Advertisement

ಸ್ವಸ್ಥ ಸಮಾಜ ನಿರ್ಮಿಸಲು ಮಾರ್ಗದರ್ಶನ ಮಾಡಿ

12:20 PM Sep 23, 2019 | Naveen |

ದಾವಣಗೆರೆ: ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹಿರಿಯ ನಾಗರಿಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌. ಬಡಿಗೇರ್‌ ಆಶಿಸಿದ್ದಾರೆ.

Advertisement

ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್‌, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತಿರುವ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಬಾಪೂಜಿ ಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರು ಸ್ವಸ್ಥ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡಬೇಕು ಎಂದರು.

ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅನೇಕರು ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತೋಷದ ವಿಚಾರ. ತಾವು ನೋಡಿದಂತೆ ಅನೇಕ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಯುವಕರೇ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದರು.

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಯಾವುದೂ ರೀತಿಯಲ್ಲಿ ಹಾನಿ ಆಗುವುದೇ ಇಲ್ಲ. ಬದಲಿಗೆ ಆರೋಗ್ಯ ವೃದ್ಧಿಸುತ್ತದೆ. ಮನಸ್ಸು ಚಿಂತೆಯಿಂದ ದೂರವಾಗುತ್ತದೆ. ವಯಸ್ಸಾಗುವುದು ದೇಹಕ್ಕೆ ಮಾತ್ರ, ಮನಸ್ಸಿಗಲ್ಲ. ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಆನಂದ ದೊರೆಯುತ್ತದೆ. ಪ್ರತಿ ಬಾರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಕೋರಿದರು. ನಿವೃತ್ತ ಪ್ರಾಚಾರ್ಯ ಪ್ರೊ| ಬಿ.ಜಿ. ಚಂದ್ರಶೇಖರಪ್ಪ ಮಾತನಾಡಿ, 60ಕ್ಕೆ ಅರಳು ಮರಳು ಎಂಬ ಮಾತಿದೆ. ನಿಜವಾಗಿಯೂ 60ಕ್ಕೆ ಅರಳು ಮರಳು ಅಲ್ಲ. 60 ಎಂದರೆ ಮರಳಿ ಅರಳುವುದು. ಇಂದಿನ ನಗರೀಕರಣ, ಜಾಗತೀಕರಣ, ಅನೇಕ ಕರಣಗಳ ನಡುವೆ ಮಾನವೀಯ ಅಂತಃಕರಣವೇ ಮಾಯವಾಗುತ್ತಿದೆ ಎಂದು ವಿಷಾದಿಸಿದರು.

ವಸ್ತುವಿಗೆ ಇರುವ ಮತ್ತು ನೀಡುವಂತಹ ಬೆಲೆಯನ್ನು ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ನೀಡುತ್ತಿಲ್ಲ. ಟಿವಿ ನಮ್ಮ ತಾಯಿ ತಂದೆ, ಮೊಬೈಲ್‌ ನಮ್ಮ ಬಂಧು-ಬಳಗ ಎನ್ನುವಂತಾಗಿದೆ. ಹಾಗಾಗಿ ಸಾಮಾಜಿಕ ಸಂಬಂಧಗಳು ಕಾಣೆಯಾಗುತ್ತಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ನಾಯಿಗಳನ್ನು ಸಾಕುತ್ತಾರೆ. ದಿನಕ್ಕೆ ನಾಲ್ಕಾರು ಬಾರಿ ವಾಕಿಂಗ್‌ ಕರೆದುಕೊಂಡು ಹೋಗುತ್ತಾರೆ. ಅದೇ ತಂದೆ-ತಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಜೀವನ ನಡೆಸಬೇಕಾಗುತ್ತಿದೆ ಎಂದು ತಿಳಿಸಿದರು.

Advertisement

40 ವರ್ಷಗಳ ಹಿಂದೆಯೇ ಸಿದ್ದಯ್ಯ ಪುರಾಣಿಕರು ಹೇಳಿದಂತೆ ಈಗ ಭ್ರಷ್ಟಾಚಾರ ಎನ್ನುವುದು ಶಿಷ್ಟಾಚಾರ ಎನ್ನುವಂತಾಗಿದೆ. ಅನಾಚಾರ, ಭ್ರಷ್ಟಾಚಾರಕ್ಕೆ ವಿದ್ಯಾವಂತರೇ ಅತಿ ಹೆಚ್ಚು ಕಾರಣರು. ಅವರೇ ಹೆಚ್ಚಾಗಿ ಸಮಾಜ ಕಂಟಕರು ಎಂಬುದೇ ಆತಂಕದ ವಿಚಾರ. ಭ್ರಷ್ಟಾಚಾರದ ಪರಿಣಾಮ ಬಚ್ಚಿಟ್ಟಿದ್ದು ಐಟಿ, ಇಡಿಯವರಿಗೆ… ಎನ್ನುವ ವಾತಾವರಣ ನಿರ್ಮಾಣವಾಗಿದೆ. ಹಿರಿಯರು ಯುವ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಹಿರಿಯರು ನಮಗೆ ವಯಸ್ಸಾಗಿದೆ. ದೇಹ ಕೃಶವಾಗಿದೆ ಎಂಬ ಚಿಂತೆ ಬದಿಗಿರಿಸಿ ಸದಾ ನೆಮ್ಮದಿಯಿಂದ ಇರುವ ಪ್ರಯತ್ನ ಮಾಡಬೇಕು. ಇರುವುದರಲ್ಲೇ ಸುಖ, ತೃಪ್ತಿ ಕಾಣಬೇಕು. ಚಿಂತೆಯ ದೂರ ಮಾಡಿ ಚಿಂತನೆ ಮಾಡಬೇಕು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮನಸ್ಸು ಅರಳಿಸುವ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾವು ನಿಶ್ಚಿತ. ಆ ನಡುವೆ ಒಳ್ಳೆಯ ಜೀವನ ನಡೆಸುವಂತಾಗಬೇಕು ಎಂದು ಆಶಿಸಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್‌. ಶಶಿಧರ್‌ ಪ್ರಾಸ್ತಾವಿಕ ಮಾತುಗಳಾಡಿದರು. ಜಿಲ್ಲಾ ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ಎಸ್‌. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌, ಹಿರಿಯ ನಾಗರಿಕರ ಸಹಾಯವಾಣಿ ಕಾರ್ಯದರ್ಶಿ ಕೆ.ಪಿ. ಮರಿಯಾಚಾರ್‌ ಇದ್ದರು. ಕೆ. ಹಾಲಪ್ಪ ಪ್ರಾರ್ಥಿಸಿದರು. ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next