Advertisement
ಮುಡಾ ನಿವೇಶನ ಹಂಚಿಕೆ ಪ್ರಕರಣದ ಸುಳಿಯಲ್ಲಿ ಸಿಎಂ ಹೆಸರು ಕೇಳಿಬರುತ್ತಿದ್ದಂತೆ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿತು. ಆ ಮೂಲಕ ಎದುರಾಳಿ ಪಕ್ಷಗಳ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಅಷ್ಟೇ ಅಲ್ಲ ರಾಜ್ಯಾದ್ಯಂತ ಎಲ್ಲ ಸಮುದಾಯಗಳ ಮುಖಂಡರಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿತ್ತು. ಇದು ತಕ್ಕಮಟ್ಟಿಗೆ ಧೈರ್ಯ ತಂದುಕೊಟ್ಟಿತ್ತು. ಆದರೆ ಈಚೆಗೆ ನಡೆದ ಬೆಳವಣಿಗೆಗಳು ಪಕ್ಷದಲ್ಲಿ ಬಿರುಕು ಮೂಡಿಸುವುದರ ಜತೆಗೆ ನಾಯಕತ್ವದ ಗೊಂದಲ ಹುಟ್ಟುಹಾಕುವಂತೆ ಮಾಡಿವೆ.
3ನೇ ಅತಿದೊಡ್ಡ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಎರಡೂ ಪ್ರದೇಶಗಳ ಜನ ಒಪ್ಪಿಕೊಂಡಿದ್ದಾರೆ. ರಾಜಕೀಯ ವಲಯದಲ್ಲಿ ಅವರಿಗೊಂದು “ಚರಿಷ್ಮಾ’ ಕೂಡ ಇದೆ. ಪಕ್ಷದಲ್ಲಿ ಹಿಡಿತವೂ ಇದೆ. ಇನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ 2ನೇ ಅತಿದೊಡ್ಡ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು, ರಾಜ್ಯದ ಎಲ್ಲ ಪ್ರದೇಶಗಳ ಜನರೂ ಅವರನ್ನು ಒಪ್ಪಿಕೊಳ್ಳದಿದ್ದರೂ ಹಳೆಯ ಮೈಸೂರು ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಪಕ್ಷದಲ್ಲಿ ಸಿದ್ದರಾಮಯ್ಯ ಬಿಟ್ಟರೆ, ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದ್ದ ಹೆಸರು ಡಿ.ಕೆ. ಶಿವಕುಮಾರ್. ಆದರೆ ಈಗ ಆ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಆರ್.ವಿ. ದೇಶಪಾಂಡೆ ಒಳಗೊಂಡಂತೆ ಹಲವು ಮುಖಂಡರು ಕಣ್ಣಿಟ್ಟಿದ್ದಾರೆ. ಈ ಗೊಂದಲದ ನಡುವೆಯೇ ಮುಡಾ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿದೆ. 2ನೇ ಹಂತದ ಪಾದಯಾತ್ರೆಗೆ ಚಿಂತನೆ ನಡೆಯುತ್ತಿದೆ. ರಾಜ್ಯಪಾಲರು ಈಗಾಗಲೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ವಿಪಕ್ಷಗಳು ಈ ವಿಚಾರವಾಗಿ ರಾಷ್ಟ್ರಪತಿ ಭವನದ ಬಾಗಿಲು ತಟ್ಟಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
Related Articles
ಒಂದು ದಿನದ ಹಿಂದಷ್ಟೇ ಸ್ವತಃ ಪಕ್ಷದ ಹಿರಿಯ ನಾಯಕರು, ಸಿಎಂ ಕುರ್ಚಿಗೆ ಸಂಬಂಧಿಸಿದಂತೆ ಹಿರಿಯ ಸಚಿವರು ಸೇರಿ 6 ಜನ ಮುಖಂಡರು ನೀಡುತ್ತಿರುವ ಹೇಳಿಕೆಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುತ್ತಿವೆ. ಅಷ್ಟೇ ಅಲ್ಲ ಆಡಳಿತದ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.
Advertisement