ನಿ, ಲೋಕೇಶ್‌, ಶೇಖರಪ್ಪ, ಕಲ್ಲಣ್ಣ ಗೌಡ, ಮಂಜುನಾಥ್‌, ವೀರಭದ್ರಪ್ಪ, ಮಹಾಂತೇಶ್‌, ಬಸವರಾಜ್‌, ಹೇಮಣ್ಣ, ಅಂಜಿನಪ್ಪ, ನಾಗರಾಜ್‌, ವೀರಣ್ಣಇತರರು ಇದ್ದರು.

ಬಿಜೆಪಿಗೆ ಸೇರ್ಪಡೆ:

ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ಗ್ರಾಮದೇವತೆ ಮಹೋತ್ಸವ ಸಮಿತಿ ಸದಸ್ಯರು ಹಾಗೂ ಮುಖಂಡರು ಕಾಂಗ್ರೆಸ್‌ತೊರೆದು ಬಿಜೆಪಿಗೆ ಸೇರ್ಪಡೆಯಾದರು. ವೀರಬಸಯ್ಯ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಬಸಪ್ಪ ಮತ್ತಿತರರು ಸಂಸದ ಜಿ.ಎಂ. ಸಿದ್ದೇಶ್ವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್‌, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌ ಇತರರು ಇದ್ದರು.

ಮಳೆಯಲ್ಲೇ ಪ್ರಚಾರ

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಳೆಯನ್ನೂ ಲೆಕ್ಕಿಸದೆ ತಾಲೂಕಿನ ನೀಲಗುಂದ, ಚಿರಸ್ತಳ್ಳಿ, ಯಡೇಹಳ್ಳಿ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ , ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಸಹ ಮಳೆಯಲ್ಲಿಯೇ ಸಂಚರಿಸಿ ಮತಯಾಚನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next