ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎನ್‌ಡಿಎ ಮೈತ್ರಿಕೂಟ ಗೆದ್ದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಫ್ಯಾಸಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಕಾರ್ಯದರ್ಶಿ ಎನ್. ಶಿವಣ್ಣ ಹೇಳಿದರು.
ಬುಧವಾರ ಜಯದೇವ ವೃತ್ತದ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ನಡೆದ ಮೇ ದಿನಾಚರಣೆ ಹಾಗೂ ಹುತಾತ್ಮರ 49ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಮೋದಿ ಸರ್ವಾಧಿಕಾರದ ಆಡಳಿತ ನಡೆಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬಂದಲ್ಲಿ ಖಂಡಿತವಾಗಿಯೂ ಜಾತಿ, ಕೋಮುವಾದಿ, ಮನುವಾದಿ ಫ್ಯಾಸಿಸ್ಟ್ ಸರ್ಕಾರದ ಆಡಳಿತ ನಡೆಯಲಿದೆ ಎಂದರು.
ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಿದೇಶಿ ಬ್ಯಾಂಕ್‌ಗಳಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದು ಎಲ್ಲರ ಖಾತೆಗೆ 15 ಲಕ್ಷ ಜಮೆ ಮಾಡುವ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ, ಡಾ| ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಭರವಸೆ ನೀಡಿದ್ದಂತಹ ಮೋದಿ ಯಾವುದನ್ನೂ ಈಡೇರಿಸಿಲ್ಲ. ಮೋದಿ ಆಡಳಿತದಲ್ಲಿ ನಿರ್ಮಾಣವಾಗಿದ್ದಂತಹ ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷದಲ್ಲಿ ಬೇರೆ ಯಾವ ಸರ್ಕಾರದ ಆಡಳಿತದಲ್ಲೂ ನಿರ್ಮಾಣವಾಗಿರಲಿಲ್ಲ ಎಂದು ದೂರಿದರು.
ಅಚ್ಛೆ ದಿನ್ ತರುವುದಾಗಿ ಮೋದಿ ಹೇಳಿದ್ದರು. ಅಚ್ಛೆ ದಿನ್ ಬಂದಿದ್ದು ಬಂಡವಾಳಶಾಹಿಗಳಿಗೆ ಮಾತ್ರ. ಜನ ಸಾಮಾನ್ಯರಿಗೆ ಬರಲೇ ಇಲ್ಲ. ಎಐಟಿಯುಸಿ ನೇತೃತ್ವದ ಹೋರಾಟದ ಫಲವಾಗಿ ಜಾರಿಗೆ ಬಂದಿರುವ 44 ಕಾರ್ಮಿಕ ಕಾಯ್ದೆಗಳನ್ನು ಮೋದಿ ಸರ್ಕಾರ 4 ಕೋಡ್‌ಗಳನ್ನಾಗಿ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ. ಸರ್ಕಾರದ ಅನುಮತಿ ಇಲ್ಲದೆ 300ಕ್ಕೂ ಹೆಚ್ಚು ಕಾರ್ಮಿಕರು ಇರುವಂತಹ ಕಾರ್ಖಾನೆ ಪ್ರಾರಂಭಿಸಬಹುದು, ಮಾತ್ರವಲ್ಲ ಯಾವಾಗ ಬೇಕಾದರೂ ಮುಚ್ಚಬಹುದು. ಮೋದಿ ಸರ್ಕಾರ ಬಂಡವಾಳಶಾಹಿ ಪರ ಕಾರ್ಮಿಕ ಕಾಯ್ದೆ ಜಾರಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ, ಆಶಾ, ಬಿಸಿಯೂಟ… ಮುಂತಾದ ಯೋಜನೆಗಳಲ್ಲಿ ದುಡಿಯುವಂತಹ 1 ಕೋಟಿಗೂ ಅಧಿಕ ಮಹಿಳೆಯರಿಗೆ ಯಾವುದೇ ಭದ್ರತೆಯೇ ಇಲ್ಲ. ಅವರನ್ನ ಕಾರ್ಮಿಕರು ಎಂದು ಪರಿಗಣಿಸದೇ ಇರುವುದು ಮೋದಿ ಮಹಿಳಾ ವಿರೋಧಿ ನೀತಿಯ ಪ್ರತೀಕ. ಸ್ಟಾರ್ಟ್ ಆಫ್ ಇಂಡಿಯಾ ಯೋಜನೆ ಮೂಲಕ ವಿದೇಶಿ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಎಚ್ಎಎಲ್ ಮುಂತಾದ ಸಾರ್ವಜನಿಕ ಉದ್ದಿಮೆ, ಬ್ಯಾಂಕ್ ಮುಚ್ಚಿಸುವ ಕೆಲಸ ಮಾಡಿದೆ. ಯಾವುದೇ ಸರ್ಕಾರ ಕಾರ್ಮಿಕ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ದೂರಿದರು.
1886ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ದಿನಕ್ಕೆ 8 ಗಂಟೆ ಕೆಲಸ ಎಂಬ ಬೇಡಿಕೆ ಮುಂದಿಟ್ಟುಕೊಂಡು ಮಹಿಳೆಯರು ಒಳಗೊಂಡಂತೆ ಸಾವಿರಾರು ಕಾರ್ಮಿಕರು ನಡೆಸಿದ ಹೋರಾಟ, ತ್ಯಾಗದ ಫಲವಾಗಿ ಮೇ. 1 ರಂದು ವಿಶ್ವದ ಎಲ್ಲೆಡೆ ಮೇ ದಿನಾಚರಣೆ ಎಂಬ ಹಬ್ಬ ಆಚರಿಸಲಾಗುತ್ತಿದೆ. ದುಡಿಯುವ ವರ್ಗ, ಮಹಿಳೆಯರು, ಯುವ ಜನಾಂಗದ ಪರವಾದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಪ್ರತಿಜ್ಞೆಗೈಯುವ ಮೂಲಕ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ವರ್ಗ, ಶೋಷಣೆ ರಹಿತ ಸಮ ಸಮಾಜ ನಿರ್ಮಾಣದ ಮೂಲಕ ಮಹಾತ್ಮಗಾಂಧಿ, ಭಗತ್‌ಸಿಂಗ್‌ರವರ ಕನಸು ನನಸಾಗಿಸುವ ಹೋರಾಟಕ್ಕೆ ದುಡಿಯುವ ವರ್ಗ ಸಜ್ಜಾಗಬೇಕು ಎಂದು ತಿಳಿಸಿದರು.
ಎಐಟಿಯುಸಿಯ ಆನಂದರಾಜ್, ಆವರಗೆರೆ ಚಂದ್ರು, ಟಿ.ಎಸ್. ನಾಗರಾಜ್, ಎಂ.ಬಿ. ಶಾರದಮ್ಮ, ಗುಡಿಹಳ್ಳಿ ಹಾಲೇಶ್, ಮಹಮ್ಮದ್ ರಫಿಕ್, ಟಿ.ಎಚ್. ನಾಗರಾಜ್, ಮಹಮ್ಮದ್ ಬಾಷಾ, ಎಐಬಿಇಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಇತರರು ಇದ್ದರು.
ಐರಣಿ ಚಂದ್ರು, ಷಣ್ಮುಖಸ್ವಾಮಿ, ಬಾನಪ್ಪ ಸಂಗಡಿಗರು ಜಾಗೃತಿ ಗೀತೆ ಹಾಡಿದರು. ಆವರಗೆರೆ ವಾಸು ಸ್ವಾಗತಿಸಿದರು. ಡಾಂಗೇ ಪಾರ್ಕ್‌ನಿಂದ ಮೆರವಣಿಗೆ ನಡೆಯಿತು.