Advertisement

ರಾಜಕಾರಣದ ಅದೃಷ್ಟದ ಸೆಲೆ ದಾವಣಗೆರೆ: 7ಕ್ಷೇತ್ರಗಳು

01:16 AM Jan 19, 2023 | Team Udayavani |

ಮಧ್ಯ ಕರ್ನಾಟಕದಲ್ಲಿರುವ, ಮಂಡಕ್ಕಿ ನಾಡು ಎಂದೇ ಖ್ಯಾತಿವೆತ್ತಿರುವ ದಾವಣಗೆರೆ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಒತ್ತಿದೆ. ಈ ಜಿಲ್ಲೆಯಲ್ಲಿಗೆದ್ದವರಿಗೆ ಸರಕಾರದಲ್ಲಿ ಒಂದಲ್ಲ ಒಂದು ಉನ್ನತ ಹುದ್ದೆ ಸಿಗುವುದು ಖಚಿತ ಎಂಬಂತಿದೆ. ಸದ್ಯ ಏಳು ವಿಧಾನಸಭಾ ಕ್ಷೇತ್ರಗಳಿರುವ ದಾವಣಗೆರೆಯಲ್ಲಿ ಐದರಲ್ಲಿ ಬಿಜೆಪಿ ಗೆದ್ದಿದ್ದರೆ, ಎರಡರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹೀಗಾಗಿ ಈ ಬಾರಿಯ ಚುನಾವಣೆ ಇನ್ನಿಲ್ಲದ ಕುತೂಹಲ ಮೂಡಿಸಿದೆ.

Advertisement

ಕ್ಷೇತ್ರ ದರ್ಶನ
ಬೆಣ್ಣೆನಗರಿ ದಾವಣಗೆರೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆ ಚಾಲನೆಗೆ ಪ್ರಮುಖ ಕೇಂದ್ರವಾಗಿ ಪರಿಗಣಿಸಿರುವುದರಿಂದ ರಾಜ್ಯದ ಚುನಾವಣ ರಾಜಕೀಯ ಚಟುವಟಿಕೆ ದಾವಣಗೆರೆಯಿಂದಲೇ ಶುರುವಾಗುವುದು ರೂಢಿಯಾಗಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆ ಚಟುವಟಿಕೆಗೆ (ಕಾಂಗ್ರೆಸ್‌ ಸಂಘಟಿಸಿದ್ದ ಸಿದ್ದರಾಮಯ್ಯ ಜಯಂತಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ  ಸ್ಥಳೀಯ ಮಠ ಭೇಟಿ)ಇಲ್ಲಿಂದಲೇ ಚಾಲನೆ ಸಿಕ್ಕಿದೆ.

ಮಧ್ಯ ಕರ್ನಾಟಕದ ದಾವಣಗೆರೆ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆ ಯುವ ಜಿಲ್ಲೆ. ರಾಜ್ಯ ರಾಜಕೀಯ ಹಾಗೂ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವದ ಮೂಲಕ ಛಾಪು ಮೂಡಿಸಿದ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಇದೇ ಜಿಲ್ಲೆಯ ಚನ್ನಗಿರಿ ತಾಲೂಕಿನವರಾಗಿರುವುದು ವಿಶೇಷ. ಇದರ ಜತೆಗೆ ದಿ| ಬಳ್ಳಾರಿ ಸಿದ್ದಮ್ಮ, ದಿ| ಕೊಂಡಜ್ಜಿ ಬಸಪ್ಪ, ದಿ| ಗಾಂಜಿ ವೀರಪ್ಪ, ದಿ| ಕೆ.ಪಂಪಾಪತಿ, ದಿ| ಎಚ್‌.ಸಿದ್ಧವೀರಪ್ಪ,  ಮಾಜಿ ಸಚಿವರಾದ ನಾಗಮ್ಮ ಕೇಶವಮೂರ್ತಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಎಸ್‌.ಎ.ರವೀಂದ್ರನಾಥ್‌ ಸೇರಿ ಅನೇಕ ಘಟಾನುಘಟಿ ರಾಜಕಾರಣಿಗಳನ್ನು ರಾಜ್ಯ ರಾಜಕೀಯಕ್ಕೆ ಕೊಡುಗೆಯಾಗಿ ನೀಡಿದ ಜಿಲ್ಲೆಯಿದು.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು  ಏಳು ವಿಧಾನಸಭೆ ಕ್ಷೇತ್ರಗಳಿವೆ. ಮಾಯಕೊಂಡ (ಎಸ್‌.ಸಿ) ಹಾಗೂ ಜಗಳೂರು (ಎಸ್‌.ಟಿ.) ಮೀಸಲು ವಿಧಾನಸಭೆ ಕ್ಷೇತ್ರಗಳಾಗಿವೆ. ಉಳಿದ ಹರಿಹರ, ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರು, ಇಬ್ಬರು ಕಾಂಗ್ರೆಸ್‌ ಶಾಸಕರಿದ್ದಾರೆ.

 ಜಗಳೂರು  (ಎಸ್‌.ಟಿ. ಮೀಸಲು)
ಈ ವಿಧಾನಸಭೆ ಕ್ಷೇತ್ರದಲ್ಲಿ 1952ರಿಂದಲೂ ಕಾಂಗ್ರೆಸ್‌ನ ದಿ| ಜಿ.ಎಚ್‌. ಅಶ್ವಥ್‌ರೆಡ್ಡಿ ನಿರಂತರವಾಗಿ ಸ್ಪರ್ಧಿಸಿದ್ದು ಇವರು ಆರು ಬಾರಿ ವಿಜಯಪತಾಕೆ ಹಾರಿಸಿದ್ದರು. ವಿದ್ಯುತ್‌ ಸಚಿವರಾಗಿದ್ದ ಇವರೇ ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಬಾರಿ ಗೆಲುವು ಸಾಧಿಸಿದವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಉಪಚುನಾವಣೆ ಸೇರಿ 15ಬಾರಿ ವಿಧಾನಸಭೆ ಚುನಾವಣೆಗಳು ನಡೆದಿವೆ. ಕಾಂಗ್ರೆಸ್‌ ಎಂಟು ಬಾರಿ, ಬಿಜೆಪಿ ಮೂರು ಬಾರಿ, ಕೆಎಂಪಿ, ಕೆಸಿಪಿ, ಸ್ವತಂತ್ರ, ಕೆಜೆಪಿ ತಲಾ ಒಂದೊಂದು ಬಾರಿ ಗೆಲವು ಸಾಧಿಸಿವೆ. ಜಗಳೂರಲ್ಲಿ ಬಿಜೆಪಿಯಿಂದ ಎಸ್‌.ವಿ.ರಾಮಚಂದ್ರ ಅವರು ಆರಿಸಿ ಬಂದಿದ್ದಾರೆ.

Advertisement

ದಾವಣಗೆರೆ ಉತ್ತರ
ದಾವಣಗೆರೆ ಕ್ಷೇತ್ರ 2008ರಲ್ಲಿ ಮರುವಿಂಗಡಣೆಯಾದ ಬಳಿಕ ದಾವಣಗೆರೆ ಉತ್ತರ ಕ್ಷೇತ್ರ ಹೊಸದಾಗಿ ರೂಪುಗೊಂಡಿತು. 2008ರಿಂದ 2018ವರೆಗೆ ನಡೆದ ಮೂರು ಚುನಾವಣೆಗಳಲ್ಲಿ  ಒಮ್ಮೆ ಕಾಂಗ್ರೆಸ್‌ (2013), ಎರಡು ಬಾರಿ ಬಿಜೆಪಿ (2008, 2018) ಗೆಲುವು ಸಾಧಿಸಿವೆ. ಮಾಜಿ ಸಚಿವರಾದ ಎಸ್‌.ಎ. ರವೀಂದ್ರನಾಥ್‌ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ಈ ಹೊಸ ಕ್ಷೇತ್ರದಿಂದಲೇ ಆಯ್ಕೆಯಾದವರಾಗಿದ್ದಾರೆ. ಕ್ಷೇತ್ರ ಮರುವಿಂಗಡಣೆಗೆ ಮೊದಲು ದಾವಣಗೆರೆ ಕ್ಷೇತ್ರದಲ್ಲಿ 1952ರಿಂದ 1994ರ ವರೆಗೆ ನಡೆದ 12ಚುನಾವಣೆಗಳಲ್ಲಿ  ಎಂಟು ಬಾರಿ ಕಾಂಗ್ರೆಸ್‌, ಮೂರು ಬಾರಿ ನಿರಂತರವಾಗಿ ಸಿಪಿಐಯ ಕೆ. ಪಂಪಾಪತಿ ಆಯ್ಕೆಯಾಗಿದ್ದು ಪಿಎಸ್‌ಪಿ ಒಮ್ಮೆ ಜಯಗಳಿಸಿದೆ. ದಾವಣಗೆರೆ ಕ್ಷೇತ್ರ ಮರುವಿಂಗಡಣೆಗೆ ಮೊದಲು ಎಸ್‌.ಎಸ್‌. ಮಲ್ಲಿಕಾರ್ಜುನ 1998ರ ಉಪಚುನಾವಣೆಯಲ್ಲಿ ಗೆದ್ದಿದ್ದರು. ಮರುವಿಂಗಡಣೆಯಲ್ಲಿ  ಸಾಮಾನ್ಯ ಕ್ಷೇತ್ರವಾಗಿದ್ದ ಮಾಯಕೊಂಡ ಮೀಸಲು ಕ್ಷೇತ್ರ ಆದ ಬಳಿಕ ಬಿಜೆಪಿಯ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ತಮ್ಮ ಸ್ಪರ್ಧೆಗೆ ಈ ಕ್ಷೇತ್ರ ಆಯ್ಕೆ ಮಾಡಿಕೊಂಡು ಎರಡು ಬಾರಿ ಗೆಲುವು ಸಾಧಿಸಿದ್ದಾರೆ. 2008ರಲ್ಲಿ ರವೀಂದ್ರನಾಥ್‌, 2013ರಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ ಗೆದ್ದಿದ್ದರೆ, 2018ರಲ್ಲಿ ಎಸ್‌.ಎ.ರವೀಂದ್ರನಾಥ್‌ ಮತ್ತೆ ಗೆಲುವು ಸಾಧಿಸಿದ್ದಾರೆ.

ಚನ್ನಗಿರಿ
ಈ ವಿಧಾನಸಭೆ ಕ್ಷೇತ್ರದಲ್ಲಿ 1952ರಿಂದಲೂ ಜನತಾಪಕ್ಷದಿಂದ ಜೆ.ಎಚ್‌. ಪಟೇಲ್‌ ಹಾಗೂ ಕಾಂಗ್ರೆಸ್‌ನಿಂದ ಕುಂದೂರು ರುದ್ರಪ್ಪ ನಿರಂತರವಾಗಿ ಸ್ಪರ್ಧಿಸುತ್ತ ಬಂದಿದ್ದ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ದಿ| ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲರೇ ಅತೀ ಹೆಚ್ಚು ಅಂದರೆ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಕಾಂಗ್ರೆಸ್‌ನ ದಿವಂಗತ ಎನ್‌.ಜಿ. ಹಾಲಪ್ಪ ಎರಡು ಬಾರಿ ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರ ದಲ್ಲಿ ಈವರೆಗೆ 15ಬಾರಿ ವಿಧಾನಸಭೆ ಚುನಾವಣೆಗಳು ನಡೆದಿವೆ. ಇದರಲ್ಲಿ ಜನತಾಪಕ್ಷ ಮತ್ತು ಕಾಂಗ್ರೆಸ್‌ ತಲಾ ನಾಲ್ಕು ಬಾರಿ, ಬಿಜೆಪಿ ಮೂರು ಬಾರಿ ಹಾಗೂ ಕೆಪಿಎಂ, ಎಸ್‌ಎಸ್‌ಪಿ, ಪಕ್ಷೇತರ, ಜೆಡಿಎಸ್‌ ತಲಾ ಒಂದು ಬಾರಿ ವಿಜಯ ಸಾಧಿಸಿವೆ. ಬಿಜೆಪಿಯ ಮಾಡಾಳ್‌ ವಿರುಪಾಕ್ಷಪ್ಪ ಅವರು ಸದ್ಯ ಶಾಸಕರಾಗಿದ್ದಾರೆ

ಹರಿಹರ
ಹರಿಹರ ಕ್ಷೇತ್ರ ಈವರೆಗೆ ರಾಜ್ಯಕ್ಕೆ ಮೂವರು ಸಚಿವರನ್ನು ಕೊಟ್ಟಿದೆ. ಆರೋಗ್ಯ ಸಚಿವರಾಗಿದ್ದ ಎಚ್‌.ಸಿ. ಸಿದ್ದವೀರಪ್ಪ, ಸಮಾಜಕಲ್ಯಾಣ ಸಚಿವರಾಗಿದ್ದ ಡಾ| ವೈ. ನಾಗಪ್ಪ, ಹಾಗೂ ಭಾರೀ ಕೈಗಾರಿಕೆ ಹಾಗೂ ಮೊದಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಶಿವಪ್ಪ  ಈ ಕ್ಷೇತ್ರದವರೇ ಆಗಿದ್ದಾರೆ. 1952ರಿಂದ 2018ವರೆಗೆ ಈ ಕ್ಷೇತ್ರದಲ್ಲಿ ಒಟ್ಟು 15 ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್‌ ಅತೀ ಹೆಚ್ಚು ಅಂದರೆ ಎಂಟು ಬಾರಿ, ಪಕ್ಷೇತರರು ಹಾಗೂ ಜನತಾಪಕ್ಷ ತಲಾ ಎರಡು ಬಾರಿ, ಉಳಿದಂತೆ ಪಿಎಸ್‌ಪಿ, ಬಿಜೆಪಿ ಮತ್ತು ಜೆಡಿಎಸ್‌ ತಲಾ ಒಂದು ಬಾರಿ ಗೆಲುವು ಸಾಧಿಸಿವೆ. ಹರಿಹರದಲ್ಲಿ ಕಾಂಗ್ರೆಸ್‌ನ ಎಸ್‌.ರಾಮಪ್ಪ ಅವರು ಹಾಲಿ ಶಾಸಕರಾಗಿದ್ದಾರೆ.

ದಾವಣಗೆರೆ ದಕ್ಷಿಣ
ದಾವಣಗೆರೆ ಕ್ಷೇತ್ರ 2008ರಲ್ಲಿ ಮರುವಿಂಗಡಣೆಯಾದ ಬಳಿಕ ದಾವಣಗೆರೆ ದಕ್ಷಿಣ  ಕ್ಷೇತ್ರ ಹೊಸದಾಗಿ ರಚನೆಯಾಯಿತು. 2008ರಿಂದ 2018ರ ವರೆಗೆ ನಡೆದ ಮೂರು ಚುನಾವಣೆಗಳಲ್ಲಿ  ಮೂರು ಬಾರಿ ನಿರಂತರ ಮಾಜಿ ಸಚಿವ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಅವರೇ ಗೆಲುವು ಸಾಧಿಸಿದ್ದು  92ವರ್ಷದ ಶಾಮನೂರು ಶಿವಶಂಕರಪ್ಪ  ನಾಲ್ಕನೇ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳೆಂದು ಮರುವಿಂಗಡಣೆ ಯಾಗುವ ಮೊದಲು ದಾವಣಗೆರೆ ಕ್ಷೇತ್ರದಲ್ಲಿ  ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಎರಡು ಬಾರಿ (1994, 2004) ವಿಜಯ ಸಾಧಿಸಿದ್ದಾರೆ.

ಹೊನ್ನಾಳಿ
ಈ ವಿಧಾನಸಭೆ ಕ್ಷೇತ್ರ ಮೊದಲು ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಇದನ್ನು  2004ರಲ್ಲಿ ಭೇದಿಸಿದ ಬಿಜೆಪಿ, 2018ರ ವರೆಗೂ ನಿರಂತರವಾಗಿ ಗೆಲುವು ಸಾಧಿಸುತ್ತ ಬಂದಿದೆ. ಕ್ಷೇತ್ರದಲ್ಲಿ 1952ರಿಂದ ಕಾಂಗ್ರೆಸ್‌ ಪಕ್ಷವೇ ಹೆಚ್ಚು ಬಾರಿ ವಿಜಯ ಸಾಧಿಸಿದೆಯಾದರೂ ಒಬ್ಬರೇ ನಿರಂತರವಾಗಿ ಗೆದ್ದಿಲ್ಲ. ಒಂದೊಂದು ಅಭ್ಯರ್ಥಿ ಎರಡೂ¾ರು ಬಾರಿ ಗೆದ್ದಿದ್ದಾರೆ. ಬಿಜೆಪಿಯಿಂದ 2004ರಿಂದ ಮೂರು ಬಾರಿ ಮಾಜಿ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪರ್ಧಿಸಿ ಗೆದ್ದಿದ್ದಾರೆ. ಕೆಜೆಪಿಯಿಂದ ಒಮ್ಮೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕ್ಷೇತ್ರದಲ್ಲಿ ಈವರೆಗೆ 15ಚುನಾವಣೆಗಳು ನಡೆದಿದ್ದು ಕಾಂಗ್ರೆಸ್‌ ಏಳು ಬಾರಿ, ಬಿಜೆಪಿ ನಾಲ್ಕು ಬಾರಿ, ಪಿಎಸ್‌ಪಿ, ಜನತಾಪಕ್ಷ, ಕೆಸಿಪಿ, ಹಾಗೂ ಸ್ವತಂತ್ರ ತಲಾ ಒಂದು ಬಾರಿ ಗೆಲುವು ಸಾಧಿಸಿವೆ. ಸದ್ಯ ಬಿಜೆಪಿಯ ರೇಣುಕಾಚಾರ್ಯ ಅವರೇ ಶಾಸಕರಾಗಿದ್ದಾರೆ.

ಮಾಯಕೊಂಡ (ಎಸ್‌.ಸಿ. ಮೀಸಲು)
ಈ ಕ್ಷೇತ್ರ 1978ರ ವರೆಗೂ ದಾವಣಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿತ್ತು. ಕ್ಷೇತ್ರ ಮರು ವಿಂಗಡಣೆಯಿಂದಾಗಿ ಸ್ವತಂತ್ರ ಕ್ಷೇತ್ರವಾದ ಬಳಿಕ 1978ರಿಂದ 2008ರ ವರೆಗೆ ನಡೆದ ಏಳು ಚುನಾವಣೆಗಳಲ್ಲಿ ಮೂರು ಬಾರಿ ಬಿಜೆಪಿ, ಜನತಾಪಕ್ಷ ಹಾಗೂ ಕಾಂಗ್ರೆಸ್‌ ತಲಾ ಎರಡು ಬಾರಿ ವಿಜಯ ಸಾಧಿಸಿವೆ. ಮಾಜಿ ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್‌.ಎ. ರವೀಂದ್ರನಾಥ್‌ ಎರಡು ಬಾರಿ ವಿಜಯಪತಾಕೆ ಹಾರಿಸಿದ್ದರು. ಮಾಜಿ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ ಮಾಯಕೊಂಡ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ. ಸಾಮಾನ್ಯ ಕ್ಷೇತ್ರವಾಗಿದ್ದ ಮಾಯಕೊಂಡ ಕ್ಷೇತ್ರ 2008ರ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರವಾಗಿ ಪರಿವರ್ತನೆಯಾಯಿತು. ಮೀಸಲು ಕ್ಷೇತ್ರವಾದ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಎರಡು ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಸದ್ಯ ಬಿಜೆಪಿಯ ಪ್ರೊ| ಎನ್‌. ಲಿಂಗಣ್ಣ ಅವರು ಶಾಸಕರಾಗಿದ್ದಾರೆ.

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next