Advertisement

ಕುಂದುವಾಡ ಕೆರೆ ಪ್ರವಾಸಿ ತಾಣವಾಗಲಿ

10:35 AM Jul 24, 2019 | Team Udayavani |

ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ….ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

Advertisement

ಜಲಾಮೃತ-ಜಲಶಕ್ತಿ ಯೋಜನೆ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಕುಂದುವಾಡ ಕೆರೆಯಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಮಾತನಾಡಿದ ಅವರು, ಅತ್ಯಾಕರ್ಷಕವಾಗಿರುವ ಕುಂದುವಾಡ ಕೆರೆ ಈಗಾಗಲೇ ಸಾಕಷ್ಟ ಜನರು ಭೇಟಿ ನೀಡುವ ಸ್ಥಳವಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ದೃಷ್ಟಿಯಿಂದ ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ… ಎಂಬುದಾಗಿ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕುಂದುವಾಡ ಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಮೂರು ಕಾರಂಜಿ, ಉದ್ಯಾನವನ ನಿರ್ಮಾಣ ಮಾಡಲಾಗುವುದು. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರಗಳ ಜೊತೆಗೆ ಬ್ಯಾಂಕ್‌, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರ ಒಗ್ಗೂಡಿಸಿಕೊಂಡು ಕುಂದುವಾಡ ಕೆರೆಯನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕುಂದುವಾಡ ಕೆರೆ ಕುಡಿಯುವ ನೀರಿನ ಮೂಲಾಶ್ರಯ ಆಗಿರುವ ಹಿನ್ನೆಲೆಯಲ್ಲಿ ಶುಚಿತ್ವ ಮತ್ತು ಶುದ್ಧತೆಗೆ ಹೆಚ್ಚಿನ ಗಮನ ನೀಡಲಾಗುವುದು. ಕುಂದುವಾಡ ಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಎಂತದ್ದೇ ಮಾಲಿನ್ಯಕ್ಕೆ ಅವಕಾಶ ನೀಡುವುದಿಲ್ಲ. ಕೆರೆಯನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸುವ ಜೊತೆಗೆ ಮಾಲಿನ್ಯರಹಿತವಾಗಿ ಇರುವಂತೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕುಂದುವಾಡ ಕೆರೆಗೆ ಸಾವಿರಾರು ಸಂಖ್ಯೆಯಲ್ಲಿನ ವಿದೇಶಿ ಹಕ್ಕಿಗಳು ವಲಸೆ ಬರುತ್ತವೆ. ಅಂತಹ ವಲಸೆ ಹಕ್ಕಿಗಳಿಗೆ ಅಗತ್ಯವಾದ ಪರಿಸರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

Advertisement

ಸುಂದರ, ಸ್ವಚ್ಛತೆ, ಮಾಲಿನ್ಯ ರಹಿತ, ಹಸಿರೀಕರಣದ ದಾವಣಗೆರೆಯ ನಿರ್ಮಾಣ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಕೆಲವಾರು ಕೈಗಾರಿಕೆ, ಉದ್ಯಮಿಗಳೊಂದಿಗೆ ಸಭೆ ನಡೆಸಿ, ಕೆಲವು ಪ್ರದೇಶಗಳ ಹಸಿರೀಕರಣ, ಅಭಿವೃದ್ಧಿ, ಸೌಂದರ್ಯಿಕರಣ, ನಿರ್ವಹಣಾ ಜವಾಬ್ದಾರಿ ವಹಿಸಿದೆ. ಅದರ ಅಂಗವಾಗಿ ಕುಂದುವಾಡ ಕೆರೆಯಲ್ಲಿ ಎಲ್ಲಾ ಅಧಿಕಾರಿಗಳ ಸಹಯೋಗದಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಹಸಿರೀಕರಣ..ಮಾಡಿ ಎಂದು ಹೇಳುವ ಅಧಿಕಾರಿಗಳೇ ಮೊದಲು ಹಸಿರೀಕರಣಕ್ಕೆ ನಾಂದಿ ಹಾಡಬೇಕು ಎಂಬ ಕಾರಣಕ್ಕೆ ಚಾಲನೆ ನೀಡಿರುವ ವನಮಹೋತ್ಸವಕ್ಕೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಇಲಾಖೆಗಳ ಜೊತೆಗೆ ಪರಿಸರ ಪ್ರೇಮಿಗಳು, ಸ್ವಯಂ ಸೇವಾ ಸಂಸ್ಥೆಗಳು, ಮಾಧ್ಯಮಗಳು ಕೈ ಜೋಡಿಸಬೇಕು. ಮಾಧ್ಯಮಗಳು ಸುಂದರ, ಸ್ವಚ್ಛ, ಹಸರಿನ, ಮಾಲಿನ್ಯ ರಹಿತ ದಾವಣಗೆರೆ ನಿರ್ಮಾಣದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಕುಂದುವಾಡ ಕೆರೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಯೋಗಪಟುಗಳು ಬರುತ್ತಾರೆ. ಯೋಗಾಭ್ಯಾಸಕ್ಕೆ ಅನುಕೂಲ ಆಗುವಂತಹ ವಾತಾವರಣ ಇಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್. ಬಸವರಾಜೇಂದ್ರ ಮಾತನಾಡಿ, ಜಲಾಮೃತ… ಯೋಜನೆಯಡಿ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾವಾರು ಆಂದೋಲನ ರೂಪದಲ್ಲಿ ನಡೆಯುತ್ತಿದೆ. 7 ಲಕ್ಷ ಸಸಿಗಳನ್ನು ನೆಡುವ ಗುರಿಯಲ್ಲಿ ಈಗಾಗಲೇ 1 ಲಕ್ಷ ಗಿಡ ನೆಡಲಾಗಿದೆ. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಮೊದಲ ಇಲ್ಲವೇ ಮೂರನೇ ಶನಿವಾರ ಸಸಿ ನೆಡುವ, ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸ್ವಚ್ಛಮೇವ ಜಯತೆ…ಕಾರ್ಯಕ್ರಮದಡಿ ಹಾಸ್ಟೆಲ್, ಶಾಲಾ-ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ದೂಡಾ ಆಯುಕ್ತ ಆದಪ್ಪ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್‌ ನಾಯ್ಕ, ಮೀನುಗಾರಿಕಾ ಉಪ ನಿರ್ದೇಶಕ ಡಾ| ಉಮೇಶ್‌, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ, ವಿಶೇಷ ಭೂ ಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ ಜಿ.ಎಂ. ರೇವಣಸಿದ್ದಪ್ಪ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಿ. ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ಉಪ ನಿದೇರ್ಶಕ ಶಿವಾನಂದ್‌ ಕಂಬಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next