Advertisement

ಪುಟ್‌ಪಾತ್‌ ವ್ಯಾಪಾರಿಗಳಿಗೆ ಸೌಲಭ್ಯ ಕಲಿಸಿ

12:18 PM May 16, 2020 | Naveen |

ದಾವಣಗೆರೆ: ನಗರದ ಫುಟ್‌ಪಾತ್‌ಗಳಲ್ಲಿ ವ್ಯಾಪಾರಕ್ಕೆ ಅನುಮತಿ, ಧನಸಹಾಯ, ಆಹಾರದ ಕಿಟ್‌ ವಿತರಣೆ ಒಳಗೊಂಡಂತೆ ವಿವಿಧ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ದಾವಣಗೆರೆ ಪುಟ್‌ ಪಾತ್‌ ವ್ಯಾಪಾರಿಗಳ ಒಕ್ಕೂಟದಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ದಾವಣಗೆರೆಯ ವಿವಿಧೆಡೆ ಪುಟ್‌ ಪಾತ್‌ ವ್ಯಾಪಾರಿಗಳು 59 ವಿವಿಧ ತರಹದ ವ್ಯಾಪಾರ-ವಹಿವಾಟು ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಕೋವಿಡ್ , ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವ್ಯಾಪಾರ ಮಾಡುವಂತಿಲ್ಲ. ಪ್ರತಿ ದಿನ ಬರುವಂತಹ ಆದಾಯದಲ್ಲೇ ಜೀವನ ನಡೆಸಬೇಕಾದವರು ದುಡಿಮೆ ಇಲ್ಲದೆ ಬಹಳ ಕಷ್ಟದಲ್ಲಿ ಇದ್ದಾರೆ. ಲಾಕ್‌ಡೌನ್‌ ನಡುವೆಯೂ ಇತರೆ ಆರ್ಥಿಕ ಚಟುವಟಿಕೆಗೆ ನೀಡಿರುವ ಅನುಮತಿಯಂತೆ ಪುಟ್‌ಪಾತ್‌ ವ್ಯಾಪಾರಕ್ಕೆ ಅನುಮತಿ ನೀಡುವ ಮೂಲಕ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒಕ್ಕೂಟದ ಮುಖಂಡರು, ವ್ಯಾಪಾರಿಗಳು ಒತ್ತಾಯಿಸಿದರು.

ಹಲವಾರು ವರ್ಷಗಳಿಂದ ಪುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿರುವರಿಗೆ ಶಾಶ್ವತ ಜಾಗ ಎಂಬುದೇ ಇಲ್ಲ. ನಗರಪಾಲಿಕೆಯಿಂದ ವ್ಯಾಪಾರಿಗಳಿಗೆ ಶಾಶ್ವತ ಜಾಗದ ವ್ಯವಸ್ಥೆ ಮಾಡಿಕೊಡಬೇಕು. ನಗರಪಾಲಿಕೆಯ ಆರೋಗ್ಯ ಇಲಾಖೆಯಿಂದ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಕೆಲವಾರು ವ್ಯಾಪಾರಿಗಳ ಹೆಸರು ಬಿಟ್ಟು ಹೋಗಿದೆ. ಪಟ್ಟಿಯಲ್ಲಿ ಇದ್ದವರು ಮತ್ತು ಇಲ್ಲದವರಿಗೂ ಆಹಾರದ ಕಿಟ್‌, ಧನಸಹಾಯ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿನ ಪುಟ್‌ಪಾತ್‌ ವ್ಯಾಪಾರಿಗಳನ್ನು ಸಮಿತಿಯ ಪ್ರತಿನಿಧಿಗಳಾಗಿ ನೇಮಕ ಮಾಡಲಾಗಿದೆ. ಆದರೆ, ಸಮಿತಿಯ ಯಾವುದೇ ಸಭೆ ನಡೆಸಿಲ್ಲ. ಕೋವಿಡ್  ನಂತಹ ಸೋಂಕಿನ ಸಂದರ್ಭದಲ್ಲಾದರೂ ಸಭೆ ನಡೆಸದೆ ನಿರ್ಲಕ್ಷ್ಯ ಮಾಡುತ್ತಿರುವುದು ತೀರಾ ಅನ್ಯಾಯ. ಈಗಲಾದರೂ ಸಭೆ ನಡೆಸಿ, ಪುಟ್‌ಪಾತ್‌ ವ್ಯಾಪಾರಿಗಳಿಗೆ ದೊರೆಯಬೇಕಾದ ಎಲ್ಲಾ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಎಚ್‌.ಕೆ. ರಾಮಚಂದ್ರಪ್ಪ, ಆವರಗೆರೆ ವಾಸು, ಇಸ್ಮಾಯಿಲ್‌, ಬಿ. ಸಿದ್ದಣ್ಣ, ಎಸ್‌.ಕೆ. ರಹಮತುಲ್ಲಾ, ಎನ್‌.ಟಿ. ಬಸವರಾಜ್‌, ಬಿ. ದುಗ್ಗಪ್ಪ, ಎನ್‌.ಎಚ್‌.ರಾಮಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next