ದಾವಣಗೆರೆ: ಅಲ್ಲಿ ಮಿನಿ ಕರ್ನಾಟಕವೇ ಅನಾವರಣಗೊಂಡಿತ್ತು. ಒಂದೊಂದು ಜಿಲ್ಲೆಯ ವೈಶಿಷ್ಟ್ಯಗಳನ್ನು ಮಕ್ಕಳು ತಮ್ಮದೇ ಆದ ಪರಿಕಲ್ಪನೆಯಲ್ಲಿ ಅರಳಿಸಿದ್ದರು. ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಹನೀಯರ ವೇಷಭೂಷಣ ತೊಟ್ಟು ಚಿಣ್ಣರು ಗಮನ ಸೆಳೆದರು.
ಶನಿವಾರ ಈ ದೃಶ್ಯ ಕಂಡು ಬಂದಿದ್ದು, ನಗರದ ಬಿ.ಇ.ಎ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ದಕ್ಷಿಣ ವಲಯ, ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೆಲವು ಪರಿಕರಗಳನ್ನು ಬಳಸಿ ಮಾದರಿಗಳನ್ನು ಪ್ರದರ್ಶಿಸಿದರು. ಭಾವಚಿತ್ರಗಳೂ ಇದ್ದವು. ಆಯಾ ಜಿಲ್ಲೆಗಳ ವಿಶೇಷ ಆಹಾರ ಪದಾರ್ಥಗಳನ್ನು ಇಡಲಾಗಿತ್ತು. ಒಟ್ಟಿನಲ್ಲಿ ನೋಡುಗರಿಗೆ ಕರ್ನಾಟಕದ ಪ್ರವಾಸ ಮಾಡಿಬಂದ ಅನುಭವ ಆಗುವಂತಿತ್ತು.
ಶಿವಮೊಗ್ಗದ ಜೋಗ ಜಲಪಾತ, ಬೆಂಗಳೂರಿನ ವಿಮಾನ ನಿಲ್ದಾಣ, ಕಬ್ಬನ್ ಪಾರ್ಕ್, ಮೆಟ್ರೋ, ಮೈಸೂರಿನ ಅರಮನೆ, ಮೃಗಾಲಯ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಗುಹೆಗಳು, ಐಹೊಳೆ, ಪಟ್ಟದಕಲ್ಲು ದೇವಾಲಯಗಳು, ಕೂಡಲಸಂಗಮ, ಆ ಜಿಲ್ಲೆಯ ಆಹಾರ ಪದಾರ್ಥಗಳು, ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳು ಅಲ್ಲಿದ್ದವು.
ಧಾರವಾಡದ ಗಿರ್‌ಮಿಟ್, ಧಾರವಾಡ ಪೇಡಾ, ವಿಮಾನ ನಿಲ್ದಾಣ, ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತ, ಹೈಕೋರ್ಟ್ ಪೀಠ, ಜಿಲ್ಲೆಯ ನದಿಗಳು, ಕವಿಗಳ ಭಾವಚಿತ್ರಗಳು. ತುಮಕೂರಿನ ಸಿದ್ಧಗಂಗಾ ಮಠ, ಕಲಬುರಗಿಯ ರೈಲು ನಿಲ್ದಾಣ, ಜೋಳದ ರೊಟ್ಟಿ, ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಹಂಪಿಯ ಕಲ್ಲಿನ ರಥ, ಯಾದಗಿರಿಯ ಕೋಟೆ, ಬೆಳಗಾವಿಯ ಸುರ್ವರ್ಣ ಸೌಧ, ಕುಂದಾ, ಉಡುಪಿಯ ಕೃಷ್ಣಮಠ, ಚಿಕ್ಕಮಗಳೂರಿನ ಕಾಫಿ ಮತ್ತು ಟೀ ಎಸ್ಟೇಟ್‌ಗಳು, ದಾವಣಗೆರೆ ಸ್ಪೆಷಲ್ ಬೆಣ್ಣೆದೋಸೆ ಹೀಗೆ ಇಡೀ ನಾಡಿನ ವಿಶೇಷಗಳ ಸಂಕ್ಷಿಪ್ತ ರೂಪ ಅಲ್ಲಿ ನೋಡಲು ಸಿಕ್ಕಿತು.
ಸಾಂಸ್ಕೃತಿಕ ಹಿರಿಮೆ ಪರಿಚಯ… ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ದೇಶ ಸುತ್ತಬೇಕು, ಕೋಶ ಓದಬೇಕು. ಇಂಥ ಕಾರ್ಯಕ್ರಮಗಳ ಮೂಲಕ ನಾಡಿನ ಸಾಂಸ್ಕೃತಿಕ ಹಿರಿಮೆಯ ಪರಿಚಯವಾಗುತ್ತದೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ಶಾಲೆಯಲ್ಲಿ ಕಲಿಯುವ ವಿಷಯಗಳ ಜತೆಗೆ ಇಂಥ ಕಾರ್ಯಕ್ರಮಗಳು ಮಕ್ಕಳಿಗೆ ಹೊಸ ಅನುಭವ ನೀಡುತ್ತವೆ ಎಂದು ತಿಳಿಸಿದರು. ಸ್ಕೌಟ್ ದಕ್ಷಿಣ ವಲಯ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಗೈಡ್ಸ್ ಸಂಸ್ಥೆಯ ರಾಜ್ಯ ತರಬೇತಿ ಸದಸ್ಯೆ ಶಕುಂತಲಾ, ಸ್ಕೌಟ್ ಮಾಸ್ಟರ್ ವಿಜಯ್, ಚೇತನಾ ಗೈಡ್ ಗ್ರೂಪ್‌ನ ಮಧುಶ್ರೀ ಇದ್ದರು.