Advertisement

ತಡರಾತ್ರಿ ಅಂಗಡಿಗಳು ಬಂದ್‌-ಪ್ರಯಾಣಿಕರ ಪರದಾಟ

04:57 PM May 30, 2019 | Naveen |

ದಾವಣಗೆರೆ: ದಿನದ 24ಗಂಟೆಯೂ ನಿರಂತರವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸೇವೆ ಸ್ಮಾರ್ಟ್‌ಸಿಟಿ ದಾವಣಗೆರೆಯಲ್ಲಿದೆ. ಆದರೆ, ರಾತ್ರಿ 12ರ ಸನಿಹಕ್ಕೆ ಗಡಿಯಾರದ ಮುಳ್ಳು ತಿರುಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ ಆಗುತ್ತವೆ. ಇದರಿಂದ ರಾತ್ರಿ ಸಂಚರಿಸುವ ಪ್ರಯಾಣಿಕರು, ಬಸ್‌ ಚಾಲಕರು ಅಗತ್ಯ ವಸ್ತುಗಳು ಅದರಲ್ಲೂ ಕುಡಿಯುವ ಶುದ್ಧ ನೀರು ಸಿಗದೇ ಶಪಿಸುವಂತಾಗಿದೆ.

Advertisement

ಇದು ನಿತ್ಯ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಭದ್ರತೆ ಹೆಸರಿನಲ್ಲಿ ಕಂಡುಬರುವ ಸಮಸ್ಯೆ. ರಾತ್ರಿ 12 ಆದರೆ ಸಾಕು, ಹೋಟೆಲ್ಗಳಲ್ಲಿ ತಿಂಡಿ, ತಿನಿಸು, ಅಂಗಡಿಗಳಲ್ಲಿ ನೀರಿನ ಬಾಟಲಿ ಯಾವುದೂ ಸಿಗುವುದಿಲ್ಲ. ನಿಲ್ದಾಣದಲ್ಲಿ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಪೊಲೀಸರು ಬಂದ್‌ ಮಾಡಿಸುವುದರಿಂದ ಜನಸಾಮಾನ್ಯರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿವೆ.

ಲೋಕಸಭಾ ಚುನಾವಣೆ ನಡೆಯುವುದಕ್ಕೂ ಮುನ್ನ ಹಲವು ತಿಂಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ, ಚುನಾವಣೆ ನೀತಿ ಸಂಹಿತೆ ಮುಗಿದರೂ ಮಧ್ಯರಾತ್ರಿ ಆಗುತ್ತಿದ್ದಂತೆ ಯಾರೂ ಕೂಡ ಅಂಗಡಿಗಳನ್ನು ತೆರೆಯುವಂತಿಲ್ಲ. ಇದರಿಂದಾಗಿ ಟೆಂಡರ್‌ ಮೂಲಕ ಮಳಿಗೆ ಪಡೆದ ಅಂಗಡಿ ಮಾಲೀಕರು ಹಾಕಿದ ಬಂಡವಾಳ ಹಿಂಪಡೆಯಲಾಗದೇ, ಬಾಡಿಗೆ ಕಟ್ಟಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿವಿಧ ಜಿಲ್ಲೆ, ಅಂತಾರಾಜ್ಯಗಳಿಗೆ ಸಂಚರಿಸುವ ಬಸ್‌ಗಳು ನಿತ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದು ಐದತ್ತು ನಿಮಿಷ ನಿಲ್ಲುತ್ತವೆ. ಆಗ ಬಸ್‌ ಚಾಲನೆ ಮಾಡಿ ಆಯಾಸಗೊಂಡ ಚಾಲಕರು ದಣಿವಾರಿಸಿಕೊಳ್ಳಲು, ಮಧ್ಯರಾತ್ರಿಯ ನಿದ್ರೆ ದೂರವಾಗಿಸಲು ಟೀ ಇಲ್ಲವೇ, ನೀರು ಕುಡಿಯಲು ಹೋದರೆ ಅಂಗಡಿಗಳೆಲ್ಲಾ ಬಂದ್‌ ಆಗಿರುತ್ತವೆ. ಇದರಿಂದಾಗಿ ಪ್ರಯಾಣಿಕರಿಗೆ, ಬಸ್‌ ಚಾಲಕರು, ನಿರ್ವಾಹಕರಿಗೆ ಸಮಸ್ಯೆಯಾಗಿದೆ.

ಭದ್ರತೆ ಕೊರತೆ: ನಿಲ್ದಾಣದಲ್ಲಿ ಹಗಲು ಹೊತ್ತಿನಲ್ಲಿ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ, ರಾತ್ರಿ 11ರ ನಂತರ ಯಾರೂ ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಜನರು ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಾರೆ. ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗುವ ಜೊತೆಗೆ ನಿಲ್ದಾಣದ ಅವ್ಯವಸ್ಥೆ ಆಗರವಾಗುತ್ತದೆ.

Advertisement

ನೀಡದ ಅವಕಾಶ: ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಮ್ಮ ಇಲಾಖೆಯಿಂದ 24 ಗಂಟೆಗಳ ಕಾಲ ಅಂಗಡಿಗಳನ್ನು ತೆರೆಯಲು ಯಾವುದೇ ನಿರ್ಬಂಧವಿಲ್ಲ ಎನ್ನುತ್ತಾರೆ. ಆದರೆ, ಪೊಲೀಸರು ಮಾತ್ರ ನಿತ್ಯ ಬಹುಬೇಗ ಅಂಗಡಿಗಳಿಗೆ ಬಾಗಿಲು ಹಾಕಿಸುತ್ತಾರೆ. ಈ ಬಗ್ಗೆ ಅಂಗಡಿ ಮಾಲೀಕರು ಎಸ್ಪಿಯವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದು, ಆ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು ಅಂಗಡಿ ತೆರೆಯಲು ಯಾವುದೇ ನಿರ್ಬಂಧವಿಲ್ಲ ಎಂಬ ಮಾತನ್ನು ಹೇಳಿದ್ದರೆನ್ನಲಾಗಿದೆ. ಇದೀಗ ಕ್ಯಾಮೆರಾ ಹಾಕಿಸಿದರೂ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ ಎನ್ನುತ್ತಾರೆ ಕೆಲವು ಅಂಗಡಿ ಮಾಲೀಕರು.

ಅನುಮತಿ ಕೋರಿದ್ದೇವೆ
ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ (ಕರ್ನಾಟಕ ಪಬ್ಲಿಕ್‌ ಸೇಫ್ಟಿ ಆ್ಯಕ್ಟ್‌ನಡಿ) ಎಲ್ಲಾ ಅಂಗಡಿಯವರು ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿರಬೇಕು ಎಂಬ ನಿರ್ದೇಶನವಿದೆ. ಜೊತೆಗೆ ರಾಜ್ಯದ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಮೇ 30ರ ನಂತರ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ನಿಲ್ದಾಣದಲ್ಲಿ ಈಗ ಸಿಸಿ ಕ್ಯಾಮೆರಾ ಅಳವಡಿಸಿಕೊಂಡ ಅಂಗಡಿ ಮಾಲೀಕರ ಪರವಾಗಿ ದಿನದ 24 ಗಂಟೆಯೂ ನಿರಂತರ ಅಂಗಡಿ ತೆರೆದು ಕಾರ್ಯ ನಿರ್ವಹಿಸಲು ಅನುಮತಿ ನೀಡುವಂತೆ ಎಸ್ಪಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅಂಗಡಿ ಮಾಲೀಕರಿಗೂ ಮತ್ತೂಮ್ಮೆ ಮನವಿ ಮಾಡುವಂತೆ ತಿಳಿಸಿದ್ದೇವೆ. ಅನುಮತಿ ನೀಡುವ ಭರವಸೆ ಇದೆ. •ಸಿದ್ದೇಶ್‌ ಹೆಬ್ಟಾಳ್‌,
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ.

ಚರ್ಚಿಸಿ ಕ್ರಮ
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಸಂಪೂರ್ಣವಾಗಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಜೊತೆಗೆ ನಿಲ್ದಾಣದಲ್ಲಿ ರಾತ್ರಿ ವೇಳೆ ಸೂಕ್ತ ಭದ್ರತೆ ಇಲ್ಲ. ಹೊರಗಿನಿಂದ ಬರುವ ಕೆಲ ಯುವಕರು, ಜನರು ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ತಿಂಡಿ ಅಂಗಡಿಗಳ ಮುಂದೆ ಜಮಾಯಿಸಿ ಕೆಲವು ಬಾರಿ ಜಗಳ ಮಾಡುತ್ತಿರುತ್ತಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಹಾಗಾಗಿ ತಡರಾತ್ರಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
ಆರ್‌. ಚೇತನ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next