Advertisement

ಸಬೂಬು ಹೇಳದೆ ಕೆಲಸ ಮುಗಿಸಲು ಸಚಿವರ ತಾಕೀತು

09:24 AM May 27, 2020 | sudhir |

ದಾವಣಗೆರೆ: ಯಾವುದೇ ಸಬೂಬು ಹೇಳದೇ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ
ಮುಗಿಸಿ, ಜನತೆಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್‌ ಸೂಚಿಸಿದ್ದಾರೆ.

Advertisement

ಮಂಗಳವಾರ ಮಹಾನಗರಪಾಲಿಕೆ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ನಗರದ ಎಲ್ಲ ಕಾಮಗಾರಿಗಳನ್ನು ಆರಂಭಿಸಿ ಆದಷ್ಟು ಶೀಘ್ರದಲ್ಲಿ ನಿಗದಿತ ಅವಧಿಯಲ್ಲಿ  ಪೂರೈಸಬೇಕು. ಕಂಟೇನ್ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದೆಡೆ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಜಲಸಿರಿ ಯೋಜನೆಯನ್ನುಆದಷ್ಟು ಶೀಘ್ರವಾಗಿ ಮುಗಿಸಿ ನಗರದ ಜನರಿಗೆ ನೀರು ದಿನವಿಡೀ ನೀರು ಸರಬರಾಜಿಗೆ ಕ್ರಮ
ವಹಿಸಬೇಕು ಎಂದಾಗ, ಕೆಯುಐಡಿಎಫ್‌ಸಿ ಕಾರ್ಯಪಾಲಕ ಅಭಿಯಂತರರು, ಈಗಾಗಲೇ ಶೇ. 50 ರಷ್ಟು ಕೆಲಸ ಮುಗಿದಿದೆ.
18 ಓವರ್‌ಹೆಡ್‌ ಟ್ಯಾಂಕ್‌ಗಳ ಪೈಕಿ 14 ಓಎಚ್‌ಟಿ ಕಾಮಗಾರಿ ಪ್ರಗತಿಯಲ್ಲಿವೆ. ಒಟ್ಟು 50 ಝೋನ್‌ಗಳನ್ನಾಗಿ ಮಾಡಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಓಎಚ್‌ಟಿಗೆ ಚಿಕ್ಕನಹಳ್ಳಿ ಸೇರಿ ಎರಡು ಕಡೆ ಜಾಗದ ಸಮಸ್ಯೆ ಎದುರಾಗಿದೆ ಎಂದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಶಿವಶಂಕರ್‌, ಚಿಕ್ಕನಹಳ್ಳಿಯಲ್ಲಿ ಸರ್ಕಾರಿ ಜಮೀನು ಸಿಗುತ್ತಿಲ್ಲ. ಆದ್ದರಿಂದ ಓಎಚ್‌ಟಿ ನಿರ್ಮಾಣ ವಿಳಂಬವಾಗಿದೆ ಎಂದು ಹೇಳಿದರು.

ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, 2022ರ ಜನವರಿಗೆ ಜಲಸಿರಿ ಯೋಜನೆ
ಪೂರ್ಣಗೊಳಿಸುವ ಗುರಿ ನೀಡಲಾಗಿದೆ. 2 ಝೋನ್‌ಗಳಲ್ಲಿ ಕಾರ್ಯ ಪೂರ್ಣಗೊಳಿಸಿ ಡೆಮೋ ನೀಡಬೇಕಿತ್ತು. ಕೋವಿಡ್
ಹಿನ್ನೆಲೆಯಲ್ಲಿ ಈ ಕೆಲಸ ತಡವಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಈ ಎರಡು ಝೋನ್‌ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಡೆಮೋಗೆ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಈ ಯೋಜನೆ ಆರಂಭಿಸಿದ ಆರು ತಿಂಗಳಲ್ಲೇ 2 ಝೋನ್‌ನಲ್ಲಿ ದಿನವಿಡೀ ನೀರು ಕೊಡುತ್ತೇವೆಂದು ಅಧಿ ಕಾರಿಗಳು ಹೇಳಿದ್ದರು. ಆದರೆ, ಇಷ್ಟು ದಿನವಾದರೂ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಇಂಜಿನಿಯರ್‌ಗಳ ಕೆಲಸ ತೃಪ್ತಿಕರವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ. ಕಾವೇರಿ ಮಾತನಾಡಿ, ಜಲಸಿರಿ ಯೋಜನೆಗೆ ನೀಡಿರುವ ಟೈಮ್‌ಲೈನ್‌
ಪ್ರಕಾರ ಕೆಲಸ ಆದರೂ ನಿಗದಿತ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಿದರು. ಸಚಿವರು ಮಾತನಾಡಿ, ಜಾಗ ಸಿಕ್ಕಿಲ್ಲ, ಕೆಲಸಗಾರರಿಲ್ಲ ಎಂಬುದಾಗಿ ಸಬೂಬು ಹೇಳಬಾರದು. ಆ ಎಲ್ಲ ಸಮಸ್ಯೆ ಪರಿಹರಿಸಿಕೊಂಡು ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕು. 2 ಝೋನ್‌ನಲ್ಲಿ ಮಾತ್ರ ಡೆಮೋ ಏಕೆ, ಎಲ್ಲಾ ಕಾರ್ಯಾರಂಭ ಮಾಡಬೇಕು ಎಂದರು. ಪಾಲಿಕೆ ಮತ್ತು
ಈ ಯೋಜನೆಯ ಕಾರ್ಯಪಾಲಕ ಅಭಿಯಂತರರು ಗಂಭೀರವಾಗಿ ಪರಿಗಣಿಸಿ ಕೆಲಸ ಕೈಗೊಳ್ಳಬೇಕು. ಮುಂದಿನ ವಾರವೇ
ಈ ಎಲ್ಲ ಕೆಲಸಗಳನ್ನು ಪರಿಶೀಲಿಸುವೆ ಎಂದು ತಿಳಿಸಿದರು.

Advertisement

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಆಸ್ತಿ ತೆರಿಗೆ ವಸೂಲಾತಿಯಲ್ಲಿ 2018-19ರಲ್ಲಿ ಶೇ. 83, 2019-20ರಲ್ಲಿ ಶೇ. 83.49 ಪ್ರಗತಿ
ಸಾಧಿ ಸಿದರೆ 2020-21 ರಲ್ಲಿ 0.24ರಷ್ಟಿದೆ. ಈ ಬಾರಿ ಕೊರೊನಾ ಹಿನ್ನೆಲೆ ತೆರಿಗೆ ವಸೂಲಾತಿ ಕಡಿಮೆಯಾಗಿದೆ. ಆದ್ದರಿಂದ ಶೇ. 5 ರಷ್ಟು ವಿನಾಯಿತಿಯನ್ನು ಜೂನ್‌ ಮಾಹೆಯ ಅಂತ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು. ಪಾಲಿಕೆ ವಿರೋಧಪಕ್ಷ ನಾಯಕ ಎ.ನಾಗರಾಜ್‌ ತೆರಿಗೆ ರಿಬೇಟ್‌ಗೆ ಮುಂದಿನ ವರ್ಷದವರೆಗೆ ಅವ ಧಿ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್‌ ಮಾತನಾಡಿ, ಮಳಿಗೆಗಳನ್ನು ಸಬ್‌ ಲೀಸ್‌ ಕೊಡುತ್ತಿರುವುದರಿಂದ ಆದಾಯ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕೆಂದರು. ಪಿ.ಬಿ. ರಸ್ತೆಯ ಬದಿಗಳಲ್ಲಿ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ರಸ್ತೆ ಕಾಮಗಾರಿ ಅರ್ಧಕ್ಕೇ ಏಕೆ ನಿಲ್ಲಿಸಿದ್ದೀರಿ, ಆದಷ್ಟು ಶೀಘ್ರ ಕೆಲಸ ಪೂರ್ಣಗೊಳಿಸಬೇಕು. ಮುಂದಿನ ವಾರದಲ್ಲಿ ನಾನೇ ಖುದ್ದಾಗಿ ಪರಿಶೀಲಿಸುವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಟಾರ್‌,
ಮೇಯರ್‌ ಬಿ.ಜಿ. ಅಜಯಕುಮಾರ್‌, ಉಪ ಮೇಯರ್‌ ಸೌಮ್ಯ ನರೇಂದ್ರಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ  ಸನ್ನಕುಮಾರ್‌,
ಜಯಮ್ಮ ಆರ್‌. ಗೋಪಿ ನಾಯಕ್‌, ಎಸ್‌.ಟಿ. ವೀರೇಶ್‌, ಗೌರಮ್ಮ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next