Advertisement

2ನೇ ದಿನವೂ ಬ್ಯಾಂಕ್‌ ನೌಕರರ ಮುಷ್ಕರ

11:32 AM Feb 02, 2020 | Team Udayavani |

ದಾವಣಗೆರೆ: 11ನೇ ದ್ವಿಪಕ್ಷೀಯ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳು ರಾಷ್ಟ್ರವ್ಯಾಪಿ ಮುಷ್ಕರ ಶನಿವಾರವೂ ನಡೆಯಿತು.

Advertisement

ಮಂಡಿಪೇಟೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕ್ಷೇತ್ರಿಯ ಕಾರ್ಯಾಲಯದ ಮುಂದೆ ಜಮಾಯಿಸಿದ್ದ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರ ಮತ್ತು ಐಬಿಎನ ನಕಾರಾತ್ಮಕ ಪ್ರತಿಕ್ರಿಯೆ ಖಂಡಿಸಿ, ಪ್ರತಿಭಟಿಸಿದರು.

ವೇತನ ಪರಿಷ್ಕರಣೆ ಕಳೆದ 27 ತಿಂಗಳುಗಳಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಹಲವಾರು ಸಭೆಗಳು ಆಗಿದ್ದರೂ ಕೇಂದ್ರ ಸರ್ಕಾರ ಮತ್ತು ಐಬಿಎ ನಮ್ಮ ಬೇಡಿಕೆ ಈಡೇರಿಸಲು ಆಸಕ್ತಿ ತೋರಿಸುತ್ತಿಲ್ಲ. ಈಗ ಐಬಿಎ ನಮ್ಮ ಬಗ್ಗೆ ನಕಾರಾತ್ಮಕ ಪ್ರಚಾರದಲ್ಲಿ ತೊಡಗಿದೆ. ಮುಷ್ಕರದ ಕ್ರಮ ಬೇಜವಾಬ್ದಾರಿಯಾಗಿದೆ ಎಂದು ಪ್ರಕಟಿಸುತ್ತಿದೆ. 01-11-2017ರಿಂದ ಜಾರಿಗೆ ಬರಬೇಕಾಗಿದ್ದ ವೇತನ ಪರಿಷ್ಕರಣೆ ಇನ್ನೂ ಜಾರಿಗೆ ಬರದಿರುವುದು ಬೇಜವಾಬ್ದಾರಿಯೋ
ಅಥವಾ ಅನಿವಾರ್ಯವಾಗಿ ಹೋರಾಟದ ಹಾದಿ ತುಳಿದಿರುವ ನಮ್ಮ ನಡೆ ಬೇಜವಾಬ್ದಾರಿಯೋ ಎಂದು ಕೇಂದ್ರ ಸರ್ಕಾರವೇ ಆತ್ಮಾವಲೋಕನ ಮಾಡಿಕೊಳ್ಳಬೇಕು
ಎಂದು ಕೆ.ರಾಘವೇಂದ್ರ ನಾಯರಿ ಈ ಸಂದರ್ಭದಲ್ಲಿ ಹೇಳಿದರು.

ಕೆ.ಎನ್‌.ಗಿರಿರಾಜ್‌ ಮಾತನಾಡಿ, ಹೆಚ್ಚಿನ ವೇತನ ಪರಿಷ್ಕರಣೆ ಸಾಧ್ಯವಿಲ್ಲ, ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ ಎಂಬುದಾಗಿ ಹೇಳುತ್ತಿದ್ದಾರೆ. ಇದು ಸುಳ್ಳು ಮಾಹಿತಿ. 31-3-2019ರ ಅಂಕಿ-ಅಂಶದ ಪ್ರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳು 1,49,804 ಕೋಟಿ ನಿರ್ವಹಣಾ ಲಾಭ ಗಳಿಸಿವೆ. ಆದರೆ, ಸರ್ಕಾರ ಮತ್ತು ಬ್ಯಾಂಕ್‌ಗಳ ತಪ್ಪು ನೀತಿಯಿಂದಾಗಿ ಖಾಸಗಿ ಬಂಡವಾಳಶಾಹಿಗಳಿಗೆ ಬ್ಯಾಂಕ್‌ಗಳ ಲಾಭವನ್ನು ಲೂಟಿ ಹೊಡೆಯಲು ಅವಕಾಶ ನೀಡಿದ್ದರ
ಪರಿಣಾಮ, 2,16,410 ಕೋಟಿ ರೂ. ವಸೂಲಾಗದ ಸಾಲಕ್ಕೆ ಸರಿಹೊಂದಿಸಲು ಮೀಸಲಿಟ್ಟ ಕಾರಣದಿಂದಾಗಿ ಬ್ಯಾಂಕ್‌ ಗಳು ಅಂತಿಮವಾಗಿ ನಷ್ಟವನ್ನು ದಾಖಲಿಸಬೇಕಾದ ಸಂದರ್ಭ
ತಲೆದೋರಿದೆ. ಈ ಸ್ಥಿತಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳ ಆಡಳಿತ ಮಂಡಳಿಯೇ ಕಾರಣವೇ ಹೊರತು ನೌಕರರು ಕಾರಣರಲ್ಲ. ಬ್ಯಾಂಕ್‌ ಗಳು ಲಾಭ ಗಳಿಸುತ್ತಿದ್ದರೂ ಅದನ್ನು ಸಾಲ ಮನ್ನಾ, ಬಡ್ಡಿ ಮನ್ನಾದಂತಹ ದೇಶವಿರೋಧಿ  ನೀತಿಗಳ ಮೂಲಕ ಲೂಟಿ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಎಲ್ಲಾ ಬ್ಯಾಂಕ್‌ಗಳಿಗೆ ನಮ್ಮ ಬೇಡಿಕೆಯ ಅನುಸಾರ ಮತ್ತು ಗೌರವಯುತ ವೇತನ ಹೆಚ್ಚಳ ಮಾಡುವ ಸಾಮರ್ಥ್ಯ ಇದೆ. ಸರ್ಕಾರ ಈ ಕುರಿತಾಗಿ ಇಚ್ಛಾಶಕ್ತಿ ತೋರಿಸಬೇಕಿದೆ ಎಂದು ಹೇಳಿದರು.

ನಿವೃತ್ತ ಬ್ಯಾಂಕ್‌ ನೌಕರರು ಮತ್ತು ಅಧಿ ಕಾರಿಗಳ ಸಂಘಟನೆಗಳ ಸದಸ್ಯರು ವಿ.ನಂಜುಂಡೇಶ್ವರ, ಜಿ.ರಂಗಸ್ವಾಮಿ, ಅಜಿತ್‌ಕುಮಾರ್‌ ನ್ಯಾಮತಿ, ಎಚ್‌.ನಾಗರಾಜ…,
ಎನ್‌.ಟಿ.ಯರ್ರಿಸ್ವಾಮಿ, ಎಸ್‌ .ಟಿ.ಶಾಂತಗಂಗಾಧರ, ಎಚ್‌. ಸುಗುರಪ್ಪರವರ ನೇತೃತ್ವದಲ್ಲಿ
ಮುಷ್ಕರದಲ್ಲಿ ಭಾಗವಹಿಸಿ 26 ವರ್ಷಗಳಿಂದ ಈಡೇರದಿರುವ ತಮ್ಮ ಪಿಂಚಣಿ ಪರಿಷ್ಕರಣೆ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

Advertisement

ಸರ್ಕಾರ ಮತ್ತು ಐಬಿಎ ಮಾನ್ಯತೆ ನೀಡಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ
ದಿನಗಳಲ್ಲಿ ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಬರುವ ಮಾರ್ಚ್‌ ತಿಂಗಳ 11, 12, 13 ರಂದು ಮೂರು ದಿನಗಳ ಮುಷ್ಕರ ಹಾಗೂ ಏಪ್ರಿಲ್‌ 1ನೇ ತಾರೀಖೀನಿಂದ
ಅನಿ ರ್ದಿಷ್ಟಾವ ಧಿ ಬ್ಯಾಂಕ್‌ ಮುಷ್ಕರ ನಡೆಸಲಾಗುವುದು ಎಂದು ಕೆನರಾ ಬ್ಯಾಂಕ್‌ ಅ ಧಿಕಾರಿಗಳ ಸಂಘದ ಆರ್‌. ಶ್ರೀನಿವಾಸ್‌ ಹೇಳಿದರು.

ಮುಷ್ಕರದಲ್ಲಿ ಬಿ.ಆನಂದಮೂರ್ತಿ, ಕೆ.ಬಿ.ಮಂಜುನಾಥ್‌, ಎಚ್‌ .ಜಿ.ಸುರೇಶ್‌, ವಿಜಯಾಬ್ಯಾಂಕ್‌ನ ಆನಂದಮೂರ್ತಿ, ಪ್ರಶಾಂತ್‌ ಎಸ್‌. ಪಿ.ಆರ್‌.ಪುರುಷೋತ್ತಮ್‌, ಎಂ.ಎಸ್‌. ವಾಗೀಶ್‌, ಎಂ.ಪಿ.ಕಿರಣಕುಮಾರ್‌, ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next