Advertisement

ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯ

10:06 AM Jun 06, 2019 | Team Udayavani |

ದಾವಣಗೆರೆ: ವಾಯುಮಾಲಿನ್ಯದ ಪ್ರಮಾಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ವಿಶ್ವ ಪರಿಸರ ದಿನದ ಮೂಲ ಮತ್ತು ಮುಖ್ಯ ಉದ್ದೇಶ ಎಂದು ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ತಿಳಿಸಿದ್ದಾರೆ.

Advertisement

ಬುಧವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆ, ವಿಜ್ಞಾನ ಪರಿಷತ್‌, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಮಾತ್ರವಲ್ಲ, ಆದ್ಯ ಕರ್ತವ್ಯವೂ ಹೌದು ಎಂದರು.

ಪ್ರತಿ ನಿತ್ಯ ವಾಹನಗಳ ಬಳಕೆಯಿಂದಾಗಿ ಶೇ. 40ರಷ್ಟು ವಾಯುಮಾಲಿನ್ಯ ಉಂಟಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ವಾಹನಗಳ ಬಳಕೆ ಮಾಡುವ ಮೂಲಕ ವಾಯುಮಾಲಿನ್ಯ ತಡೆಗಟ್ಟುವಂತಾಗಬೇಕು. ಇಲ್ಲದೇ ಹೋದಲ್ಲಿ ಮುಂಬರುವ ಗಂಭೀರ ಪರಿಸ್ಥಿತಿ ಎದುರಿಸಬೇಕಾದೀತು ಎಂದು ತಿಳಿಸಿದರು.

ರಸ್ತೆಯಲ್ಲಿನ ಧೂಳು ಆರೋಗ್ಯದ ಮೇಲೆ ಸಾಕಷ್ಟು ದುಷ್ಪ‌ರಿಣಾಮ ಉಂಟು ಮಾಡುತ್ತದೆ. ರಸ್ತೆಯ ಅಕ್ಕಪಕ್ಕದ ಕಸ ಮತ್ತು ಮನೆಯಲ್ಲಿನ ತ್ಯಾಜ್ಯಗಳನ್ನು ಕ್ರೋಡೀಕರಿಸಿಕೊಂಡು ಹೊರಗಡೆ ಸಾಗಿಸಬೇಕು. ಚರಂಡಿ ಸ್ವಚ್ಛಗೊಳಿಸಬೇಕು. ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಖಾನೆಗಳಿಂದ ಬರುವ ಹೊಗೆಯನ್ನು ಶುದ್ಧೀಕರಿಸಿ, ಹೊರಗಡೆ ಬಿಡುವಂತೆ ಆಗಬೇಕು ಎಂದು ತಿಳಿಸಿದರು.

ಜೆ.ಎಚ್. ಪಟೇಲ್ ಕಾಲೇಜು ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಮಾತನಾಡಿ, ಹಿಂದಿನ ಕಾಲದಿಂದ ಉಡುಗೊರೆಯಾಗಿ ಬಂದಿರುವಂತಹ ಉತ್ತಮ ಪರಿಸರವನ್ನು ಉಳಿಸಿಕೊಂಡು ಹೋಗುವುದಕ್ಕೆ ಆಗುತ್ತಿಲ್ಲ. ಪರಿಸರ ಉಳಿವಿನ ಬಗ್ಗೆ ಹಿರಿಯರು ಚಿಂತನೆ ಮಾಡಬೇಕು. ನಮ್ಮ ಮುಂದಿನ ಯುವ ಪೀಳಿಗೆಗೆ ಪರಿಸರವೇ ಇಲ್ಲದಂತೆ ನಾಶ ಮಾಡಲಾಗುತ್ತಿದೆ. ಮಕ್ಕಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಆಶಿಸಿದರು.

Advertisement

ವಿಜ್ಞಾನ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ|ಬಿ.ಇ. ರಂಗಸ್ವಾಮಿ ಮಾತನಾಡಿ, 1972ರಲ್ಲಿ ಯೂರೋಪ್‌ನಲ್ಲಿ ಪರಿಸರ ಕುರಿತು 143 ದೇಶಗಳ ಸಭೆಯಲ್ಲಿ ಪರಿಸರ ದಿನಾಚರಣೆಯ ತೀರ್ಮಾನ ಕೈಗೊಳ್ಳಲಾಯಿತು. 1974ರ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಆಚರಣೆೆ ಪ್ರಾರಂಭವಾಗಿದೆ. 1987ರಿಂದ ಪ್ರತಿ ವಿಶ್ವ ಪರಿಸರ ದಿನಾಚರಣೆ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ವರ್ಷ ವಿವಿಧ ದೇಶಗಳಲ್ಲಿ 5 ಲಕ್ಷ ಮಕ್ಕಳು ವಾಯುಮಾಲಿನ್ಯದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಶೇ.15ರಷ್ಟು ಒಳಾಂಗಣ, ಶೇ.35ರಷ್ಟು ಹೊರಾಂಗಣದ ವಾಯುಮಾಲಿನ್ಯಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ತಿಳಿಸಿದರು.

ಪರಿಸರ ಪ್ರೇಮಿ ಕೆ.ಟಿ. ಗೋಪಾಲಗೌಡರು ಮಾತನಾಡಿ, ವಾಹನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶುದ್ಧಗಾಳಿ ಪಡೆಯುವುದಕ್ಕಾಗಿ ಹೆಚ್ಚಾಗಿ ಗಿಡ-ಮರಗಳನ್ನ ಬೆಳೆಸಬೇಕು. ಮರಗಳನ್ನು ಕಡಿಯುವ ಬದಲು ಬೆಳೆಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಪತ್ರಕರ್ತ ಎಂ.ಬಿ. ನವೀನ್‌ ಮಾತನಾಡಿ, ಪರಿಸರದ ಅಸ್ತಿತ್ವವಿಲ್ಲದೆ ಯಾರ ಅಸ್ತಿತ್ವವೂ ಇಲ್ಲ. ಪರಿಸರ ದಿನಾಚರಣೆ ಎನ್ನುವುದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯದ ಕಾಯಕವಾದಾಗ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬೆಳಕೆರೆ, ಅಮೃತ ಯುವಕ ಸಂಘದ ಅಧ್ಯಕ್ಷ ಆರ್‌.ಬಿ.ಹನುಮಂತಪ್ಪ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್‌, ಡಾ| ಪಿ.ಎಸ್‌.ಅಶ್ವಿ‌ನ್‌, ನಾಗರಾಜ್‌ ಭಾನುವಳ್ಳಿ, ವಿಜ್ಞಾನ ಪರಿಷತ್‌ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಇತರರು ಇದ್ದರು. 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next