Advertisement

ಯೋಗಮಯಿಗಳಾಗಿ ಆರೋಗ್ಯವಂತರಾಗಿ

12:41 PM Jun 22, 2019 | Naveen |

ದಾವಣಗೆರೆ: ಮೋಡ ಮುಸುಕಿದ ವಾತಾರಣ… ಮಳೆಯ ಸಿಂಚನದ ಮುನ್ಸೂಚನೆ… ಬೀಸುತ್ತಿದ್ದ ತಂಗಾಳಿ… ಆಹ್ಲಾದಕರ ವಾತಾವರಣ…, ಮೈ-ಮನ ರೋಮಾಂಚನ ಉಂಟು ಮಾಡುವಂತೆ ಏಕಮುಖೇನ ಕೇಳಿ ಬಂದ ಓಂಕಾರ…ಏಕ ಕಾಲಕ್ಕೆ ಸಾವಿರಾರು ಯೋಗಬಂಧುಗಳಿಂದ ವಿವಿಧ ಆಸನಗಳ ಯೋಗ ಪ್ರದರ್ಶನ… ಜಗತ್ತಿಗೆ ಯೋಗದ ಸಂದೇಶ ಸಾರುವ ಸ್ತುತ್ಯಾರ್ಹ ಪ್ರಯತ್ನ…

Advertisement

ಇಂತಹ ಯೋಗಮಯ ವಾತಾವರಣ ಕಂಡು ಬಂದಿದ್ದು ಶುಕ್ರವಾರ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆಯುಷ್‌, ಪೊಲೀಸ್‌, ಸಾರ್ವಜನಿಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಜಿಲ್ಲಾ ವರದಿಗಾರರ ಕೂಟ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಸಮಿತಿ ಮತ್ತು ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಎಲ್ಲರಲ್ಲೂ ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಮಹತ್ತರ ಮತ್ತು ಮಹತ್ವದ ಯೋಗ ದಿನಕ್ಕೆ ಮುನ್ನುಡಿ ಬರೆದಿದ್ದು 89ರ ಹರೆಯದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳು. ಸ್ವತಃ ಯೋಗಪಟುವಾಗಿರುವ ಪೇಜಾವರ ಶ್ರೀಗಳು ಯೋಗದ ಕೆಲ ಆಸನ ಪ್ರದರ್ಶನ ಮಾಡುವರು ಎಂಬ ನಿರೀಕ್ಷೆ ಇತ್ತು. ಆದರೆ. ಕೆಲ ಕಾರಣದಿಂದ ಪ್ರದರ್ಶನ ನೀಡದೇ ಇದ್ದರೂ ಯೋಗದ ಮಹತ್ವದ ಬಗ್ಗೆ ಸಂದೇಶ ನೀಡಿದರು. ಎಲ್ಲರೂ ಯೋಗಮಯಿಗಳಾಗಿ ಆರೋಗ್ಯವಂತ ಜೀವನ ನಡೆಸುವಂತೆ ಮನದುಂಬಿ ಆಶೀರ್ವದಿಸಿದರು.

ಕನ್ನಡ ಮಾಧ್ಯಮ ಖ್ಯಾತಿಯ ಬೆಂಗಳೂರಿನ ವೈದ್ಯಶ್ರೀ ಚನ್ನಬಸವಣ್ಣ ಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

Advertisement

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಯೋಗಬಂಧುಗಳು ಸಾಮೂಹಿಕವಾಗಿ ಯೋಗ ಪ್ರದರ್ಶನದ ಮೂಲಕ ಗಮನ ಸೆಳೆದರು.

ಮಲಬದ್ಧತೆ ಒಳಗೊಂಡಂತೆ ಅನೇಕ ಆರೋಗ್ಯ ಸಮಸ್ಯೆಗೆ ನಿವಾರಣೆಗೆ ಮೂಲವಾಗಿರುವ ತಾಡಾಸನ, ಥೈರಾಯ್ಡ ಸಮಸ್ಯೆ ದೂರ ಮಾಡಲು ಸಹಾಯಕಾರಿಯಾಗುವ ಅರ್ಧ ಚಕ್ರಾಸನ, ಶ್ವಾಸಕೋಶದ ಕ್ರಿಯಾಶೀಲತೆ ಹೆಚ್ಚಿಸುವ ಅರ್ಧ ಉಚ್ಛಾಸನ, ಮಹಿಳೆಯರಲ್ಲಿ ಕಂಡು ಬರುವ ಗರ್ಭಕೋಶ ಸಮಸ್ಯೆ ನಿವಾರಣೆ ಮಾಡುವ ಬದ್ಧ ಕೋನಾಸನ, ಜೀರ್ಣಾಂಗ ಇತರೆ ಒಳ ಅಂಗಗಳ ಕಾರ್ಯಕ್ಷಮತೆ ಹೆಚ್ಚಿಸುವ ವಕ್ರಾಸನ, ಬೆನ್ನುನೋವುಳ್ಳವರಿಗೆ ರಾಮಬಾಣದಂತಿರುವ ಸೇತುಬಂಧಾಸನ, ನರವ್ಯೂಹದ ಚಲನಶೀಲತೆಗೆ ಕಾರಣವಾಗುವ ಮಕರಾಸನ, ಭುಜಂಗಾಸನ, ಶಲಭಾಸನ, ಉತ್ಥಾನಾಸನ, ಸಮಾನ, ಅಪಾನ, ಪ್ರಾಣ ಮುದ್ರೆ, ಪ್ರಾಣಾಯಾಮ…ದ ಪ್ರಾತ್ಯಕ್ಷಿಕೆ ನಡೆಯಿತು.

ಪ್ರಾತ್ಯಕ್ಷಿಕೆ ಕೊನೆಯಲ್ಲಿ ಸುಗಮ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ| ಸಿ. ಅಶ್ವತ್‌ರವರ , ನೂರು ದೇವರುಗಳ ನೂಕಾಚೆ ದೂರ…. ಎಂಬ ಹಾಡಿಗೆ ಎಲ್ಲರೂ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌, ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಮಾಜಿ ಉಪಾಧ್ಯಕ್ಷೆ ಗೀತಾ ಗಂಗಾಧರನಾಯ್ಕ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ. ಉಮಾಪತಿ, ಪ್ರಧಾನ ಕಾರ್ಯದರ್ಶಿ ಎನ್‌. ವಾಸುದೇವರಾಯ್ಕರ್‌, ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಚ್.ಬಸವರಾಜೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಹಾಗೂ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ ಇತರರು ವೈದ್ಯಶ್ರೀ ಚನ್ನಬಸವಣ್ಣನವರಿಗೆ ಸಾಥ್‌ ನೀಡುವ ಮೂಲಕ ಯೋಗ ದಿನದ ಸಾರ್ಥಕತೆ ಹೆಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next